Mysore
19
overcast clouds
Light
Dark

ವಯನಾಡು ಭೂಕುಸಿತ: ಅಗೆದಷ್ಟೂ ಸಿಗುತ್ತಿರುವ ಹೆಣಗಳ ರಾಶಿ

• ಪ್ರದ್ಯುಮ್ನ ಎನ್.ಎಂ

ಭಾರೀ ಮುಂಗಾರು ಮಳೆಯಿಂದಾಗಿ ದೇವರನಾಡು ಕೇರಳ ಅಕ್ಷರಶಃ ತತ್ತರಿಸಿ ಹೋಗಿದ್ದು, ವಯನಾಡು ತಾಲ್ಲೂಕಿನ ನಾಲ್ಕು ಗ್ರಾಮಗಳು ಭೂಕುಸಿತಕ್ಕೆ ಒಳಗಾಗಿ ನಾಪತ್ತೆಯಾಗಿವೆ.

ಕೇರಳದ ವಯನಾಡು ಭಾಗದಲ್ಲಿ ಕರ್ನಾಟಕದಿಂದ ಭಾರೀ ಸಂಖ್ಯೆಯಲ್ಲಿ ಕುಟುಂಬ ನಿರ್ವಹಣೆಗಾಗಿ ಕೆಲಸಕ್ಕೆ ಹೋಗಿದ್ದು, ಅಂತಹವರ ಕುಟುಂಬಗಳ ಹಲವಾರು ಮಂದಿ ಈ ಭೂ ಕುಸಿತಕ್ಕೆ ಸಿಲುಕಿ ಸಾವನ್ನಪ್ಪಿದ್ದರೆ, ಮತ್ತೆ ಕೆಲವು ಮಂದಿ ನಾಪತ್ತೆಯಾಗಿದ್ದಾರೆ.

ಈ ಭಾರೀ ಭೂ ಕುಸಿತದಿಂದ ಬದುಕುಳಿದ ಚಾಮರಾಜನಗರ, ಗುಂಡ್ಲುಪೇಟೆ ಸೇರಿದಂತೆ ಹಲವು ಭಾಗಗಳಿಂದ ಗುಳೆ ಹೋದ ಜನರು ಮರಳಿ ತಮ್ಮ ಊರಿಗೆ ಹಿಂದಿರುಗಲು ಪರಿತಪಿಸುತ್ತಿದ್ದಾರೆ. ಮತ್ತು ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.

ವಯನಾಡಿಗೆ ಆರು ಭಾರತೀಯ ಸೇನಾ ತುಕುಡಿಗಳು ಪರಿಹಾರ ಕಾಲಮ್ಗಳು, ವೈದ್ಯಕೀಯ ತಂಡಗಳು, ಶ್ವಾನದಳಗಳು ಮತ್ತು ಇಂಜಿನಿಯರ್ ಕಾರ್ಯಪಡೆಯು ಅಟ್ಟಮಲ, ಮುಂಡಕ್ಕೆ ಮತ್ತು ಚೂರಲ್ ಮಲೈನಲ್ಲಿ ಗುರುವಾರ 6.30ರಿಂದಲೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಅಟ್ಟಮಾಲ, ಮುಂಡಕ್ಕೆ ಮತ್ತು ಚೂರಲ್ ಮಲೈ ಈ ಮೂರು ಸ್ಥಳಗಳಲ್ಲಿ ಇತರ ರಕ್ಷಣಾ ತಂಡಗಳ ಸಮನ್ವಯದೊಂದಿಗೆ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಸೇನೆಯ ವಿವಿಧ ತುಕುಡಿಗಳಿಂದ ಮಣ್ಣಿನ ಅಡಿ ಸಿಲುಕಿ ಹೊರಕ್ಕೆ ತೆಗೆದಿರುವ ಮೃತದೇಹಗಳನ್ನು ಮುಂದಿನ ಕ್ರಮಕ್ಕಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ತಾತ್ಕಾಲಿಕ ಬೈಲಿ ಸೇತುವೆ ನಿರ್ಮಾಣ
ದುರಂತ ಪೀಡಿತ ಚೂರಲ್ ಮಲೈನಲ್ಲಿ ಸೇನೆ ನಿರ್ಮಿಸುತ್ತಿರುವ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದು ಪೂರ್ಣಗೊಂಡ ಬಳಿಕ ಕಾರ್ಯಾಚರಣೆಗೆ ಇನ್ನಷ್ಟು ವೇಗ ದೊರೆಯಲಿದೆ.

ಪ್ರವಾಹದ ತೀವ್ರತೆಗೆ ಚೂರಲ್ ಮಲೈನಲ್ಲಿನ ಸೇತುವೆ ಕೊಚ್ಚಿ ಹೋಗಿದ್ದು, ಅತೀ ಹೆಚ್ಚು ದುರಂತಕ್ಕೊಳಗಾದ ಮುಂಡಕ್ಕೆ ಭಾಗದೊಂದಿಗೆ ಸಂಪರ್ಕ ಕಡಿತಗೊಂಡಿದೆ. ಇದು ಕೂಡ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಹೀಗಾಗಿ ಸೇನಾ ಪಡೆ ಎರಡೂ ಗ್ರಾಮಗಳನ್ನು ಸಂಪರ್ಕಿಸಲು ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸು ಬೆಳಿಗ್ಗೆ ಇದೆ. ಈ ಬೃಹತ್ ಮಟ್ಟದ ಕಾರ್ಯಾಚರಣೆಗಾಗಿ ಕೇರಳ ಸರ್ಕಾರ ಸುಮಾರು 1,167 ಮಂದಿಯ ರಕ್ಷಣಾ ತಂಡವನ್ನು ನಿಯೋಜಿಸಿದೆ.

ಶವಾಗಾರ ತಾತ್ಕಾಲಿಕವಾಗಿ ಸಭಾಂಗಣಕ್ಕೆ ಶಿಫ್ಟ್
ಭೂಕುಸಿತದಲ್ಲಿ ಗಾಯಗೊಂಡವರ ಚಿಕಿತ್ಸೆಗಾಗಿ ಮೇಪ್ಪಾಡಿ ಪಾಲಿಟೆಕ್ನಿಕ್‌ನಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗಿದೆ. ಕಣ್ಣೂರು, ಕಲ್ಲಿಕೋಟೆ ಹಾಗೂ ತೃಶೂರ್‌ನ ವೈದ್ಯಕೀಯ ಕಾಲೇಜುಗಳಿಂದ ತಂಡಗಳನ್ನು ವಯನಾಡಿಗೆ ಕರೆತರಲಾಗಿದೆ. ಶಸ್ತ್ರಚಿಕಿತ್ಸೆ, ಹೃದ್ರೋಗ, ಮೂಳೆ ಚಿಕಿತ್ಸೆ, ಮನೋವೈದ್ಯ ಹಾಗೂ ವಿಧಿವಿಜ್ಞಾನ ವಿಭಾಗಗಳಿಂದ ಹೆಚ್ಚುವರಿ ವೈದ್ಯರು ಮತ್ತು ನಸ್ ೯ಗಳನ್ನು ಅಲ್ಲಿನ ಸರ್ಕಾರ ನಿಯೋಜಿಸಲಾಗಿದೆ.