Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮರಗಳ ಬುಡ ಬಡಕಲು: ಒಡಲು ಒಣಕಲು

ಮೈಸೂರಿನ ವಿವಿಧೆಡೆ ಬೀಳುವ ಸ್ಥಿತಿಯಲ್ಲಿ ಒಣ ಮರಗಳು 

ಸಾಲೋಮನ್

ಮೈಸೂರು: ನಗರದಲ್ಲಿ ಶನಿವಾರ ಅನಿರೀಕ್ಷಿತವಾಗಿ ಧರೆಗೆ ಉರುಳಿದ ಬೃಹತ್ ಮರ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಮರದ ಕೆಳಗೆ ನಿಲ್ಲುವುದಕ್ಕೆ, ವಾಹನಗಳನ್ನು ನಿಲ್ಲಿಸುವುದಕ್ಕೆ ಸಾರ್ವಜನಿಕರು ಆತಂಕಪಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ನಗರದ ಪ್ರಮುಖ ಪ್ರದೇಶಗಳು ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಒಣಗಿದ, ಟೊಳ್ಳಾದ ಅಪಾಯಕಾರಿ ಮರಗಳು ಕಾದು ನಿಂತಿವೆ. ಆದರೆ ಇವುಗಳನ್ನು ತೆರವು ಮಾಡಲು ಅರಣ್ಯ ಇಲಾಖೆ ಆಗಲಿ ಮೈಸೂರು ಮಹಾನಗರ ಪಾಲಿಕೆ ಆಗಲಿ ಕೂಡಲೇ ಕ್ರಮ ಕೈಗೊಳ್ಳದೆ ಮೀನಮೇಷ ಎಣಿಸುತ್ತಿವೆ.

ನಗರದ ಮುಡಾ ರಸ್ತೆಯಲ್ಲೇ ಮರವೊಂದರ ಬುಡವೇ ಟೊಳ್ಳಾಗಿದ್ದು,ಯಾವ ಗಳಿಗೆಯಲ್ಲಿ ಬೇಕಾದರೂ ಉರುಳಿ ಬೀಳುವಸಾಧ್ಯತೆಗಳಿವೆ. ಕಣ್ಣೆದುರೇ ಅಪಾಯಕಾರಿ ಮರಗಳು ಇದ್ದರೂ ತೆರವು ಮಾಡುತ್ತಿಲ್ಲ.ಅಪಾಯಕಾರಿ ಮರಗಳನ್ನು ತೆರವು ಮಾಡಿಸಬೇಕಾದ ಅರಣ್ಯ ಇಲಾಖೆ ಹಾಗೂ ಮಹಾನಗರಪಾಲಿಕೆ ಪತ್ರಬರೆಯುವುದು, ಅನುಮತಿ ಪಡೆಯುವುದು, ಪಡೆದ ಅನುಮತಿ ಪಾಲಿಸಲು ಸಾಧ್ಯವಾಗದಿರುವಂತಹ ಗೊಂದಲಗಳಲ್ಲಿ ಸಿಲುಕಿವೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

ನಗರದಲ್ಲಿ ವಿವಿಧ ಬಡಾವಣೆಗಳ 60ಕ್ಕೂ ಹೆಚ್ಚು ಮಂದಿ ಮರಗಳನ್ನು ತೆರವು ಮಾಡಿ ಎಂದು ನಗರಪಾಲಿಕೆಗೆ ದೂರು ನೀಡಿದ್ದಾರೆ. ಕೆಲವು ಮರಗಳು ಮೇಲ್ನೋಟಕ್ಕೆ ಸದೃಢವಾಗಿರುವಂತೆ ಕಂಡು ಬಂದರೂ, ಒಳಗೆ ಟೊಳ್ಳಾಗಿ ಬಲಹೀನವಾಗಿದ್ದು, ಪಾಲಿಕೆ ಹಾಗೂ ಅರಣ್ಯ ಇಲಾಖೆ ಇವುಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ.

ಗುಲ್‌ಮೊಹರ್ ಮರ, ನೀರು ಕಾಯಿ ಮರ ಸೇರಿದಂತೆ ಒಳಭಾಗದಲ್ಲಿ ಟೊಳ್ಳಾದ ಹಲವಾರು ಮರಗಳಿದ್ದರೂ ತೆರವು ಮಾಡಲು ಆಗದೆ, ಕೈಕಟ್ಟಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಪಾಲಿಕೆಯದ್ದಾಗಿದೆ.

ಇದಲ್ಲದೆ ರಸ್ತೆಗೆ ಬಾಗಿರುವುದು, ಯಾವುದೇ ಕ್ಷಣದಲ್ಲಾದರೂ ಮುರಿದು ಬೀಳುವ ಸ್ಥಿತಿಯಲ್ಲಿರುವ ರಂಬೆಗಳಿರುವ ನೂರಾರು ಮರಗಳಿವೆ. ಒಣಗಿದ ರೆಂಬೆಗಳಿರುವ ಮರಗಳನ್ನು ತೆರವು ಮಾಡಬೇಕಾಗಿದೆ.

-ಕೆ.ಹರೀಶ್‌ ಗೌಡ, ಶಾಸಕರು, ಚಾಮರಾಜ ಕ್ಷೇತ್ರ

ಅಪಾಯಕಾರಿ ಮರಗಳ ತೆರವಿಗೆ ಕ್ರಮ ಕೆಲವು ಮರಗಳು ಒಣಗಿವೆ ಹಾಗೂ ಕೆಲವು ಹಳೆಯ ಮರಗಳು ಟೊಳ್ಳಾಗಿವೆ.

ಸರಸ್ವತಿಪುರಂನಲ್ಲಿ ಇಂಥದ್ದೇ ಒಂದು ಮರವನ್ನು ತೆರವು ಮಾಡಲು ನಾನು ಪಾಲಿಕೆಗೆ ಪತ್ರ ಬರೆದಿದ್ದೆ. ಆ ಕೆಲಸ ಆಗಿದೆ. ಮೊನ್ನೆ ಮರವೊಂದು ಆಟೋಗಳ ಮೇಲೆ ಬಿದ್ದಿದ್ದು, ಮಾಲೀಕರಿಗೆ ನಷ್ಟವಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು. ಆದಷ್ಟು ಬೇಗ ಇಂಥ ಮರಗಳನ್ನು ತೆರವು ಮಾಡಿ ಎಂದು ಅರಣ್ಯ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.

-ಮೋಹನ್ ಗೌಡ, ಸಹಾಯಕ ನಿರ್ದೇಶಕರು, ಮಹಾನಗರಪಾಲಿಕೆ ತೋಟಗಾರಿಕೆ ವಿಭಾಗ,

ಹರಾಜು ಹಾಕಲು ಅರಣ್ಯ ಇಲಾಖೆ ನಿರ್ದೇಶನ

ಮಹಾನಗರಪಾಲಿಕೆಯುಸಾರ್ವಜನಿಕರ ದೂರುಗಳನ್ನುಅರಣ್ಯ ಇಲಾಖೆಯ ಗಮನಕ್ಕೆ ತಂದಾಗಿದೆ. ಆ ಇಲಾಖೆಯ
ಅಧಿಕಾರಿಗಳು ತೆರವುಗೊಳಿಸಲು ಗುರುತಿಸಿದ ಪ್ರತಿ ಮರಕ್ಕೂ ದರವನ್ನು ನಿಗದಿಪಡಿಸುತ್ತಾರೆ. ಹರಾಜಿನಲ್ಲಿ ಆ ಬೆಲೆಗೆ ಯಾರೂ ಖರೀದಿಸುತ್ತಿಲ್ಲ. ಹೀಗಾಗಿ ಮರ ತೆರವು ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ಅಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಳೆ ಬೀಳುತ್ತಿದ್ದ ಸಂದರ್ಭದಲ್ಲಿ ಕೆಲ ಮರಗಳು ಹಾಗೂ ರೆಂಬೆಗಳನ್ನು ತೆರವು ಮಾಡಿದ್ದೆವು. ಒಣ ಮರಗಳನ್ನು ಹುಡುಕಿ ತೆರವು ಕಾರ್ಯಾಚರಣೆ ನಡೆಸುತ್ತೇವೆ.

-ಫೈರೋಜ್ ಖಾನ್, ನಗರಪಾಲಿಕೆ ಮಾಜಿ ಸದಸ್ಯ

ರಾಜೀವ್‌ನಗರದ ನಿಮ್ರಾ ಮಸೀದಿ ಮುಖ್ಯ ರಸ್ತೆಯಲ್ಲಿ ದೊಡ್ಡ ಮರವೊಂದು ರಸ್ತೆಯ ಅರ್ಧ ಭಾಗಕ್ಕೆ ಚಾಚಿಕೊಂಡಿದ್ದು, ತುಂಬಾ ಅಪಾಯಕಾರಿಯಾಗಿದೆ. ಈ ರಸ್ತೆಯಲ್ಲಿ ದೊಡ್ಡ ವಾಹನಗಳು ಓಡಾಡಲು ಆಗುತ್ತಿಲ್ಲ. ಮಳೆ ಗಾಳಿ ಬೀಸಿದರೆ ರೆಂಬೆ ನೆಲಕ್ಕೆ ತಾಗುವಷ್ಟರ ಮಟ್ಟಿಗೆ ಮರ ಬಾಗುತ್ತದೆ. ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ. ಇಲ್ಲಿ ಒಣ ಮರವೂ ಇದೆ. ಅದನ್ನೂ ತೆರವು ಮಾಡುತ್ತಿಲ್ಲ.

-ಭಾನು ಮೋಹನ್, ಪರಿಸರವಾದಿ

ಹೊಂದಾಣಿಕೆ ಕೊರತೆ

ಅರಣ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯವರ ನಡುವೆ ಹೊಂದಾಣಿಕೆ ಇಲ್ಲ. ಅಪಾಯಕಾರಿ ಮರಗಳನ್ನು ತೆರವು ಮಾಡಿಸುವ ಬಗ್ಗೆ ನಾನೂ ಅನೇಕ ಸಾರಿ ದೂರು ಕೊಟ್ಟಿದ್ದೇನೆ. ಇವರು ತೆರವು ಮಾಡದೆ ಏನಾದರೊಂದು ಸಬೂಬು ಹೇಳುತ್ತಾರೆ. ನಗರ ಪ್ರದೇಶದಲ್ಲಿರುವ ಗುಲ್ ಮೊಹರ್ ಮರಗಳು ಟೊಳ್ಳಾಗಿರುತ್ತವೆ. ಅವುಗಳನ್ನುತೆರವು ಮಾಡಲು ಹೇಳಿದ್ದೇವೆ. ಆದರೂ ಮಾಡಿಲ್ಲ. ಮುಡಾ ಮುಂಭಾಗದಲ್ಲೇ ಅರ್ಧ ಭಾಗ ಕೊರೆಯಲ್ಪಟ್ಟಿರುವ ಮರ ಇದೆ. ಅದನ್ನು ತೆರವು ಮಾಡಿ ಎಂದು ಕೇಳಿಕೊಂಡರೂ ಯಾರೂ ಗಮನ ಹರಿಸುತ್ತಿಲ್ಲ.

-ಇಂದ್ರೇಶ್, ರಾಜೀವ್ ನಗರ

ಮೈಸೂರಿನ ರಾಜೀವನಗರದ ಅಲ್ಬದರ್ ವೃತ್ತದಿಂದ ನಿಮ್ರಾ ಮಸೀದಿ ಕಡೆಗೆ ಹೋಗುವ ಮುಖ್ಯ ರಸ್ತೆಯ ಮಗ್ಗುಲಲ್ಲೇ ಒಣಗಿ ನಿಂತ ಮರ ಇದೆ.

ಇದರ ಸಮೀಪದಲ್ಲಿ ಓಡಾಡುವುದಕ್ಕೆ ಜನರು ಭಯ ಬೀಳುತ್ತಾರೆ. ಈ ಮರದ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮರದ ಕೆಳಗೆ ಎಳನೀರು ಮಾರುತ್ತಾರೆ. ಅನೇಕ ಗ್ರಾಹಕರು ಅಲ್ಲೇ ನಿಂತು ಎಳ ನೀರು ಕುಡಿಯುತ್ತಾರೆ. ಅಂತಹ ಸಂದರ್ಭದಲ್ಲಿ ಮರ ಬಿದ್ದರೆ ಭಾರೀ ಅನಾಹುತ ಆಗುತ್ತದೆ. ಈಗಲೂ ಈ ಭಾಗದಲ್ಲಿ ಜನರು ಆತಂಕದಿಂದ ತಿರುಗಾಡುತ್ತಾರೆ. ಹಾಗಾಗಿ ಈ ಮರವನ್ನು ಆದಷ್ಟು ಬೇಗ ತೆರವು ಮಾಡುವುದು ಒಳ್ಳೆಯದು.

ಒಣ ಮರ-ರೆಂಬೆಗಳು ಮನೆ ಸಮೀಪ ಅಥವಾ ರಸ್ತೆ ಬದಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಆತಂಕ ನಿಮಗಿದೆಯೆ? ಕೂಡಲೇ ಆ ಮರದ ಫೋಟೊ ತೆಗೆದು, ವಿಳಾಸದೊಂದಿಗೆ ಪತ್ರಿಕೆಗೆ ಕಳುಹಿಸಿ. ಮೊಬೈಲ್‌ ಸಂಖ್ಯೆ-9071777071

 

Tags:
error: Content is protected !!