Mysore
20
overcast clouds
Light
Dark

ಬರಗಾಲಕ್ಕೆ ಸವಾಲು ಈ ‘ಜಲ ಸ್ವಾವಲಂಬಿ ನಿವಾಸ!’: ಜಲಕ್ಷಾಮದ ಭೀತಿಯೇ ಇಲ್ಲದ ಕುಟುಂಬ

ಮಡಿಲಿನಲ್ಲಿ ಕಬಿನಿ ಜಲಾಶಯ, ಸೆರಗಿನಲ್ಲಿ ಕನ್ನಂಬಾಡಿ ಕಟ್ಟೆಯನ್ನು ಹೊಂದಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯಲ್ಲಿ ಬರಗಾಲ ಎದುರಾದರೆ ನೀರಿಗಾಗಿ ಪರದಾಡುವುದು ತಪ್ಪುವು ದಿಲ್ಲ. ಆದರೆ, ಇಲ್ಲೊಂದು ಮನೆಯಲ್ಲಿ ನೀರಿನ ಅಭಾವ ಇರುವುದಿಲ್ಲ. ಹಾಗಾಗಿ ಆ ಕುಟುಂಬದವರು ನಿರಾಳವಾಗಿರುತ್ತಾರೆ! ತಿಂಗಳುಗಟ್ಟಲೆ ನೀರು ಬಾರ ದಿದ್ದರೂ ಅದರ ಬಗ್ಗೆ ಇವ ರಿಗೆ ಚಿಂತೆಯೇ ಇಲ್ಲ!! ಅಷ್ಟರ ಮಟ್ಟಿಗೆ ಅದು ‘ಜಲ ಸ್ವಾವಲಂಬಿ ನಿವಾಸ’.

ಇವರ ಜಲ ಸ್ವಾಲ ವಂಬನೆಯ ರಹಸ್ಯ ಏನೆಂದರೆ ಮಳೆ ನೀರು. ಮಳೆಯ ನೀರನ್ನು ಸಂಪೂರ್ಣವಾಗಿ ಬಳಸಿ ಕೊಳ್ಳುವ ಮೂಲಕ ಬರ ಗಾಲದಲ್ಲಿಯೂ ನೀರಿನ ಸಮಸ್ಯೆ ಇಲ್ಲದಂತೆ ಯಾವ ರೀತಿ ನಿರ್ವಹಣೆ ಮಾಡ ಬಹುದು ಎಂಬುದಕ್ಕೆ ಈ ಮನೆಯ ನಿವಾಸಿಗಳು ಮಾದರಿಯಾಗಿದ್ದಾರೆ.

ವರ್ಷದಲ್ಲಿ ಬರೋಬ್ಬರಿ ಎಂಟು ತಿಂಗಳುಗಳು ಮಳೆ ನೀರಿನ ಮೇಲೆಯೇ ಅವಲಂಬಿತವಾಗಿರುವ ಈ ಮನೆ ‘ಜಲ ಸ್ವಾವಲಂಬಿ’ಯಾಗಿದ್ದು, ಮೈಸೂರಿನ ಈ ಹೊರವಲಯದ ಬೋಗಾದಿಯಲ್ಲಿ ಇದೆ. ಮನೆಯ ತಾರಸಿ ಮೇಲೆ ಬೀಳುವ ಮಳೆ ನೀರನ್ನು ವ್ಯರ್ಥವಾಗಿ ಪೋಲು ಮಾಡದೇ ಅದನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಬಳಸುತ್ತಿರುವುದೇ ಇವರ ಜಲ ಸ್ವಾವಲಂಬನೆಯ ಮೂಲ. ಅಂದಹಾಗೆ ಆ ಮನೆ ಮಾಲೀಕರ ಹೆಸರು ರಮೇಶ್ ಕಿಕ್ಕೇರಿ.

ಕಳೆದ ಎರಡು ದಶಕಗಳಿಂದ ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ದು ಸಂಬಂಧ ಸಾರ್ವಜನಿಕರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ರಮೇಶ್ ಕಿಕ್ಕೇರಿ, ತಮ್ಮ ಮನೆಯಲ್ಲಿಯೇ ಮಳೆ ನೀರನ್ನು ಸಂಗ್ರಹಿಸಿ, ಸಮರ್ಪಕವಾಗಿ ಬಳಸುವ ಮೂಲಕ ಮಾದರಿಯಾಗಿದ್ದಾರೆ. ಇವರ ಮನೆ ಮೇಲೆ ಬೀಳುವ ಒಂದು ಹನಿ ನೀರೂ ವ್ಯರ್ಥವಾಗದಂತೆ ಯಾವ ರೀತಿ ಬಳಸಬೇಕು ಎಂಬುದನ್ನು ಅರ್ಥ ಮಾಡಿಕೊಂಡು ಅನುಸರಿಸುತ್ತಿದ್ದಾರೆ.

60X40 ಚದರ ಅಡಿ ನಿವೇಶನದಲ್ಲಿ 1,300 ಚದರ ಅಡಿಯಷ್ಟು ಎರಡು ಅಂತಸ್ತಿನ ಮನೆ ನಿರ್ಮಿಸಲಾಗಿದ್ದು, ತಾರಸಿ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಮೂರು ಹಂತಗಳಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ಸಂಸ್ಕರಿಸಿದ ನೀರನ್ನು ತುಂಬಿಸಲು 25 ಸಾವಿರ ಲೀಟರ್ ಶೇಖರಣ ಸಾಮರ್ಥ್ಯದ ಸಂಪ್ ನಿರ್ಮಿಸಲಾಗಿದೆ. ಮಳೆ ಬಂದಾಗ ಭರ್ತಿ ಯಾಗುವ ಈ ಸಂಪ್, 8 ತಿಂಗಳುಗಳ ಕಾಲ ಮನೆಯ ನಿವಾಸಿಗಳಿಗೆ ನೀರು ಪೂರೈಕೆಯ ಮೂಲವಾಗಿದೆ.

ರಮೇಶ್ ಕಿಕ್ಕೇರಿ ಅವರು ಇಡೀ ಕಟ್ಟಡದ ಒಂದು ಭಾಗದಲ್ಲಿ ಪತ್ನಿಯೊಂದಿಗೆ ವಾಸವಿದ್ದರೆ, ಉಳಿದ ಎರಡು ಭಾಗಗಳಲ್ಲಿನ ಮನೆಯನ್ನು ಬಾಡಿಗೆಗೆ ನೀಡಿದ್ದು, ಅಲ್ಲಿ ಎಂಟು ಮಂದಿ ನೆಲೆಸಿದ್ದಾರೆ.

ಒಟ್ಟಾರೆ ಇಡೀ ಕಟ್ಟಡದಲ್ಲಿ 10 ಮಂದಿ ನೆಲೆಸಿದ್ದು, ಕುಡಿಯುವ ನೀರು, ಅಡುಗೆ, ಸ್ನಾನ, ಶೌಚಕ್ಕೆ ಈ ಮಳೆ ನೀರೇ ಆಧಾರವಾಗಿದೆ. ಸಂಪ್‌ನಲ್ಲಿ ಸಂಗ್ರಹವಾಗುವ ನೀರು ಬೇಸಿಗೆ ವೇಳೆ ಖಾಲಿಯಾದರೆ ಹೆಚ್ಚುವರಿ ನೀರಿಗಾಗಿ ಸ್ಥಳೀಯ ಸಂಸ್ಥೆಯಿಂದ ನೀರಿನ ಸಂಪರ್ಕ ಪಡೆಯಲಾಗಿದೆ. ಮಳೆ ನೀರು ಖಾಲಿಯಾದರೆ ಮಾತ್ರ ಹೊರಗಿನ ಪೈಪ್ ಲೈನ್ ಮೂಲಕ ನಲ್ಲಿ ನೀರು ಪೂರೈಕೆಯಾಗುವ ವ್ಯವಸ್ಥೆ ಇದೆ.

ರಮೇಶ್ ಕಿಕ್ಕೇರಿ ಅವರು ಮನೆ ಕಟ್ಟುವ ಸಂದರ್ಭದಲ್ಲಿಯೇ ಮಳೆ ನೀರು ಸಂಗ್ರಹಕ್ಕೆ ಅನುಕೂಲವಾಗುವಂತೆ 4 ಮೀ. ಉದ್ದ, 3 ಮೀ. ಅಗಲ ಮತ್ತು 7 ಅಡಿ ಆಳದ ನೀರಿನ ಸಂಪ್ ಅನ್ನು ಕಾರಿನ ಶೆಡ್‌ ಜಾಗದಲ್ಲಿ ನಿರ್ಮಿಸಿದ್ದಾರೆ.

ಚಿಕ್ಕಂದಿನಿಂದಲೇ ನೀರಿನ ಮಹತ್ವ ಅರಿತಿದ್ದ ರಮೇಶ್ ಬರಗಾಲ ಬಂದಾಗ ನೀರು ಎಷ್ಟು ಅಮೂಲ್ಯ ಎಂಬುದನ್ನು ಚಿಕ್ಕಂದಿನಿಂದಲೂ ನೋಡಿದ್ದರಿಂದ ನೀರು ಸಂರಕ್ಷಣೆ ಮಾಡಲು ಮನಸ್ಸಾಯಿತು. ಜಲಸಂರಕ್ಷಣೆ ಕುರಿತು ಯು.ಎನ್.ರವಿ ಕುಮಾರ್ ಅವರ ತಿಳಿವಳಿಕೆ, ಅನುಭವ ನನಗೆ ಪ್ರೇರಣೆಯಾಯಿತು. ಈ ಯೋಜನೆಗೆ ಹೊಸ ಮನೆಗಳಾದರೆ 10ರಿಂದ 20 ಸಾವಿರ ರೂ.ವರೆಗೆ ಖರ್ಚಾಗಬಹುದು. ಹಳೆಯ ಮನೆಗಳಾದರೆ ತೊಟ್ಟಿ ನಿರ್ಮಾಣ ಸೇರಿದಂತೆ ನವೀಕರಣ
ಮಾಡಬೇಕಿರುವ ಕಾರಣ 40 ಸಾವಿರ ರೂ. ವರೆಗೆ ಖರ್ಚಾಗಬಹುದು. ಮೈಸೂರಿನಲ್ಲಿ ಬೃಂದಾವನ, ಮಾನಸ, ಟ್ರೆಂಡ್ಸ್ ಅಪಾರ್ಟ್ ಮೆಂಟ್‌ಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಏಕ ಮನೆಗಳನ್ನು ಹೊಂದಿರುವವರು ಜಲ ಸಂರಕ್ಷಣೆ ಮಾಡಿಕೊಂಡರೆ ಬೇಸಿಗೆ ಕಾಲದಲ್ಲಿ ಸಮಸ್ಯೆ ಎದುರಿಸುವುದನ್ನು ತಪ್ಪಿಸಬಹುದಾಗಿದೆ ಎನ್ನುತ್ತಾರೆ ರಮೇಶ್ ಕಿಕ್ಕೇರಿ.

ಮಳೆಗಾಲದಲ್ಲಿ ಸಂಪ್ ತುಂಬಿ ಹೆಚ್ಚುವರಿ ನೀರು ಹೊರಗೆ ಹರಿದು ಹೋಗುವ ವ್ಯವಸ್ಥೆ ಇದೆ. ಮನೆಯ ತಾರಸಿಯಲ್ಲಿ ಬೀಳುವ ನೀರು ನೇರವಾಗಿ ಸಂಪ್‌ಗೆ ಬೀಳುತ್ತದೆ. ಹೆಚ್ಚುವರಿಯಾಗಿ 5 ಸಾವಿರ ರೂ. ವೆಚ್ಚದಲ್ಲಿ ನೀರು ಸಂಸ್ಕರಣಾ ಉಪಕರಣಗಳನ್ನು ಅಳವಡಿಸಿಕೊಂಡಿರುವ ಪರಿಣಾಮವಾಗಿ ನೀರಿನ ಸಮಸ್ಯೆ ಇಲ್ಲವಾಗಿದೆ.

ವಿಶಾಲವಾದ ಜಾಗದಲ್ಲಿ ಸುಂದರವಾದ ಮನೆ ಕಟ್ಟಿಸಿಕೊಂಡು ತಂಪಾದ ಗಾಳಿಗೆ ಮರಗಿಡಗಳನ್ನು ಬೆಳೆಸಿಕೊಳ್ಳುವವರಿಗೆ ರಮೇಶ್ ಕಿಕ್ಕೇರಿ ಅವರ ವಿಧಾನ ಮಾದರಿಯಾಗಿದೆ. ಮುಖ್ಯವಾಗಿ ಹೊಸ ದಾಗಿ ಮನೆ ನಿರ್ಮಿಸುವವರು ಈ ಮಾದರಿಯನ್ನು ಅಳವಡಿಸಿಕೊಂಡರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಿಂದ ಮುಕ್ತರಾಗಬಹುದು ಎನ್ನುವುದು ರಮೇಶ್ ಅವರ ವಿಶ್ವಾಸವಾಗಿದೆ.

ಪರಿಸರ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ರಮೇಶ್ ಕಿಕ್ಕೇರಿ, ಪರಿಸರ ಸಂರಕ್ಷಣೆಯೊಂದಿಗೆ ಮಳೆ ನೀರು ಕೊಯ್ಲಿನ ಬಗ್ಗೆ ಕಾಲೇಜುಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾರೆ.