Mysore
24
clear sky

Social Media

ಗುರುವಾರ, 15 ಜನವರಿ 2026
Light
Dark

ನೇಗಿಲಯೋಗಿಯ ನಿಜದ ಸಂಭ್ರಮ ಸಂಕ್ರಾಂತಿ

ಗೌರೀಶ್‌ ಕಪನಿ

ಹುಡುಗನಾದ ನನ್ನನ್ನು ಅಮ್ಮ ಸಂಕ್ರಾಂತಿಯಲ್ಲಿ ಸೀರೆ ಅಥವಾ ಲಂಗ ದಾವಣಿ ಉಡಿಸಿ ಎಳ್ಳು-ಬೆಲ್ಲ ಬೀರಲು ಕಳುಹಿಸುತ್ತಿದ್ದರು! ಹಾಗಾಗಿ ಸಂಕ್ರಾಂತಿಯು ನನ್ನಲ್ಲಿ ಅಚ್ಚಳಿಯದೇ ಉಳಿದಿದೆ. ನನ್ನನ್ನು ಹುಡುಗಿಯಂತೆ ಸಿಂಗರಿಸಿ ಎಷ್ಟು ಖುಷಿಕಾಣುತ್ತಿದ್ದರೊ ಗೊತ್ತಿಲ್ಲ! ನಾನೂ ಮುಜುಗರವಿಲ್ಲದೆ ಖುಷಿ ಖುಷಿಯಾಗೇ ಎಳ್ಳುಬೀರಿ ಬರುತ್ತಿದ್ದೆ!

ತಾಯಿಯಂತೆ ಸಲುಹಿದ ನೆರೆಮನೆಯ ‘ಬೆಂಗಳೂರಮ್ಮ’ ಅವರ ಮನೆಯಲ್ಲಿ ವರ್ಷಪೂರ್ತಿ ಹಾಲು ಕೊಡುವ ಹಸುಗಳಿದ್ದವು. ದಿನವೂ ದೊಡ್ಡ ಲೋಟದಲ್ಲಿ ಅಲ್ಲೇ ಕರೆದು ಕೊಡುತ್ತಿದ್ದ ಬೆಚ್ಚನೆಯ ನೊರೆ ಹಾಲಿನ ಘಮ-ರುಚಿ ಇನ್ನೂ ನನ್ನ ಮೂಗು-ನಾಲಗೆಯ ಮೇಲಿದೆ.

ನನಗೆ ಹಾಲು ಕೊಡುತ್ತಿದ್ದ ಆ ಹಸುಗಳನ್ನು ಸಂಕ್ರಾತಿಗೆ ಸಿಂಗಾರ ಮಾಡಲು ಸೇರಿಕೊಳ್ಳುತ್ತಿದೆ. ಮೈಗೆ ಹರಿಶಿಣ ತಿಕ್ಕಿ, ಬಣ್ಣದ ಪೇಪರ್ ಪಟ್ಟಿಗಳನ್ನು ಅಂಟಿಸಿ ಹಾಗೂ ಪೇಪರ್ ಫೋಲ್ಡ್‌ನಿಂದ ವಿನ್ಯಾಸ ಮಾಡಿ ಮಡಿಚಿಟ್ಟ ಕಡ್ಡಿ ಎಳೆದು ಬಿಚ್ಚಿದರೆ ವೃತ್ತಾಕಾರವಾಗಿ ಬಿಡಿಸಿಕೊಂಡು ತರಹೇವಾರಿ ಬಣ್ಣದ ಸೂರ್ಯನಂತೆ ಕಾಣುವುದನ್ನು ಎರಡೂ ಕೊಂಬುಗಳ ಮಧ್ಯೆ ಕಟ್ಟಿ ಸಿಂಗರಿಸುತ್ತಿದ್ದೆವು. ಕೊಂಬಿಗೆ ಬಲೂನು, ಬಾಲಕ್ಕೆ ಮೊಗ್ಗಿನ ಜಡೆ ಮತ್ತು ಇನ್ನೂ ತರಹೇವಾರಿ ವಿನ್ಯಾಸಗಳು. ಕಿಚ್ಚಾಯಿಸುವ ಮುನ್ನ ಎಲ್ಲ ಸಿಂಗಾರಗೊಂಡ ಜಾನುವಾರುಗಳನ್ನು ಊರಲ್ಲಿ ಮೆರವಣಿಗೆ ಮಾಡುವಾಗ ನಾವು ಕುಣಿಯುತ್ತಾ ಮೆರವಣಿಗೆಯಲ್ಲಿ ಸಂಭ್ರಮಿಸುತ್ತಿದ್ದೆವು.

ಆಗೆಲ್ಲಾ ಊರಲ್ಲಿ ಒಂದೇ ಕಡೆ ಬೆಂಕಿ ಹಾಕುತ್ತಿದ್ದರು, ಎಲ್ಲಾ ಊರಿನ ಜಾನುವಾರುಗಳು ಅಲ್ಲೇ ಸೇರುತ್ತಿದ್ದವು. ಈಗ ಬೀದಿಗೊಂದರಂತೆ ಅಲ್ಲಲ್ಲೇ ವಿಭಜನೆಗೊಂಡಿವೆ!

ರಾಶಿ ರಾಶಿ ಹುಲ್ಲಿನ ಮೆದೆ ಹೇರಿ ಬೆಂಕಿ ಕೊಟ್ಟಾಗ ನನ್ನ ಕಣ್ಣಲ್ಲಿ ಕುತೂಹಲ ಮತ್ತು ಭಯ. ಸಮೀಪದ ಕಟ್ಟಡ ಏರಿ ಕೂತು ನೋಡುತ್ತಿರುವ ನನಗೆ ತಟ್ಟುತ್ತಿದ್ದ ಬೆಂಕಿಯ ಕಾವು ಹಾಗೇ ಇದೆ. ಜಾನುವಾರುಗಳು ಬೆದರುವಾಗ, ಎಗರುವಾಗ ಸಿಡಿವ ಕೆಂಡ, ಸಿಳ್ಳು ಕೇಕೆಯೊಂದಿಗೆ ಇನ್ನೂ ರಂಗೇರುತ್ತಿತ್ತು. ನಾಟಿ ಎತ್ತುಗಳು ಎಗರುವ ವೈಭವ ನೋಡಲು ಸುಂದರ. ಸೀಮೆ ಹಸುಗಳು ಮಂದ, ಕಡಸುಗಳು ಬೆದರಿ ಆಚೀಚೆ ಹಾರಿ ಓಡುವಾಗ ಮೈಮೇಲೆ ಬಂದಂತಾಗಿ ಭಯವಾಗುತ್ತಿತ್ತು. ಜಾನುವಾರುಗಳ ಸುಟ್ಟಕೂದಲ ವಾಸನೆ ಹೊಗೆಯೊಂದಿಗೆ ಸೇರಿ ಬರುವ ಘಾಟಿಗಾಗಿ ಮತ್ತೆ ಮುಂದಿನ ಸಂಕ್ರಾಂತಿಗೇ ಕಾಯಬೇಕು!

ಸಂಕ್ರಾಂತಿ ಎಂದರೆ ಜಾನುವಾರುಗಳ ಸಿಂಗಾರ – ಕಿಚ್ಚು ಹಾಯಿಸುವುದು ಅಷ್ಟೇ ಅಲ್ಲದೆ ಸಂಕ್ರಾಂತಿಯು ರೈತರ ಒಕ್ಕಣೆ ಕೆಲಸದಿಂದ ಶುರು. ಕಣ ಮಾಡುವ ಪರಿಪಾಠ ಈಗೆಲ್ಲಾ ಭಾಗಶಃ ನಿಂತಿದ್ದು, ರಸ್ತೆಯಲ್ಲೇ ಒಕ್ಕಣೆ ಮುಗಿಸುವುದು ರೈತರು ಕಂಡುಕೊಂಡ ಸುಲಭ ಮಾರ್ಗವೊ ದುರ್ಮಾರ್ಗವೊ. . . ಏನನ್ನಬೇಕೊ ಗೊತ್ತಿಲ್ಲ. ಆದರೆ ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ನೋಡಿದಾಗೆಲ್ಲಾ ಬಾಲ್ಯದಲ್ಲಿ ಕಂಡ ಹೊಲದಲ್ಲಿನ ಕಣ ಸಿದ್ಧತೆ ಕಣ್ಣ ಮುಂದೆ ಬರುತ್ತದೆ.

ಉರುಳುಗಲ್ಲನ್ನು ಎತ್ತಿಗೆ ಕಟ್ಟಿ ತಿರುಗಿಸಿ ಸಮತಟ್ಟು ಮಾಡಿ ಗಂಜಲ ಸಾರಿಸಿ, ಒಪ್ಪ ಮಾಡಿ, ಬೆಳೆ ಬಡಿದು, ತೂರಿ ರಾಶಿ ಹಾಕಿದ ಧಾನ್ಯಗಳ ಗುಡ್ಡೆಗೆ ಹೂ ಇಟ್ಟು ಕಣದಲ್ಲಿ ಮಾಡುತ್ತಿದ್ದ ಪೂಜೆ ಈಗ ಭಾಗಶಃ ಮಾಯವಾಗಿದೆ. ಕಣದ ಮೂಲೆಯಲ್ಲಿ ಗೋಲಿ ಆಡುವುದು, ಹುಲ್ಲಿನ ಮೆದೆಯಲ್ಲಿ ಹುದುಗುವುದು ಮತ್ತು ಇಂದು ಅನಾಥವಾಗಿರುವ ಉರುಳುಗಲ್ಲುಗಳ ಮೇಲೆ ನೆಗೆದು ಕುಣಿದಿದ್ದು ಈಗ ನೆನಪು ಮಾತ್ರ.

ಕಣ ಮಾಡುವ ಕಾಯಕ ರೈತನ ಕೌಶಲಕ್ಕೆ ಸಾಕ್ಷಿಯಾಗಿತ್ತು. ಈಗ ದೈತ್ಯ ಮಷೀನು ಹೊಲದಲ್ಲಿ ನುಗ್ಗಿ ಕಟಾವು ಮಾಡಿ, ಕಾಳು ಬಡಿದು, ಚೀಲಕ್ಕೆ ತುಂಬಿ, ಬಾಯಿ ಹೊಲಿದು, ಹುಲ್ಲನ್ನು ಸುತ್ತಿ ಮಡಿಚಿಟ್ಟು ಮಧ್ಯಾಹ್ನಕ್ಕೆಲ್ಲ ಹೊರಟುಹೋಗಿರುತ್ತದೆ! ಈ ಮಷೀನುಗಳ ಲೋಕದಲ್ಲಿ ಒಕ್ಕಣೆಯ ಪದ್ಧತಿ ಬದಲಾದರೂ ಹಬ್ಬದ ಆಚರಣೆಗಳು ಹಾಗೆಯೇ ಮುಂದುವರಿದಿವೆ. ಸಂಕ್ರಾಂತಿಯು ನಿಜದ ನೆಲ ಮೂಲ ಸಂಸ್ಕ ತಿ ಮತ್ತು ಆಚರಣೆಯಾಗಿದೆ.

ಇದು ನೆಲದ ಯೋಗಿಯ ಸಂಭ್ರಮ! ತಾನು ಬೆವರು ಸುರಿಸಿ ಬೆಳೆದ ಫಸಲು ಮನೆ ಸೇರುವ ಸಂಭ್ರಮ. ವ್ಯವಸಾಯ ಪ್ರಧಾನ ದೇಶವಾದಂಥ ಭಾರತಕ್ಕೆ ಸಂಕ್ರಾಂತಿಯೇ ಶ್ರೇಷ್ಠ ಆಚರಣೆ. ಸಮಾನತೆ ಮತ್ತು ಸಹಬಾಳ್ವೆಯಲ್ಲಿ ಒಕ್ಕಲು ಮಾಡುವ ರೈತ, ದುಂಬಿ, ಪ್ರಾಣಿ – ಪಕ್ಷಿ, ಗಾಳಿ, ನೀರು, ನೆರೆಹೊರೆಯವರ ಕೊಡುಕೊಳ್ಳುವಿಕೆ ಮತ್ತು ಪರಿಸರದ ಸಹಕಾರದಿಂದ ಪಡೆದ ಫಸಲನ್ನು ಅರಿತು – ಅರಿಯದೇ ಎಲ್ಲರೊಂದಿಗೆ ಹಂಚಿ ತಾನೂ ಮನೆಗೆ ಹೊಯ್ದು ಎಲ್ಲರೂ ಸೇರಿ ಸಂಭ್ರಮಿಸುವರು. ಸಂಕ್ರಾಂತಿ ಹಬ್ಬವು ರೈತ, “ದುಡಿಯುವ” ವರ್ಗದಲ್ಲಿರುವ ಸಮಾನತೆ ಮತ್ತು ಸಹಬಾಳ್ವೆಗೆ ಸಾಕ್ಷಿ!

ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನ್ನಷ್ಟೇ ಆಡದೆ, ಸಂಕ್ರಾಂತಿಯು ಸಾರುವ ಸಮಾನತೆ ಮತ್ತು ಸಹಬಾಳ್ವೆಯ ಪಾಠ, ನಮ್ಮೆಲ್ಲರಿಗೂ ಮನನವಾಗಲಿ.

Tags:
error: Content is protected !!