ಸರಗೂರು ಕಡೆಯಿಂದ ಗ್ರಾಮಕ್ಕೆ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹ
ದಾಸೇಗೌಡ
ಸರಗೂರು : ತಾಲ್ಲೂಕಿನ ಮಾಗುಡಿಲು ಗ್ರಾಮದಲ್ಲಿ ಪ್ರತಿದಿನ ಕೆಎಸ್ಆರ್‌ಟಿಸಿ ಬಸ್ ಕೇವಲ 3 ಬಾರಿ ಮಾತ್ರ ಸಂಚರಿಸುವುದರಿಂದ ಮತ್ತು ಸಂಜೆಯ ನಂತರ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ.
ಗ್ರಾಮಕ್ಕೆ ಪ್ರತಿದಿನ ಕೆಎಸ್ ಆರ್ ಟಿಸಿ ಬಸ್ಸು ಮೂರು ಬಾರಿ ಬಂದು ಹೋಗುತ್ತದೆ. ಸಂಜೆ 5.30ರ ನಂತರ ಬಸ್ ವ್ಯವಸ್ಥೆ ಇಲ್ಲ. ದುಪ್ಪಟ್ಟು ಹಣ ನೀಡಿ ಆಟೋ, ಇನ್ನಿತರ ವಾಹನಗಳನ್ನು ಅವಲಂಬಿಸಬೇಕಿದೆ ಎನ್ನುವುದು ಗ್ರಾಮಸ್ಥರ ಆರೋಪ.
ಗ್ರಾಮಕ್ಕೆ ಸರಗೂರು ಕಡೆಯಿಂದ ಸೇತುವೆ ನಿರ್ಮಾಣವಾಗಬೇಕು. ಈ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ಸಂಬಂಧರಗಿನ ಶಾಸಕರಾಗಲಿ, ಸಂಸದರಾಗಲಿ ಗಮನಹರಿಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕುಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.
ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿ ವೇಳೆ ತುರ್ತು ಸಂದರ್ಭಗಳಲ್ಲಿ, ಅನಾರೋಗ್ಯಕ್ಕೀಡಾದರೆ ಮಾಗುಡಿಲು ಗ್ರಾಮದಿಂದ ಸರಗೂರಿಗೆ 12 ರಿಂದ 13ಕಿ.ಮೀ. ಬಳಸಿಕೊಂಡು ಹೋಗಬೇಕಾಗಿದೆ. ಇಲ್ಲಿಂದ ಶಾಲೆ ಮಕ್ಕಳು, ಸಾರ್ವಜನಿಕರು ಸರಗೂರಿಗೆ ನದಿ ದಾಟುವ ಮೂಲಕ ಹೋದರೆ ಕೇವಲ ಒಂದೂವರೆ ಕಿಲೋ ಮೀಟರ್ ಆಗುತ್ತದೆ. ಜತೆಗೆ 30ರಿಂದ 35 ಹಳ್ಳಿಗಳ ಜನರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಸೇತುವೆಯನ್ನು ಆದಷ್ಟು ಬೇಗ ನಿರ್ಮಿಸಬೇಕೆಂಬುದು ಗ್ರಾಮಸ್ಥರ ಆಗ್ರಹ.
ಚಾಮರಾಜನಗರ, ಗುಂಡ್ಲುಪೇಟೆ, ನಂಜನಗೂಡು ಕಡೆಯಿಂದ ಎಸ್.ಬೇಗೂರು ಮಾರ್ಗ ಅಥವಾ ಹುರ, ಹುಲ್ಲಹಳ್ಳಿ ಮಾರ್ಗದಲ್ಲಿ ಧರ್ಮಸ್ಥಳ ಇನ್ನಿತರ ಕಡೆಗೆ ಹೋಗುವ ಕೆಲ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸಿದರೆ ಎಸ್. ಬೇಗೂರು, ಬೀರ್ವಾಳ್, ಸರಗೂರು, ಹೆಚ್.ಡಿ.ಕೋಟೆ, ಹುಣಸೂರು ಮಾರ್ಗ ದಲ್ಲಿ ಪ್ರಯಾಣದ ಅವಧಿ, ಸಮಯ ಉಳಿಯುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಮಾಗಡಿಲು ಗ್ರಾಮಕ್ಕೆ ತನ್ನದೇ ಇತಿಹಾಸವಿದ್ದು, ಇಲ್ಲಿ ಪ್ರಸಿದ್ಧವಾದ ಶ್ರೀ ನೀಲಕಂಠೇಶ್ವರ ದೇವಸ್ಥಾನವಿದೆ. ಇದು 16ನೇ ಶತಮಾನದ ಚಾಲುಕ್ಯರ ಕಾಲದ ದೇವಸ್ಥಾನವಾಗಿದೆ. ಕಪಿಲಾ ನದಿ ಪಶ್ಚಿಮವಾಹಿನಿಯ ತೀರದಲ್ಲಿ ಈ ದೇವಸ್ಥಾನ ಇದೆ. ಇನ್ನಾದರೂ ಈ ಭಾಗಕ್ಕೆ ಆದಷ್ಟು ಬೇಗ ಸೇತುವೆ ನಿರ್ಮಿಸಬೇಕು.
-ರಾಜಣ್ಣ ಶಾಸ್ತ್ರಿ, ಮಾಗುಡಿಲು ನಿವಾಸಿ




