Mysore
19
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಉದ್ಬೂರು ಮುಖ್ಯರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು

ದೂರ ನಂಜುಂಡಸ್ವಾಮಿ

ರಸ್ತೆ ಅಭಿವೃದ್ಧಿಗೆ ಸಚಿವರೇ ಭೂಮಿಪೂಜೆ ನಡೆಸಿದ್ದರೂ ನಡೆಯದ ಕಾಮಗಾರಿ 

ದೂರ: ಮೈಸೂರು ತಾಲ್ಲೂಕಿನ ದೂರ ಗ್ರಾಮದಿಂದ ಉದ್ಬೂರು ಮಾರ್ಗವಾಗಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಉದ್ಬೂರು ಗ್ರಾಮದ ಮುಖ್ಯರಸ್ತೆಯಲ್ಲಿ ಡಾಂಬರು ಕಿತ್ತು ಬಂದು ಗುಂಡಿಗಳು ನಿರ್ಮಾಣವಾಗಿ ರಸ್ತೆ ತೀರಾ ಹದಗೆಟ್ಟಿರುವುದರಿಂದ ಸವಾರರು ನಿತ್ಯ ತೊಂದರೆ ಎದುರಿಸುತ್ತಿದ್ದಾರೆ.

ರಸ್ತೆ ಕಾಮಗಾರಿಗೆಂದು ರಾಜ್ಯ ಸರ್ಕಾರದಿಂದ ೧೦ ಕೋಟಿ ರೂ. ಬಿಡುಗಡೆಯಾಗಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ರಸ್ತೆ ಕಾಮಗಾರಿಗೆ ಭೂಮಿ ಪೂಜೆಯನ್ನು ಸಹ ನೆರವೇರಿಸಿ ನಾಲ್ಕೂವರೆ ತಿಂಗಳುಗಳು ಕಳೆಯುತ್ತ ಬಂದರೂ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.

ಇದನ್ನು ಓದಿ:ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದ ಕೈಲ್ ಮುಹೂರ್ತ ಆಚರಣೆ

ಉದ್ಬೂರಿನ ಕೆರೆ ಸಮೀಪ ಬರುವ ಈ ರಸ್ತೆಯಲ್ಲಿ ದಿನನಿತ್ಯ ಹುಲ್ಲಹಳ್ಳಿ – ಮೈಸೂರು ಮಾರ್ಗವಾಗಿ ಬಿಡುವಿಲ್ಲದೆ ವಾಹನಗಳು ಸಂಚರಿಸುತ್ತಿರುತ್ತವೆ. ರೈತರು, ಕೂಲಿ ಕಾರ್ಮಿಕರು ದಿನನಿತ್ಯದ ಕೆಲಸಕ್ಕಾಗಿ ಇಲ್ಲಿ ಸಂಚರಿಸುವ ವೇಳೆ ಹರಸಾಹಸ ಪಡಬೇಕಾಗಿದೆ. ದ್ವಿಚಕ್ರವಾಹನ ಸವಾರರ ಸ್ಥಿತಿಯಂತೂ ಹೇಳತೀರದಾಗಿದೆ. ರಾತ್ರಿ ವೇಳೆಯಲ್ಲಿ ಇಲ್ಲಿ ಗುಂಡಿ ಇರುವುದೇ ಕಾಣಿಸುವುದಿಲ್ಲ. ಈ ರಸ್ತೆಯಲ್ಲಿ ೩ ತಿಂಗಳುಗಳಿಂದ ಹಲವಾರು ಅಪಘಾತಗಳು ಸಂಭವಿಸಿವೆ.

ಕಳೆದ ಏಪ್ರಿಲ್ ೨೩ರಂದು ಶಾಸಕ ಜಿ.ಟಿ.ದೇವೇ ಗೌಡರ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಮಾನಂದವಾಡಿ ಮುಖ್ಯರಸ್ತೆ ಉದ್ಬೂರು ಗೇಟ್‌ನಿಂದ ಉದ್ಬೂರು ಗ್ರಾಮದವರೆಗೆ ಜೋಡಿರಸ್ತೆ ನಿರ್ಮಾಣ ಹಾಗೂ ಉದ್ಬೂರು ಗ್ರಾಮದ ಒಳಗಡೆ ಚರಂಡಿ ನಿರ್ಮಾಣ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದು, ಇದಾಗಿ ನಾಲ್ಕೂವರೆ ತಿಂಗಳುಗಳೇ ಕಳೆಯುತ್ತಾ ಬಂದರೂ ಕಾಮಗಾರಿ ಪ್ರಾರಂಭ ವಾಗಿಲ್ಲ. ಲೋಕೋಪಯೋಗಿ ಇಲಾಖೆ ಯವರು ಗುಂಡಿ ಮುಚ್ಚುವ ಕಾರ್ಯಕ್ಕೂ ಮುಂದಾಗಿಲ್ಲ.

ಇದನ್ನು ಓದಿ:ಬಳ್ಳಾರಿ ಜೈಲಿಗೆ ನಟ ದರ್ಶನ್‌ : ಆದೇಶ ಕಾಯ್ದಿರಿಸಿದ ಕೋರ್ಟ್‌

ಗ್ರಾಮಸ್ಥರೇ ಆಗಾಗ್ಗೆ ಗುಂಡಿಗೆ ಮಣ್ಣು ಸುರಿಯುತ್ತಿದ್ದಾರೆ. ಈಗ ಸತತವಾಗಿ ಮಳೆ ಬೀಳುತ್ತಿರುವುದರಿಂದ ಉದ್ಬೂರು ಕೆರೆ ಸಮೀಪ ಹಾಗೂ ಇಟ್ಟಿಗೆಗೂಡು ಸಮೀಪ ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾರಕ್ಕೆ ಇಬ್ಬರಿಂದ ಮೂವರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಸದ್ಯಕ್ಕೆ ಗುಂಡಿಗಳನ್ನಾದರೂ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ರೈತರು, ಕಾರ್ಮಿಕರು, ವಾಹನ ಸವಾರರು ಒತ್ತಾಯಿಸಿದ್ದಾರೆ.

” ಈ ರಸ್ತೆಯಲ್ಲಿ ಸಂಚರಿಸುವಾಗ ಜೀವವನ್ನು ಒಂದು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಇಲ್ಲಿ ದಿನನಿತ್ಯ ಒಂದಲ್ಲ ಒಂದು ಅಪಘಾತ ನಡೆಯುತ್ತಲೇ ಇದೆ. ಭೂಮಿಪೂಜೆ ನಡೆಸಿದ್ದರೂ ಕಾಮಗಾರಿ ಪ್ರಾರಂಭವಾಗದೆ ವಾಹನ ಸವಾರರ ಜೀವಕ್ಕೆ ಸಂಚಕಾರವಾಗಿ ಪರಿಣಮಿಸಿದೆ.”

-ಪ್ರಕಾಶ್, ವಕೀಲರು, ತಳೂರು ಗ್ರಾಮ

Tags:
error: Content is protected !!