Mysore
18
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಕೃತಕ ಗರ್ಭಧಾರಣೆಯಿಂದ ಹೆಣ್ಣು ಕರು ಪಡೆಯುವ ಭಾಗ್ಯ

ಹಸುಗಳಿಗೆ ಲಿಂಗ ನಿರ್ಧರಿತ ವೀರ್ಯ ನಳಿಕೆ ಬಳಕೆ

ಮಂಡ್ಯ: ವೀರ್ಯದ ಹಂತದಲ್ಲಿಯೇ ಕರುವಿನ ಲಿಂಗ ನಿರ್ಧರಿಸುವ ಕೃತಕ ಗರ್ಭಧಾರಣೆಯನ್ನು ಹಸುಗಳಿಗೆ ಮಾಡುವ ಮೂಲಕ ರೈತರು ಬಯಸಿದ ಹೆಣ್ಣು ಕರುವನ್ನು ಪಡೆಯಬಹುದಾಗಿದೆ.

ಮಿಶ್ರ ತಳಿ ರಾಸುಗಳಿಂದ ಜನಿಸಿದ ಹೆಣ್ಣು ಕರುಗಳನ್ನು ಸಾಕಣೆ ಮಾಡಿ, ಹೆಣ್ಣು ಕರುಗಳ ಸಂತತಿಯನ್ನು ಹೆಚ್ಚಿಸಿ ರಾಸುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಉತ್ತಮ ತಳಿಯ ಹಾಗೂ ಸದೃಢ ಮಿಶ್ರತಳಿ ಹಸುಗಳಿಗೆ ಲಿಂಗ ನಿರ್ಧಾರಿತ ವೀರ್ಯ ನಳಿಕೆ ಬಳಸಿ ಕೃತಕ ಗರ್ಭಧಾರಣೆ ಮಾಡಲಾಗುವುದು.

ಹೈನುಗಾರಿಕೆ ಇತಿಹಾಸದಲ್ಲಿಯೇ ಇದೊಂದು ವಿನೂತನ ಪ್ರಯೋಗವಾಗಿದ್ದು, ಸುಧಾರಿತ ವಿದೇಶಿ ತಂತ್ರಜ್ಞಾನದ ಮೂಲಕ ಲಿಂಗ ನಿರ್ಧಾರಿತ ಕೃತಕ ಗರ್ಭಧಾರಣೆ ಮಾಡಿದರೆ ಇದರಿಂದ ಜನಿಸುವ ಶೇ. ೯೨ಕ್ಕೂ ಹೆಚ್ಚು ಕರುಗಳು ಹೆಣ್ಣಾಗಿರಲಿವೆ ಎನ್ನುತ್ತಾರೆ ಪಶು ವೈದ್ಯಕೀಯ ತಜ್ಞರು.

ಹುಟ್ಟುವ ಕರುವಿನ ಲಿಂಗ ನಿರ್ಧಾರವಾಗುವುದು ಹೋರಿಗಳ ವೀರ್ಯದಿಂದ. ಹೋರಿಗಳ ವೀರ್ಯದಲ್ಲಿ ಎಕ್ಸ್ ಮತ್ತು ವೈ ಎನ್ನುವ ಎರಡು ಬಗೆಯ ವೀರ್ಯಾಣುಗಳಿರುತ್ತವೆ. ಇದರಲ್ಲಿ ಎಕ್ಸ್ ಬಗೆಯ ವೀರ್ಯವು ಹಸುವಿನ ಅಂಡಾಣು ಜೊತೆ ಸೇರಿದಲ್ಲಿ ಹೆಣ್ಣು ಕರು ಹಾಗೂ ವೈ ಬಗೆಯ ವೀರ್ಯ ಸೇರಿದಲ್ಲಿ ಗಂಡು ಕರು ಜನಿಸುತ್ತದೆ.

ಈ ಪ್ರಯೋಗವು ವಿದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿದ್ದು, ವಿವಿಧ ದೇಶಗಳು ಕಳೆದ ೨೫ ವರ್ಷಗಳಿಂದ ಈ ತಂತ್ರಜ್ಞಾನವನ್ನು ಬಳಸುತ್ತಿವೆ. ರಾಜ್ಯದಲ್ಲೂ ಈ ಪ್ರಯೋಗ ಅಳವಡಿಸಿಕೊಳ್ಳಲಾಗುತ್ತಿದೆಯಾದರೂ ಅಷ್ಟಾಗಿ ರೈತರಿಗೆ ಅರಿವಿಲ್ಲ. ಸದ್ಯ ಈ ಮಾದರಿಯ ನಳಿಕೆಗೆ ೨೫೦ ರೂ. ಇದ್ದು, ಒಂದು ಹಸುವಿಗೆ ಎರಡು ಬಾರಿ ನಳಿಕೆ ಮಾಡಬೇಕಾಗಿದೆ. ಈ ಪ್ರಯೋಗದಿಂದ ಹೆಣ್ಣು ಕರುಗಳೇ ಹುಟ್ಟುವುದರಿಂದ ರೈತರು ಎಳೆಯ ಗಂಡು ಕರುಗಳನ್ನು ಕಸಾಯಿಖಾನೆಗೆ ಮಾರುವುದು ತಪ್ಪುತ್ತದೆ. ಹಾಲಿನ ಉತ್ಪಾದನೆ ಹೆಚ್ಚಿ ರೈತರ ಆದಾಯ ಸಹ ವೃದ್ಧಿಸುತ್ತದೆ. ಹೆಚ್ಚೆಚ್ಚು ಮಂದಿಗೆ ಉದ್ಯೋಗವೂ ಸಿಗಲಿದೆ.

ಇದರ ಪ್ರಯೋಜನಗಳು

  • ಲಿಂಗ ವಿಂಗಡಣೆ ಮಾಡಿದ ವೀರ್ಯ ಬಳಸಿ ಹೆಣ್ಣು ಕರುಗಳನ್ನು ಮಾತ್ರ ಪಡೆಯಬಹುದಾದ ವಿನೂತನ ತಂತ್ರಜ್ಞಾನ.
  • ಶೇ. ೯೨ರಷ್ಟು ಹೆಣ್ಣು ಕರುಗಳನ್ನು ಪಡೆಯುವುದು ನಿಶ್ಚಿತ.
  • ವಂಶಾವಳಿ ದೃಢೀಕೃತ ಹೋರಿಗಳ ವೀರ್ಯ ಬಳಸುವುದರಿಂದ ಉತ್ಕೃಷ್ಟ ಹೆಣ್ಣು ಕರುಗಳ ಜನನ.
  • ಗಂಡು ಕರುಗಳ ಸಾಕಣೆಯ ಹೊರೆಯಿಲ್ಲ.
  • ಹೆಣ್ಣು ಕರುಗಳು ಮಾತ್ರ ಇರುವುದರಿಂದ ಉತ್ತಮ ಪೋಷಣೆಯ ಫಲವಾಗಿ ಶೀಘ್ರ ಬೆಳವಣಿಗೆ, ಬೇಗ ಫಲಕ್ಕೆ ಬರುತ್ತದೆ.

 

ಸಾಂಪ್ರದಾಯಿಕ ವೀರ್ಯ ನಳಿಕೆಯಿಂದ ನಷ್ಟ

  • ಹುಟ್ಟಿದ ಕರುಗಳಲ್ಲಿ ಶೇ. ೫೦ರಷ್ಟು ಗಂಡು ಕರುಗಳಾಗಿರುತ್ತವೆ.
  • ಕೊಟ್ಟಿಗೆಯಲ್ಲಿ ಹೆಣ್ಣು ರಾಸುಗಳ ಸಣ್ಣ ಹಿಂಡು ಕಡಿಮೆ ಹಾಲು ಉತ್ಪಾದನೆ.
  • ಅನುತ್ಪಾದಕ ರಾಸುಗಳ ಮೇಲೆಯೂ ವೃಥಾ ಖರ್ಚು, ಲಾಭದಲ್ಲಿ ಕಡಿತ.

ಹೆಣ್ಣು ಕರು ಜನಿಸದಿದ್ದರೆ ಹಣ ವಾಪಸ್

ಲಿಂಗ ನಿರ್ಧರಿತ ವೀರ್ಯ ನಳಿಕೆಯಿಂದ ಶೇ. ೯೨ರಷ್ಟು ಹೆಣ್ಣು ಕರುಗಳ ಜನನ ನಿಶ್ಚಿತ. ಒಂದು ನಳಿಕೆಯ ಬೆಲೆ ೨೫೦ ರೂ. ಗಳಾಗಿದ್ದು, ಎರಡು ಬಾರಿ ಕೊಡಿಸಬೇಕಾಗಿದೆ. ಎರಡು ಬಾರಿ ನಳಿಕೆ ಮಾಡಿ ಒಂದು ವೇಳೆ ಹೆಣ್ಣು ಕರು ಜನಿಸಿಲ್ಲವಾದರೆ ರೈತರು ನೀಡುವ ೫೦೦ ರೂ. ಗಳನ್ನು ವಾಪಸ್ ನೀಡಲಾಗುವುದು. ರೈತರು ಹುಟ್ಟಿದ ಗಂಡು ಕರುಗಳನ್ನು ಕಸಾಯಿಖಾನೆಗೆ ಸಾಗಿಸುವ ಬದಲು ಲಿಂಗ ನಿರ್ಧರಿತ ವೀರ್ಯ ಬಳಕೆ ಚುಚ್ಚುಮದ್ದನ್ನು ತಮ್ಮ ಜಾನುವಾರುಗಳಿಗೆ ಕೊಡಿಸುವುದು ಒಳಿತು. – ಡಾ. ಎಸ್. ಸಿ. ಸುರೇಶ್, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮಂಡ್ಯ

 

Tags:
error: Content is protected !!