ಸೋಮವಾರಪೇಟೆ: ತಾಲ್ಲೂಕಿನ ರೈತರು ಹಲವು ದಶಕಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ಸಿ ಮತ್ತು ಡಿ (ಕೃಷಿಗೆ ಯೋಗ್ಯವಲ್ಲದ ಭೂಮಿ) ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಕಾಯ್ದೆ ಮೂಲಕ ಅರಣ್ಯ ಇಲಾಖೆಗೆ ಹಸ್ತಾಂತರ ಕಾರ್ಯ ನಡೆಯುತ್ತಿದ್ದು, ರೈತರು ಕಷ್ಟಪಟ್ಟು ಕೃಷಿ ಮಾಡುತ್ತಿರುವ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಗ್ರಾಮಗಳು, ಗರ್ವಾಲೆ ಗ್ರಾ. ಪಂ. ವ್ಯಾಪ್ತಿಯ ಬಹುತೇಕ ರೈತರು ಸಿ ಮತ್ತು ಡಿ ಭೂಮಿಯಲ್ಲೇ ಕಾಫಿ, ಕಾಳುಮೆಣಸು, ಭತ್ತ ಇನ್ನಿತರ ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಶೇ. ೭೦ರಷ್ಟು ರೈತರು ಎರಡರಿಂದ ನಾಲ್ಕೈದು ಎಕರೆ ವರೆಗಿನ ಸಿ ಮತ್ತು ಡಿ ಭೂಮಿಯಲ್ಲಿ ಕೃಷಿ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ತಮ್ಮ ಅನುಭವದಲ್ಲಿರುವ ಈ ಭೂಮಿಯನ್ನು ಕಳೆದುಕೊಂಡರೆ ನಿರ್ಗತಿಕರಾಗುತ್ತೇವೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಸಿ ಮತ್ತು ಡಿ ವರ್ಗೀಕರಣದ ಅಡಿಯ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಿರುವ ಪ್ರದೇಶ, ತೋಟ-ಗದ್ದೆಗಳಿರುವ ಜಾಗಗಳೂ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸಮಸ್ಯೆ ಗಂಭೀರತೆ ಪಡೆದುಕೊಂಡಿದೆ. ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ ಹೋಬಳಿಯಲ್ಲಿಯೂ ಸಿ ಮತ್ತು ಡಿ ಭೂಮಿಯಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ.
ಶಾಂತಳ್ಳಿ ಹೋಬಳಿಯಲ್ಲಿ ಅನೇಕ ವರ್ಷಗಳಿಂದಲೂ ಸಿ ಮತ್ತು ಡಿ ಕೃಷಿ ಭೂಮಿಗೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಅರಣ್ಯ ಭೂಮಿ ಎಂಬ ನೆಪದಲ್ಲಿ ಸರ್ಕಾರ ಹಕ್ಕುಪತ್ರ ನೀಡಿಲ್ಲ. ಹಕ್ಕುಪತ್ರಗಳಿಲ್ಲದೆ ಕೃಷಿಕರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ.
ಏನಿದು ವಿವಾದ. . ?
ಕೂರ್ಗ್ ಲ್ಯಾಂಡ್ ರೆಗ್ಯೂಲೇಶನ್ ೧೮೮೯ರ ಕಾಯ್ದೆ ಪೂರ್ವದಲ್ಲಿ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ರೈತರಿಗೆ ಹಿಡುವಳಿ ಜಮೀನನ್ನು ನೀಡಲಾಗಿತ್ತು. ಉಳಿದಂತೆ ದಟ್ಟವಾದ ಅರಣ್ಯ, ಕಾಡು, ಬೆಟ್ಟಗುಡ್ಡ ಪ್ರದೇಶಗಳನ್ನು ಅರಣ್ಯ ಜಮೀನು ಎಂದು, ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಸರ್ಕಾರದ ಪೈಸಾರಿ ಜಮೀನು ಎಂದು ಗುರುತಿಸಲಾಗಿತ್ತು. ಜನಸಂಖ್ಯೆ ಬೆಳೆದಂತೆ ಪೈಸಾರಿ ಜಮೀನಿನಲ್ಲಿ ಒತ್ತುವರಿ ಮಾಡಿಕೊಂಡು ಭೂ ಮಂಜೂರಾತಿ ಕಾಯ್ದೆಯಡಿ ಅನೇಕ ರೈತರು ಹಕ್ಕುಪತ್ರ ಮಾಡಿಸಿಕೊಂಡಿದ್ದಾರೆ.
ಉಳಿದವರ ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿವೆ. ೧೯೭೮ರಲ್ಲಿ ಸರ್ಕಾರದ ಅದೇಶದಂತೆ ಸರ್ಕಾರದ ಹೆಸರಿನಲ್ಲಿ ದಾಖಲಾಗಿರುವ ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿಯನ್ನು ಸಿ ಮತ್ತು ಡಿ ಭೂಮಿ ಎಂದು ವರ್ಗೀಕರಿಸಿ ಅಂತಹ ಜಮೀನುಗಳನ್ನು ಮಾತ್ರ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕೆಂದು ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಅಧೀನ ಕಚೇರಿಯ ಅಧಿಕಾರಿಗಳು ಮತ್ತು ನೌಕರರು ಸರ್ಕಾರದ ಹೆಸರಲ್ಲಿರುವ ಎಲ್ಲ ಪೈಸಾರಿ ಜಮೀನುಗಳನ್ನು ಸ್ಥಳ ಪರಿಶೀಲನೆ ಮಾಡದೆ ಪಟ್ಟಿಮಾಡಿ ಸಿ ಮತ್ತು ಡಿ ಜಮೀನುಗಳೆಂದು ರಾಜ್ಯ ಸರ್ಕಾರಕ್ಕೆ ವರದಿ ಮಾಡಿದ್ದಾರೆ. ವೈಜ್ಞಾನಿಕ ಸರ್ವೇ ಮಾಡದೆ, ಸಂಪೂರ್ಣವಾಗಿ ಪೈಸಾರಿಯ ಭೂಮಿಯನ್ನು ಸಿ ಮತ್ತು ಡಿ ಎಂದು ವರದಿ ನೀಡಿರುವುದರಿಂದ ಸಮಸ್ಯೆ ಎದುರಾಗಿದೆ ಎಂಬುದು ರೈತರ ಆರೋಪ.
ಸರ್ಕಾರ ಸಿ ಮತ್ತು ಡಿ ಭೂಮಿಯ ಸಮಸ್ಯೆ ಬಗೆಹರಿಸಲು ಕೂಡಲೆ ಉನ್ನತಮಟ್ಟದ ಸಮಿತಿ ರಚಿಸಬೇಕು. ಸರ್ವೆ ಇಲಾಖೆ, ಕಂದಾಯ, ಅರಣ್ಯ ಇಲಾಖೆಗಳಿಂದ ಜಂಟಿ ಸರ್ವೆ ನಡೆಸಿ, ಸಿ ಮತ್ತು ಡಿ ಭೂಮಿಯನ್ನು ಗುರುತು ಮಾಡಬೇಕು. ೧೯೭೪ರ ವರೆಗೆ ಆಡಳಿತ ನಡೆಸಿದ ಸರ್ಕಾರಗಳು ಸಿ ಮತ್ತು ಡಿ ಭೂಮಿಯ ಸಮಸ್ಯೆಯನ್ನು ಬಗೆಹರಿಸಿಲ್ಲ. -ಬಿ. ಜೆ. ದೀಪಕ್, ಕಾನೂನು ಸಲಹೆಗರಾರು, ರೈತ ಹೋರಾಟ ಸಮಿತಿ, ಸೋಮವಾರಪೇಟೆ
ಸರ್ಕಾರಗಳು ರೈತರ ಹಿತ ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬುದನ್ನು ಸರ್ಕಾರದ ಭಾಗವಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಅರಣ್ಯ ಭೂಮಿ ಎಷ್ಟಿದೆ? ಅದರಲ್ಲಿ ಸಿ ಮತ್ತು ಡಿ ಮತ್ತು ಪೈಸಾರಿ ಭೂಮಿ ಎಷ್ಟಿದೆ? ಎಲ್ಲಿದೆ? ಎಂಬುದನ್ನು ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ರೈತರಿಗೆ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ತೀವ್ರವಾಗಲಿದೆ. -ಕೆ. ಬಿ. ಸುರೇಶ್, ಅಧ್ಯಕ್ಷರು, ರೈತ ಹೋರಾಟ ಸಮಿತಿ, ಸೋಮವಾರಪೇಟೆ
-ಲಕ್ಷಿ ಕಾಂತ್ ಕೊಮಾರಪ್ಪ ಕೂತಿ





