Mysore
26
broken clouds

Social Media

ಸೋಮವಾರ, 23 ಮಾರ್ಚ್ 2026
Light
Dark

ಜಿಲ್ಲೆಯಲ್ಲಿ ಜಾನುವಾರುಗಳ ಮೇವು-ನೀರಿಗಿಲ್ಲ ಬರ!

ಮುಂದಿನ 34 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು; ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯೂ ದೂರ

ಕೆ.ಬಿ.ರಮೇಶ ನಾಯಕ

ಮೈಸೂರು : ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಜಾನುವಾರುಗಳ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೈಗೊಂಡ ಪೂರ್ವಸಿದ್ಧತೆಯ ಪರಿಣಾಮ ಜಿಲ್ಲೆಯಲ್ಲಿ ಸದ್ಯಕ್ಕೆ ಮೇವಿನ ಕೊರತೆ ಕಂಡುಬರುತ್ತಿಲ್ಲ.

ಜಿಲ್ಲೆಯಲ್ಲಿ ಪ್ರಸ್ತುತ 34 ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನು ಇದೆ. ಒಂದು ವೇಳೆ ಪರಿಸ್ಥಿತಿ ಕೈ ಮೀರಿದರೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಂಡಿದೆ. ರೈತರು ಸಾಕಷ್ಟು ಪ್ರಮಾಣದಲ್ಲಿ ಭತ್ತ, ರಾಗಿ ಹುಲ್ಲು, ಜೋಳದ ಕಡ್ಡಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಇದರ ಜತೆಗೆ ರೈತರಿಗೆ ಈ ಹಿಂದೆ ನೀಡಿದ್ದ ಮೇವಿನ ಮರದ ಸಸಿಗಳನ್ನು ರೈತರು ತಮ್ಮ ಹೊಲದ ಬದುಗಳಲ್ಲಿ ಬೆಳೆಸಿದ್ದು, ಈ ಸಸಿಗಳು ಮರಗಳಾಗಿ ಬೆಳೆದು ನಿಂತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿ ಮೇವು ಸಹ ಜಾನುವಾರುಗಳಿಗೆ ದೊರೆಯಲಿದೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪ್ರಸ್ತುತ ರೈತರ ಮನೆಗಳಿಗೆ ಭೇಟಿ ನೀಡಿ ಲಸಿಕಾ ಕಾರ್ಯ ಕೈಗೊಂಡಿದ್ದಾರೆ. ಜತೆಗೆ ಮೇವು ಹಾಗೂ ನೀರಿನ ಕೊರತೆಯ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ. ಯಾವುದೇ ಒಂದು ಗ್ರಾಮದಲ್ಲಿ ಮೇವಿನ ಕೊರತೆಕಂಡುಬಂದರೆ ತಕ್ಷಣ ಸ್ಪಂದಿಸಲು ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೈತರಿಗೆ ಇಲಾಖೆಯಿಂದ ಮೇವಿನ 1,500 ಮಿನಿ ಕಿಟ್ ವಿತರಣೆ ಮಾಡಲಾಗಿದೆ.

ತೊಟ್ಟಿ ನಿರ್ಮಾಣ
ಜಾನುವಾರುಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ. ಎದುರಾಗಬಾರದು ಎಂಬ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ಈ ತೊಟ್ಟಿಗಳಿಗೆ ಸಾಕಾಗುವಷ್ಟು ನಿತ್ಯ ನೀರು ತುಂಬಿಸಿ ಜಾನುವಾರು ಗಳಿಗೆ ನೀರು ಒದಗಿಸಲಾಗುತ್ತಿದೆ.

ನೀರಿನ ಸಮಸ್ಯೆ ನಿಭಾಯಿಸಲು ಸಿದ್ಧತೆ: ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳದಂತೆ ಕ್ರಮವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್‌ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ನಿರ್ದೇಶನ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಗ್ರಾಮಗಳನ್ನು ಗುರುತಿಸಿ ತಕ್ಷಣ ಕೊಳವೆ ಬಾವಿ ಕೊರೆಸುವ ಹಾಗೂ ಕೊಳವೆ ಬಾವಿ ದುರಸ್ತಿ ಮಾಡುವ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಸದ್ಯಕ್ಕೆ ಯಾವುದೇ ಗ್ರಾಮಗಳಿಗೂ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗದೆ ಇದ್ದರೂ ಬಿಸಿಲಿನ ತಾಪಮಾನ ಹೆಚ್ಚಾದರೆ ಏಪ್ರಿಲ್ ತಿಂಗಳಿನಿಂದ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳದಂತೆ ಕ್ರಮ ವಹಿಸಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

ಮೈಸೂರು ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೇವು ದಾಸ್ತಾನು ಇದೆ. ಪ್ರಸ್ತುತ ಜಿಲ್ಲೆ ಯಲ್ಲಿ 34 ವಾರಗಳಿಗೆ ಸಾಕಾಗು ವಷ್ಟು ಮೇವು ದಾಸ್ತಾನು ಇದೆ. ಜಾನುವಾರುಗಳಿಗೆ ಹಸಿ ಮೇವು ದೊರೆಯುವಂತೆ ಮಾಡಲು ಮೇವಿನ ಕಿಟ್‌ಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಅಲ್ಲದೆ, ಈ ಹಿಂದೆ ನೀಡಿದ ಮೇವಿನ ಸಸಿಗಳು ಮರಗಳಾಗಿ ಬೆಳೆದಿದ್ದು, ಆ ಮರಗಳಿಂದ ಮೇವು ದೊರೆಯುತ್ತದೆ. ಪ್ರಸಕ್ತ ವರ್ಷ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಸುರಿದ ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ ಹಸಿರು ಕಾಣಿಸಿಕೊಂಡಿರುವುದು ವರದಾನವಾಗಿದೆ. ಸದ್ಯದ ಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಇಲಾಖೆ ಅಧಿಕಾರಿಗಳು ಪ್ರತಿ ರೈತರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. -ಡಾ.ಸಿ.ನಾಗರಾಜು ಉಪ ನಿರ್ದೆಶಕ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ

ತಾಲ್ಲೂಕುವಾರು ಜಾನುವಾರುಗಳ ವಿವರ ಮೈಸೂರು ಜಿಲ್ಲೆಯಲ್ಲಿ ದನ, ಎಮ್ಮೆ, ಕುರಿ, ಮೇಕೆ, ಹಂದಿ ಸೇರಿದಂತೆ ಒಟ್ಟು 9,33,298
ಜಾನುವಾರುಗಳು ಇವೆ.

 

ತಾಲ್ಲೂಕುವಾರು ಮಾಹಿತಿ ಇಂತಿವೆ

ಜಾನುವಾರುಗಳ ಸಂಖ್ಯೆ

ಮೈಸೂರು
1,45,809

ನಂಜನಗೂಡು
1,67,465

ಕೆ.ಆರ್.ನಗರ
1,32,613

ಹುಣಸೂರು
1,16,616

ಪಿರಿಯಾಪಟ್ಟಣ
1,16,365

ತಿ.ನರಸೀಪುರ
1,18,199

ಎಚ್.ಡಿ.ಕೋಟೆ
91,032

ಸರಗೂರು
45,199

 

Tags:
error: Content is protected !!