ಡಾ. ಶೋಭಾ ದಿನೇಶ್
ಲೇಖಕರಿಗೆ ಹಾಗೂ ಪ್ರಕಾಶಕರಿಗೆ ಇದು ದುರಿತ ಕಾಲ, ಬರೆದ ಪುಸ್ತಕಗಳು ಒಂದೋ ಓದುಗರಿಲ್ಲದ ಗ್ರಂಥಾಲಯಗಳನ್ನು ಸೇರುತ್ತಿವೆ ಇಲ್ಲ ಸಗಟು ಖರೀದಿಗಳಲ್ಲಿ ಕಳೆದುಹೋಗುತ್ತಿವೆ. ವಿಶಾಲ ಓದುಗ ಪ್ರಪಂಚದ ನೆಲೆಗಳನ್ನು ತಲುಪುತ್ತಿಲ್ಲ ಅನ್ನೋ ಕೂಗು ಕೇಳಿಸುತ್ತಿದೆ. ಆದರೆ ಮೈಸೂರಿನ ನೂರಾರು ಹೆಣ್ಣುಮಕ್ಕಳು ಪ್ರತೀ ತಿಂಗಳು ಒಂದೆಡೆ ಕೂತು ಹಿರಿ, ಕಿರಿ ಲೇಖಕರ ಪುಸ್ತಕಗಳನ್ನು ಓದಿ, ಚರ್ಚಿಸುತ್ತಾರೆ. ಪುಸ್ತಕಗಳನ್ನು ಕೊಂಡು ಓದುತ್ತಿದ್ದ ಇವರ ಹವ್ಯಾಸ ಇಂದು ಅಭ್ಯಾಸವಾಗಿ ಮಾರ್ಪಟ್ಟಿದೆ. ವಿವಿಧ ವಯಸ್ಸಿನ, ಹಲವು ಮನಸ್ಥಿತಿಗಳ ಈ ಹೆಣ್ಣು ಮಕ್ಕಳ ಗುಂಪು ಓದನ್ನು ತಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಲು ಕಾರಣ ಮೈಸೂರು ಬುಕ್ ಕ್ಲಬ್. ಈ ಓದುಗರ ಕ್ಲಬ್ಬಿನ ರೂವಾರಿ ಶುಭಾ ಸಂಜಯ್ ಅರಸ್. ಇದೇ ಶುಭಾ ಸಂಜಯ್ ಅರಸ್ ಮೈಸೂರಿನಲ್ಲಿ ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಮೈಸೂರು ಸಾಹಿತ್ಯ ಸಂಭ್ರಮದ ಹಿಂದಿನ ಮೋಹಕ ಸ್ತ್ರೀ ಶಕ್ತಿ.
ಜುಲೈ ಸಮೀಪಿಸಿದರೆ ಸಾಕು ಮೈಸೂರಿನ ಗಾಳಿಯಲ್ಲೆಲ್ಲಾ ಸಾಹಿತ್ಯದ ಹಬ್ಬದ ದಿವ್ಯ ಪರಿಮಳ. ಜೈಪುರ, ತಿರುವಂತನಪುರ, ಬೆಂಗಳೂರು ಇಲ್ಲಿ ನಡೆಯುವ ಲಿಟರೇಚರ್ ಫೆಸ್ಟಿವಲ್‌ಗಳಲ್ಲಿ ಹಣಕಾಸು ನೆರವಿನ ಮಹಾಪೂರ ಹರಿದು ಬರುತ್ತದೆ. ಕೆಲವೆಡೆ ಆಯಾ ರಾಜ್ಯಗಳ ಸರ್ಕಾರ ಕೂಡ ನೆರವಿಗೆ ನಿಲ್ಲುತ್ತದೆ. ಆದರೆ ಇಲ್ಲಿ ಶುಭಾ ಏಕಾಂಗಿಯಾಗಿ ಸೆಣಸುತ್ತಾರೆ ಯಶಸ್ವಿ ಕೂಡ ಆಗಿದ್ದಾರೆ. ಅವರ ಅತ್ಯುತ್ತಮ ನಾಯಕತ್ವ ಗುಣವೇ ಯಶಸ್ಸಿಗೆ ಕಾರಣ. ತನ್ನ ಸದಸ್ಯರೆಡೆಗೆ ಕಣ್ಣು ಕಿವಿ ಮನಸ್ಸು ತೆರೆಯದೇ ಕೇವಲ ಅಪ್ಪಣೆಯ ಭಾಷೆಯಲ್ಲಿ ಮಾತನಾಡುತ್ತಿದ್ದರೆ ಅವರು ನಾಯಕರಾಗಲು ಸಾಧ್ಯವಿಲ್ಲ. ಸದಸ್ಯರ ಸಲಹೆ, ಸೂಚನೆ, ಅಸಮಾಧಾನ, ಪ್ರೀತಿ ಮೆಚ್ಚುಗೆಯನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುವ ಗುಣವೇ ಆಕೆಯನ್ನು ದಿಟ್ಟ ನಾಯಕಿಯಾಗಿ ರೂಪಿಸಿದೆ. ನಾನು ಎಂಬುದಕ್ಕಿಂತ ನಾವು ಎನ್ನುವ ಮಂತ್ರವನ್ನು ನಂಬಿರುವ, ಅಧಿಕಾರ ವಿಕೇಂದ್ರೀಕರಣದಲ್ಲಿ ಅಚಲ ವಿಶ್ವಾಸವಿರುವ ಶುಭಾ ತನ್ನ ಒಕ್ಕೂಟದ ಸದಸ್ಯರಿಗೆ ಆದೇಶಿಸುವುದಕ್ಕಿಂತ ಜೊತೆಗೂಡಿ ಕೆಲಸ ಮಾಡುತ್ತಾ ತಾನು ಬೆಳೆಯುತ್ತಾ ತನ್ನ ಸದಸ್ಯರನ್ನೂ ಬೆಳೆಸುತ್ತಿದ್ದಾರೆ. ಆಕೆ ಯಾರಿಗೂ ಕ್ಯಾರೆಕ್ಟರ್ ಸರ್ಟಿಫಿಕೆಟ್ ಕೊಡುವುದಿಲ್ಲ. ಬದಲಾಗಿ ಜವಾಬ್ದಾರಿ, ಹೊಣೆಗಾರಿಕೆ, ಭಾಗವಹಿಸುವ ಅವಕಾಶವನ್ನು ನೀಡುತ್ತಿದ್ದಾರೆ. ಅವಕಾಶ ಮತ್ತು ಪರಿಸರ ದೊಡ್ಡದಾಗುತ್ತಾ ಹೋದಂತೆ ಅವರೂ ಅರಳುತ್ತಿದ್ದಾರೆ. ಎಂದಿಗೂ ವೇದಿಕೆ ಏರದ, ತುಂಬಿದ ಸಭೆಯಲ್ಲಿ ನಾಲ್ಕು ಮಾತನಾಡಿ ಗೊತ್ತಿರದ ಹಲವು ಮಹಿಳೆಯರು ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದಾರೆ. ಹೀಗೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಾ, ಸಮಾನ ಅವಕಾಶಗಳನ್ನುನೀಡುತ್ತಾ, ಸಾಂಪ್ರದಾಯಿಕ ತಾರತಮ್ಯಗಳನ್ನು ನಿವಾರಿಸುತ್ತಾ ಓದುಗ ವಲಯವನೂ ಹಿಗ್ಗಿಸುತ್ತಿದ್ದಾರೆ. ಲೇಖಕ ಮತ್ತು ಓದುಗನ ನಡುವಿನ ಅಂತರವನ್ನು ಕಿರಿದುಗೊಳಿಸುತ್ತಾ ಒಂದು ನಮೂನೆಯ ಸಾಂಸ್ಕೃತಿಕ ಹಬ್ಬಕ್ಕೆ, ಸಂವೇದನೆಗಳನ್ನು ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆಗಷ್ಟೇ ಸಾಹಿತ್ಯ ಲೋಕದಲ್ಲಿ ಕಣ್ಣು ಬಿಡುತ್ತಿರುವ ಹೊಸ ಲೇಖಕರಿಗೆ ವೇದಿಕೆ ಒದಗಿಸಿಕೊಡುವಲ್ಲಿ ಇವರು ಸದಾ ಮುಂಚೂಣಿಯಲ್ಲಿರುತ್ತಾರೆ.
ಯಶಸ್ಸಿನ ಏಣಿಗೆ ಮೆಟ್ಟಿಲುಗಳಿರುತ್ತವೇ ಹೊರತು ಅಂತ್ಯವಿರುವುದಿಲ್ಲ, ಏಣಿ ಹತ್ತಿ ಬಂದು ಸುಸ್ತಾಯಿತು ಅಂತ ಮೈ ಚೆಲ್ಲಿ ಮಲಗಿದರೆ ಏಣಿಯ ಬುಡಕ್ಕೆ ಜಾರುವ ಅಪಾಯವಿರುತ್ತದೆ. ತಂತಿಯ ಮೇಲೆ ನಿಂತವರಿಗೆ ಏಕಾಗ್ರತೆ ಇರಲೇಬೇಕು, ತಾನು ತಲುಪಿರುವ ಜಾಗದಲ್ಲೇ ಉಳಿಯಬೇಕೆಂದರೆ ಅದರದೇ ಆದ ಜವಾಬ್ದಾರಿ, ಫಜೀತಿ, ಸಮಸ್ಯೆ, ಶ್ರಮ ಭರಿಸಲೇಬೇಕು. ಆ ನಿಟ್ಟಿನಲ್ಲಿ ನಮ್ಮ ಶುಭಾ ಗಟ್ಟಿಗಿತ್ತಿಯೇ ಸರಿ.
ವಿವಿಧ ವರ್ಣಗಳ, ಹಲವು ದೈವಿಕ ಕುಸುಮಗಳನ್ನು ಒಂದು ಹೂದಾನಿಯಲ್ಲಿ ಜೋಡಿಸಿ ಅಂದವಾದ ಮೈಸೂರು ಸಾಹಿತ್ಯ ಸಂಭ್ರಮದ ಪರಿಮಳವನ್ನು ಶುಭಾ ಮೈಸೂರಿನಲ್ಲಿ ಪಸರಿಸುತ್ತಿದ್ದಾರೆ.
ಯಾವುದೇ ಸಿದ್ಧಾಂತದ ಬೆನ್ನು ಹತ್ತದೇ, ಇಸಂಗಳಿಗೆ ಪಕ್ಕಾಗದೇ ತನ್ನದೇ ಆದ ಸ್ಪಷ್ಟ ದಾರಿಯಲ್ಲಿ ನಡೆಯುತ್ತಾ, ಲೇಖಕರಿಗೆ ಮತ್ತು ಓದುಗರಿಗೆ ಅನಂತ ಅವಕಾಶಗಳನ್ನೂ ನೀಡುತ್ತಾ ಪರಿ ಪೂರ್ಣತೆಯತ್ತ ಸಾಗುತ್ತಿರುವ ಶುಭಾರವರಿಗೆ ನಮ್ಮೆಲ್ಲರ ಪ್ರೀತಿ ಮತ್ತು ಕೃತಜ್ಞತೆಗಳು.
drshobharanirdpr@gmail.com