ನವೀನ್ ಡಿಸೋಜ
ದೀರ್ಘಕಾಲದ ಬೇಡಿಕೆಗೆ ಸರ್ಕಾರದ ಸ್ಪಂದನೆ; ಕೊಡವರ ಶ್ರೇಯೋಭಿವೃದ್ಧಿಗೆ ಅನುಕೂಲ
ಮಡಿಕೇರಿ:ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಕೊಡವ ಅಭಿವೃದ್ಧಿ ನಿಗಮ ಕೊಡವರ ಸಮಗ್ರ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗಲಿದೆ. ಇದು ಕೊಡವ ಸಮುದಾಯದ ದೀರ್ಘಕಾಲದ ಬೇಡಿಕೆಗೆ ಸಿಕ್ಕ ಸ್ಪಂದನೆಯಾಗಿದೆ. ಶಾಸಕ ಎ.ಎಸ್. ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಮಂಜು ಚಿಣ್ಣಪ್ಪ ನೇತೃತ್ವದ ಯುನೈಟೆಡ್ ಕೊಡವ ಆರ್ಗನೈಸೇಷನ್‌ನ ದಶಕದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದ್ದು, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ.
ಕೊಡವ ಜನಾಂಗ ಇತರೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದು, ರಾಜ್ಯ ಒಳಮೀಸಲಾತಿಯ ಅನ್ವಯ ಒಬಿಸಿ ೩ಎ ನಲ್ಲಿ ವರ್ಗೀಕರಿಸಲಾಗಿದೆ. ಇದರಲ್ಲಿ ಕೊಡವ, ಬಲಿಜ, ಒಕ್ಕಲಿಗ ಸೇರಿದಂತೆ ಇನ್ನೂ ಕೆಲವು ಸಮುದಾಯಗಳೂ ಸೇರಿವೆ. ಅಂದಾಜು ೧ ಕೋಟಿಗೂ ಹೆಚ್ಚು ಸಂಖ್ಯೆ ಇರುವ ಒಕ್ಕಲಿಗ ಜನಾಂಗ ಮತ್ತು ಅಂದಾಜು ೨೫ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ಬಲಿಜ ಜನಾಂಗಗಳ ಜತೆ ಕೇವಲ ಲಕ್ಷ ಜನಸಂಖ್ಯೆ ಇರುವ ಕೊಡವ ಜನಾಂಗ ಮೀಸಲಾತಿಗಾಗಿ ಸ್ಪರ್ಧಿಸಬೇಕಿತ್ತು. ಒಟ್ಟಾರೆ ಇರುವ ಶೇ.೪ರಷ್ಟು ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯಲ್ಲಿ ಹೆಚ್ಚಿನ ಜನಸಂಖ್ಯೆಯಿರುವ ಸಮುದಾಯಗಳಿಗೆ ಹೆಚ್ಚಿನ ಪಾಲು ಸಿಗುತ್ತಿದೆ. ಇದರಿಂದ ಕೊಡವ ಜನಾಂಗದ ಶ್ರೇಯೋಭಿವೃದ್ಧಿ ಕಷ್ಟವಾಗಿತ್ತು. ರಾಜ್ಯ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸುವಾಗ ಸಣ್ಣ ಸಮುದಾಯವಾದ ಕೊಡವ ಜನಾಂಗದ ಅಭಿವೃದ್ಧಿಗೆ ಹೆಚ್ಚಿನ ಯೋಜನೆಗಳು ಸಿಗುತ್ತಿರಲಿಲ್ಲ. ಇವೆಲ್ಲದರ ನಡುವೆ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಯ ಅನಿವಾರ್ಯತೆಯನ್ನು ಮನಗಂಡು ಯುನೈಟೆಡ್ ಕೊಡವ ಆರ್ಗನೈಸೇಷನ್ ಇದಕ್ಕಾಗಿ ನಿರಂತರ ಹೋರಾಟ ನಡೆಸಿತ್ತು.
ಇದೀಗ ನಿಗಮ ಸ್ಥಾಪನೆ ಘೋಷಣೆಯಾಗಿದ್ದು, ಮುಂದಿನ ಹಂತದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಬೇಕಿದೆ. ನೋಂದಣಿ ಪ್ರಕ್ರಿಯೆ ಬಳಿಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ನೇಮಕವಾಗಲಿದ್ದು, ಬಳಿಕ ನಿರ್ದೇಶಕರನ್ನೊಳ ಗೊಂಡ ಮಂಡಳಿ ರಚನೆಯಾಗಬೇಕಿದೆ. ನಿಗಮಕ್ಕೆ ಕಚೇರಿ ಮತ್ತು ಆಡಳಿತ ವ್ಯವಸ್ಥೆಯಾಬೇಕಿದ್ದು, ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ ನಿಗಮ ಕಾರ್ಯಾರಂಭ ಮಾಡಲಿದೆ.
ಕೊಡವ ಅಭಿವೃದ್ಧಿ ನಿಗಮದಿಂದ ಅಂದಾಜು ೧ ಲಕ್ಷದಷ್ಟೇ ಇರುವ ಸಣ್ಣ ಜನಾಂಗವಾದ ಕೊಡವರ ಸಮಗ್ರ ಶ್ರೇಯೋಭಿವೃದ್ಧಿಗೆ ಅನೇಕ ಅನುಕೂಲಗಳಾಗಲಿವೆ. ಮಹಿಳಾ ಸಬಲೀಕರಣ, ಯುವಜನ ಸಬಲೀಕರಣ, ವಿದ್ಯಾಭ್ಯಾಸ, ಕೌಶಲಾಭಿವೃದ್ಧಿ, ಸಂಸ್ಕೃತಿಯ ರಕ್ಷಣೆಗಾಗಿ ಕಾರ್ಯಕ್ರಮಗಳು, ಐನ್‌ಮನೆ, ಮಂದ್-ಮಾನಿಗಳು, ಪೂಜಾ ಕ್ಷೇತ್ರಗಳ ಪುನಶ್ಚೇತನಕ್ಕೆ ಯೋಜನೆಗಳನ್ನು ರೂಪಿಸಿ ಅನುದಾನವನ್ನು ತರಲು ಸಹಕಾರಿಯಾಗಲಿದೆ. ಅತಿ ಸಣ್ಣ ಜನಾಂಗ ಗಳಲ್ಲೊಂದಾದ ಕೊಡವರ ಏಳಿಗೆಗಾಗಿ ಈ ಅಭಿವೃದ್ಧಿ ನಿಗಮ ಕಾರ್ಯನಿರ್ವಹಿಸಲಿದೆ.
” ೨೦೧೪ರಲ್ಲಿ ಯುಕೋ ಸಂಘಟನೆಯಿಂದ ಮೊದಲ ಬಾರಿಗೆ ಮಂದ್ ನಮ್ಮೆ ನಡೆಸುವ ಸಂದರ್ಭದಲ್ಲಿ ಐನ್‌ಮನೆ ಮಂದ್-ಮಾನಿಗಳ ಪುನಶ್ಚೇತನಕ್ಕೆ ಪ್ರಯತ್ನಿಸಲಾಯಿತು. ಆದರೆ ಇದಕ್ಕೆ ಸರ್ಕಾರದ ಯಾವುದೇ ಅನುದಾನ ದುರ್ಲಭವಾಗಿತ್ತು. ಆ ಸಂದರ್ಭದಲ್ಲಿ ಅಭಿವೃದ್ಧಿ ನಿಗಮಕ್ಕಾಗಿ ಬೇಡಿಕೆ ಇಡಲು ನಿರ್ಧರಿಸಲಾಯಿತು. ಈ ಹಿಂದಿನ ಶಾಸಕರೂ ನಮ್ಮ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಕೊನೆಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರಯತ್ನದಿಂದ ನಿಗಮ ಸ್ಥಾಪನೆಯಾಗಿದೆ.
– ಮಂಜು ಚಿಣ್ಣಪ್ಪ, ಯುಕೋ ಅಧ್ಯಕ್ಷ





