• ಕೆ.ಬಿ.ರಮೇಶನಾಯಕ
ಮೈಸೂರು: ಪಂಚ ಗ್ಯಾರಂಟಿ ಯೋಜನೆಗಳ ಮೂಲಕವೇ ಮತದಾರರ ಮನಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಚುನಾವಣೆಯಲ್ಲಿ ಹಗಲಿರುಳು ದುಡಿದ ಮುಖಂಡರು, ಕಾರ್ಯಕರ್ತರಿಗೆ ನಿಗಮ/ ಮಂಡಳಿ, ಪ್ರಾಧಿಕಾರಗಳಲ್ಲಿ ಅವಕಾಶ ಮಾಡಿಕೊಡು ತ್ತಿದ್ದರೂ, ಮೈಸೂರಿನಲ್ಲಿರುವ ಎರಡು ಸರ್ಕಾರಿ ಸಂಸ್ಥೆ ಗಳ ಅಧ್ಯಕ್ಷ ಸ್ಥಾನಗಳನ್ನು ಇನ್ನೂ ಭರ್ತಿ ಮಾಡಿಲ್ಲ.
ಒಂದೆರಡು ದಿನಗಳಲ್ಲಿ ನೇಮಕಾತಿ ಆದೇಶ ಹೊರ ಬೀಳಬಹುದೆಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಚಾತಕ ಪಕ್ಷಿಯಂತೆ ಕಾದಿದ್ದಾರೆ. ಅದರ ಲ್ಲಿಯೂ ದಸರಾ ಮಹೋತ್ಸವಕ್ಕೆ ಮುನ್ನವೇ ನೇಮಕ ಮಾಡಿದರೂ ಒಂದಿಷ್ಟು ಹೆಚ್ಚು ಸಡಗರದಿಂದ ಓಡಾಡ ಬಹುದೆಂಬ ಕನಸು ಕಟ್ಟಿಕೊಂಡಿದ್ದಾರೆ.
ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲ್ಯಾಕ್) ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿ ಕಾರದ ಅಧ್ಯಕ್ಷ ಸ್ಥಾನಗಳನ್ನು ಖಾಲಿ ಉಳಿಸಲಾಗಿದೆ. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ನ ಕೆಲ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಮತ್ತು ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಬಳಿ ಅಲವತ್ತುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ರಚಿಸಿತು. ನಂತರ, ನಿಗಮ ಮಂಡಳಿಗಳು, ಅಕಾಡೆಮಿಗಳು, ಪ್ರಾಧಿಕಾರ ಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಬೇಕೆಂಬ ಕೂಗು ಪಕ್ಷದ ಕಾರ್ಯ ಕರ್ತರಿಂದಲೇ ಕೇಳಿಬಂದಿತ್ತು.
ಆದರೆ, ಸಚಿವ ಸ್ಥಾನದಿಂದ ವಂಚಿತರಾದ ಶಾಸಕರಿಗೆ ನಿಗಮ/ಮಂಡಳಿ, ಪ್ರಾಧಿಕಾರ, ಅಕಾಡೆಮಿಗಳ ಅಧ್ಯಕ್ಷ ಸ್ಥಾನದ ಅವಕಾಶ ಮಾಡಿಕೊಡಬೇಕೆಂಬ ವಿಚಾರದಲ್ಲಿ ಗೊಂದಲಗಳು ಉಂಟಾಗಿ ಪ್ರಸ್ತಾಪವೇ ನನೆಗುದಿಗೆ ಬಿದ್ದಿತ್ತು. ನಂತರ ಶಾಸಕರು ಮತ್ತು ಮುಖಂಡರನ್ನು ಮಾರ್ಚ್ ತಿಂಗಳಲ್ಲಿ 50:50 ಅನುಪಾತದಲ್ಲಿ ನಿಯೋ ಜನೆ ಮಾಡಲು ಹೈಕಮಾಂಡ್ ಒಪ್ಪಿಗೆ ನೀಡಿದ್ದರಿಂದಾಗಿ ಮೈಸೂರು ಭಾಗದವರಿಗೂ ಅವಕಾಶ ಒಲಿದಿತ್ತು. ಆದರೆ, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಸ್ಥಾನಗಳಿಗೆ ಇದುವರೆಗೂ ಯಾರನ್ನೂ ನೇಮಕ ಮಾಡಿಲ್ಲ. ಖಾಲಿ ಇರುವ ಈ ಎರಡೂ ಸಂಸ್ಥೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಂತೆ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಒಂದು ಅಲ್ಪ ಸಂಖ್ಯಾತ, ಕುರುಬ, ವೀರಶೈವ- ಲಿಂಗಾಯತ ಸಮುದಾಯಕ್ಕೆ ಅವಕಾಶ ಮಾಡಿ ಕೊಟ್ಟಿದ್ದು, ದಲಿತ ಬಲಗೈ-ಎಡಗೈ, ಇತರೆ ಹಿಂದುಳಿದ ವರ್ಗಗಳಿಗೆ ಅವಕಾಶ ಮಾಡಿಕೊಡಬೇಕಿದೆ. ಆದರೆ, ಮುಡಾ ಹಗರ ಣದ ವಿಚಾರದಲ್ಲಿ ತಲೆ ಬಿಸಿ ಮಾಡಿಕೊಂಡಿರುವ ಸಿಎಂ ಯಾವ ನಿರ್ಧಾರ ತೆಗೆದಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯಕ್ಕೆ ಮೃಗಾಲಯಕ್ಕೆ ಅರಣ್ಯ ಸಚಿವರೇ ಅಧ್ಯಕ್ಷರು: 2023ರ ಮೇ ತಿಂಗಳಿಂದ ಖಾಲಿ ಇರುವ ಕಾರಣ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಸದ್ಯಕ್ಕೆ ಅರಣ್ಯ ಸಚಿವರೇ ಅಧ್ಯಕ್ಷರಾಗಿದ್ದಾರೆ. ಮೈಲ್ಯಾಕ್ ಉಸ್ತುವಾರಿಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಕಾರ್ಯದರ್ಶಿ ನಿರ್ವಹಿಸುತ್ತಿದ್ದಾರೆ.
ಈಗಾಗಲೇ ಅಧ್ಯಕ್ಷರ ನೇಮಕಾತಿ ಆಗಿರುವ ನಿಗಮ-ಮಂಡಳಿ: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಅಯೂಬ್ ಖಾನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಕೆ.ಮರೀಗೌಡ, ಕಾಡಾಗೆ ಪಿ. ಮರಿಸ್ವಾಮಿ ಅವರನ್ನು ಅಧ್ಯಕ್ಷರಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಇವರಲ್ಲದೆ, ಅರಣ್ಯ, ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಗೆ ಶಾಸಕ ಅನಿಲ್ ಚಿಕ್ಕಮಾದು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಟ್)ಕ್ಕೆ ರಮೇಶ್ ಬಾಬು ಬಂಡಿಸಿದ್ದೇಗೌಡ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮಕ್ಕೆ ಮಾಜಿ ಶಾಸಕ ಎಸ್.ಜಯಣ್ಣ, ಎಂಎಸ್ಐಎಲ್‌ಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.