Mysore
25
light rain

Social Media

ಭಾನುವಾರ, 03 ನವೆಂಬರ್ 2024
Light
Dark

ಗುರುಗಳು ತರಗತಿಗಳಲ್ಲಿ ಮಾತ್ರ ಇರುವುದಿಲ್ಲ

ಇಂದು ಶಿಕ್ಷಕರ ದಿನಾಚರಣೆ. ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಜಯಂತಿಯೇ ಶಿಕ್ಷಕರ ದಿನವಾಗಿ ಗುರುತಿಸಲ್ಪಡುತ್ತಿದೆ. ಮಕ್ಕಳ ಪಾಲಿಗೆ ಪೋಷಕರ ನಂತರದ ಸ್ಥಾನ ಶಿಕ್ಷಕರದ್ದು. ಅಕ್ಷರ ಕಲಿಸಿದಾತ ಗುರು ಅನ್ನುವುದು ನಿಜ. ಆದರೆ, ಬದುಕಿನ ದಾರಿಯಲ್ಲಿ ಸಮಸ್ಯೆಗಳನ್ನು ಎದುರಿಸುವ ಅರಿವು ಮೂಡಿಸಿದ ತಂದೆ ತಾಯಿ, ಒಡಹುಟ್ಟಿದವರು… ಹೀಗೆ ಎಲ್ಲರೂ ಶಿಕ್ಷಕರೇ ಆಗುತ್ತಾರೆ. ಅಂತಹ ಹಲವು ಶಿಕ್ಷಕರ ಸ್ಥರಣೆಗಳು ಇಲ್ಲಿವೆ.

ಅಂತರಂಗದ ಗುರು ಸುಬ್ಬೇಗೌಡರು
ಪ್ರೊ. ಹಿ. ಶಿ. ರಾಮಚಂದ್ರೇಗೌಡ, ಜಾನಪದ ವಿದ್ವಾಂಸರು

ಅಕ್ಕನ ಮನೆಯಲ್ಲಿದ್ದುಕೊಂಡು ಏಳನೇ ಕ್ಲಾಸು ಮುಗಿಸಿದೆ. ಮುಂದೆ ಓದಬೇಕೆಂದು ರಾತ್ರೋ ರಾತ್ರಿ ಊರು ಬಿಟೆ . ಎಷ್ಟೋ ಮೈಲಿ ಹಳ್ಳಿ ಯಿಂದ ಹಳ್ಳಿಗೆ ರಾತ್ರಿ ಹಗಲೆನ ದೆ ನಡೆದು, ಬಾಗಿವಾಳು ತಲುಪಿದೆ. ನಾನು ಆ ಹಳ್ಳಿ ತಲುಪಿದಾಗ ರಾತ್ರಿ ಹತ್ತಾಗಿರಬಹುದು. ಬೆಳಿಗೆ ಒಂಬತ್ತಾದರೂ ಅಲೆ ಮಲಗಿದೆ . ಯಾರೋ ತಬ್ಬಿದಂತಾಗಿ ಎದ್ದು, ಕಣ್ಣು ತೆರೆದರೆ, ಶರ್ಟು, ಪ್ಯಾಂಟು ಧರಿಸಿದ ಸುರದ್ರೂಪಿ ಎತ ರದ ಆಳು. ಬಂದ ವಿಚಾರವನೆ ಲ್ಲ ತಿಳಿಸಿ, ನನ ಮಾರ್ಕ್ಸ್ ಕಾರ್ಡ್ ತೋರಿಸಿದೆ. ಒಬ್ಬ ಯುವಕನನ್ನು ಕರೆದು ಇವನು ಒಕ ಲಿಗರ ಅನಾಥಾಲಯದ ಹುಡುಗ ಅಂತ ಬರೆದುಕೊ ಎಂದರು. ಪಕ ದ ಊರಿನ ನಮ್ಮ ಶಾಲೆಯ ಸೆಕ್ರೆಟರಿ ಮನೆಗೆ ಸೇರಿಸಿದ ಲ್ಲದೆ, ಅವರ ಮನೆಯಲ್ಲಿ ಕೆಲಸ ಮಾಡುತ್ತಾ ಸ್ಕೂಲಿಗೆ ಬಂದು ಓದು ಎಂದರು. ಆಮೇಲೆ ಗೊತ್ತಾಯಿತು ಎತ ರದ ಸುಂದರ ವ್ಯಕ್ತಿ, ಬಿ. ಎನ್. ಸುಬೆ ಗೌಡರು. ಸುಬೆ ಗೌಡರು ತುಮಕೂರಿನಲ್ಲಿ ಬಿಎಸ್ಸಿ ಫೇಲ್ ಆಗಿ, ಬಾಗಿವಾಳಿನಲ್ಲಿ ಮೇಷ್ಟ್ರಾಗಿದ ರು. ಬಡವರು, ನೊಂದವರು, ಪ್ರತಿಭಾವಂತರು ಎಂದರೆ ಆಪ ಪ್ರೀತಿ, ಧಾರಾಳತನದ ನೆರವು, ನಿರಂತರ ಪ್ರೋತ್ಸಾಹ. ಆದರೆ, ಹುಡುಗರು ಪೋಲಿ ಬೀಳಬಾರದೆಂದು ಗದರಿಸಿ, ಹೆದರಿಸಿ ಹತ್ತಿರ ಸೇರಿಸಿಕೊಳ್ಳು ತ್ತಿರಲಿಲ್ಲ. ಪಾಠ ಮಾಡುತ ಲೆ, ಜಗತ ನ್ನು ತೆರೆದಿಡುತ್ತಿದ್ದರು. ನನ್ನ ವೈಚಾ ರಿಕ ಪ್ರಜೆ ತೆರೆದುಕೊಂಡಾಗೆಲ್ಲ ಬಾಗಿವಾಳನ್ನೂ ನನ್ನ ಅಂತರಂಗದ ಗುರು ಬಿ. ಎನ್. ಸುಬ್ಬೇಗೌಡರನ್ನೂ ನೆನೆಯುತ್ತೇನೆ.

—-

ಎದೆಗೆ ಅಕ್ಷರ ಇಳಿಸಿದ ಸಿದ್ದಯ್ಯ ಮೇಷ್ಟ್ರು
ಕೆ. ವೆಂಕಟರಾಜು, ರಂಗಕರ್ಮಿ, ಚಾಮರಾಜನಗರ

೧೯೫೬ರ ಒಂದು ಮಧ್ಯಾಹ್ನ ಮನೆಯವರ ವರಾತ ತಾಳಲಾರದೆ ನಮ್ಮ ತಂದೆ ನಮ್ಮೂರು ಚಾಮರಾಜನಗರದ ಪೇಟೆ ಪ್ರಾಥಮಿಕ ಶಾಲೆಯ ಹೆಡ್ಮಾಸ್ಟರ್ ಆದ ಶ್ರೀ ಸಿದ್ದಯ್ಯನವರ ಮುಂದೆ ನಿಲ್ಲಿಸಿ, ನನ್ನನ್ನು ಅವರಿಗೆ ಒಪ್ಪಿಸಿದರು. ಅವರನ್ನು ನೆನೆದಾಗೆಲ್ಲ ಮುಚ್ಚು ಕೋಟು, ಕಚ್ಚೆಪಂಚೆ ಮತ್ತು ರುಮಾಲಿನಲ್ಲಿಯೇ ಇಂದಿಗೂ ನನ್ನ ಕಣ್ಣಿಗೆ ಗೋಚರಿಸುವುದು. ಒಂದನೆಯ ತರಗತಿಯಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಆರೇಳು ಮಕ್ಕಳ ಗುಂಪು ಮಾಡಿ ಮೇಜಿನ ಸುತ್ತ ನಿಲ್ಲಿಸಿಕೊಂಡು ಕನ್ನಡ ಪಾಠ ಮಾಡುತ್ತಿದ್ದರು. ಒಂದು ಬ್ಯಾಚ್ ಆದ ಮೇಲೆ ಇನ್ನೊಂದು ಬ್ಯಾಚು. ಸ್ಲೇಟಿನಲ್ಲಿ ಕಾಗುಣಿತ ಮತ್ತು ಒತ್ತಕ್ಷರ ತಿದ್ದಲು ಸೀಮೆಸುಣ್ಣ ಬಳಸುತ್ತಿದ್ದರು. ಹೀಗೆಯೇ ಅಕ್ಷರಗಳು ನಮ್ಮ ಎದೆಗೆ ಬಿದ್ದಿದ್ದು. ಒಂದೊಂದು ಮಧ್ಯಾಹ್ನ ನಮ್ಮನ್ನು ಸ್ಕೂಲಿನ ಬಯಲಿಗೆ ಕರೆದುಕೊಂಡು ಹೋಗಿ ಪ್ರಕೃತಿಪಾಠ ಮಾಡುತ್ತಿದ್ದರು. ಕುಸ್ತಿಯಾಟಕ್ಕೆ ಕಳಿಸುತ್ತಾ, ಶಾಲೆಯ ವರಾಂಡದಲ್ಲಿ ಕೂಡಿಸಿ ಬಳೆ ಚೂರುಗಳನ್ನು ಹಾಕಿ ವಿನ್ಯಾಸಗಳನ್ನು ಮಾಡಲು ಪ್ರಚೋದಿಸುತ್ತಿದ್ದರು. ವಿಶಾಲವಾದ ಆವರಣದ ನಡುವೆ ಇದ್ದ ಈ ಶಾಲೆಯ ಮುಂಭಾಗದಲ್ಲಿ ರಾಗಿ ಬೆಳೆದಿದ್ದರು. ತರಗತಿ ನಡೆಯುತ್ತಿರುವಾಗ ನಡುನಡುವೆ ಅವರು ರುಮಾಲನ್ನು ಒಂದು ಕ್ರಮದಲ್ಲಿ ಸುತ್ತಿಕೊಳ್ಳುತ್ತಿದ್ದರು. ನಮಗೆ ಅದೊಂದು Non – verbal ಪಾಠ.

—–

ಅಪ್ಪ ಅಮ್ಮನೇ ಬಾಳಿನ ಟೀಚರ್
ಪ್ರೊ. ಎಂ. ಪುಷ್ಪಾವತಿ, ನಿರ್ದೇಶಕಿ, ಅಖಿಲ ಭಾರತ ವಾಕ್ -ಶ್ರವಣ ಸಂಸ್ಥೆ

ನನಗೆ ಮನೆಯೇ ಮೊದಲ ಪಾಠಶಾಲೆ. ತಾಯಿ ಮಾತ್ರ ಅಲ್ಲ, ತಂದೆಯೂ ಬದುಕಿನ ಗುರು. ಕಠಿಣ ಪರಿಶ್ರಮ, ಪ್ರಾಮಾಣಿಕವಾಗಿ ಜೀವನ ಮಾಡಬೇಕೆಂಬ ವಿವೇಕವನ್ನು ಕಲಿಸಿಕೊಟ್ಟ ನನ್ನ ಗುರು, ತಂದೆ ಎಂ. ಮರಿಸ್ವಾಮಿ ಅವರು. ತಿ. ನರಸೀಪುರದ ಮೂಗೂರು ಎಂಬ ಹಳ್ಳಿಗಾಡಿನಿಂದ ಮೈಸೂರಿಗೆ ಬಂದರು. ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳಾಗಿ ತಂದೆಯವರು ಸೇವೆ ಸಲ್ಲಿಸಿದ್ದರು. ಯಾರೇ ಆಸೆ, ಆಮಿಷ ಒಡ್ಡಿದರೂ ಕ್ಯಾರೇ ಎನ್ನದೆ, ದಕ್ಷ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದುದ್ದನ್ನು ಹತ್ತಿರದಿಂದ ಕಂಡಿದ್ದೆ. ಬಾಯಿಮಾತಿನ ಬೋಧನೆ ಮಾಡದೇ, ತಮ್ಮ ಬದುಕಿಗೂ ಅದನ್ನು ಅಳವಡಿಸಿಕೊಂಡ ತಂದೆಯನ್ನು ನೋಡುತ್ತಾ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತಿತ್ತು. ಜೀವನದಲ್ಲಿ ಹೊಂದಾಣಿಕೆಯ ಮಹತ್ವ ಹೇಳಿದ ತಾಯಿ ವಿಜಯಮ್ಮ ನನ್ನ ಬದುಕಿನ ಗುರು. ಹಳ್ಳಿಮುಗ್ಧೆಯಾಗಿದ್ದ ಅಮ್ಮನಿಗೆ ಹದಿಮೂರು ವರ್ಷಕ್ಕಾಗಲೆ ಮದುವೆಯಾಗಿತ್ತು. ತುಂಬು ಕುಟುಂಬವನ್ನು ನಿಭಾಯಿಸಿದ ರೀತಿ, ಮನೆಜನರ ಪಾಲಿಗೆ ದೇವತೆಯಾಗಿದ್ದವಳು ನನ್ನಮ್ಮ. ಕಷ್ಟ ಎದುರಾದಾಗೆಲ್ಲ, ಎದೆಗುಂದದೆ ಪಾಠ ಕಲಿಸಿದ್ದಳು. ವಿಪರ್ಯಾಸ ಎನ್ನಬೇಕೊ ಗೊತ್ತಿಲ್ಲ. ಸೆಪ್ಟೆಂಬರ್ ಐದು, ನನ್ನ ಟೀಚರ್, ತಂದೆಯವ ರನ್ನು ಕಳೆದುಕೊಂಡ ದಿನ. ಶಿಕ್ಷಕರ ದಿನವೆಂದು ಎಲ್ಲ ಶುಭ ಹಾರೈಸುವಾಗ ಮನಸ್ಸು ತಂದೆಯನ್ನು ನೆನೆದು, ಕಣ್ಣಂಚನ್ನು ಒದ್ದೆಯಾಗಿಸುತ್ತದೆ.

ಕೈ ಬರಹದಲ್ಲೇ ತಿದ್ದಿ ಅಂಚೆಗೆ ಹಾಕುತ್ತಿದ್ದ ಯುಆರ್‌ಎ ಮೇಷ್ಟ್ರು
ಸುರೇಶ್ ಕಂಜರ್ಪಣೆ, ಲೇಖಕ ಮತ್ತು ಅಂಕಣಕಾರ

ಅಪ್ಪನ ಹೆಗಲ ಮೇಲೆ ಕೂತು, ಮಗು ಇನ್ನೂ ದೂರದ್ದು ನೋಡಿದ ಹಾಗೆ ನಾವೆಲ್ಲಾ ನಮ್ಮ ಮೇಷ್ಟ್ರುಗಳ ಹೆಗಲೇರಿಯೇ ಬೆಳೆದಿದ್ದು. ಹೆಸರು ದೊಡ್ಡದೆಂಬ ಕಾರಣಕ್ಕೆ ನಾನು ಸ್ಮರಿಸಿಕೊಳ್ಳುತ್ತಿಲ್ಲ. ಯುಆರ್‌ಎ ಅಂಥಾ ಮೇಷ್ಟ್ರು. ಕ್ಲಾಸಿನೊಳಗೂ, ಹೊರಗೂ ನಮ್ಮನ್ನು ಬೆಳೆಸುವ ಎಚ್ಚರ ಹೊಂದಿದ್ದವರು. “ಏನು ಬರೆದಿದ್ದೀಯಾ? ಕೊಡು? ” ಅಂತ ಹೇಳುವುದರಿಂದ ಹಿಡಿದು, ಓದಿನ ಸೂಕ್ಷ್ಮಗಳನ್ನೂ ಕಲಿಸಿದ ಗುರು. ನಾವು ಓದುತ್ತಿದ್ದಾಗ ಟ್ಯುಟೋರಿಯಲ್ಸ್ ಅಂತಿತ್ತು. ಒಬ್ಬೊಬ್ಬ ಮೇಷ್ಟ್ರ ಸುಪರ್ದಿಯಲ್ಲಿ ಆರೆಂಟು ಮಕ್ಕಳಿದ್ದು, ವಾರಕ್ಕೊಮ್ಮೆ ಬೆಳಿಗ್ಗೆ ಎಂಟು ಗಂಟೆಗೇ ಅವರ ಚೇಂಬರಿನಲ್ಲಿ ಸಿಲೆಬಸ್ ಬಿಟ್ಟು ಮತ್ತೆ ಯಾವುದರ ಬಗ್ಗೆಯಾದರೂ ಮುಕ್ತ ಚರ್ಚೆಯ ಸಂಗತಿ ಅದು. ಯುಆರ್‌ಎ ನಮ್ಮನ್ನು ಕ್ಯಾಂಟೀನಿಗೆ ಕರೆದುಕೊಂಡು ಹೋಗಿ, ತಿಂಡಿ ಟೀ ಕೊಡಿಸಿ ಮಾತಾಡೋರು. ನಾವೇನಾದರು ಬರೆದಿದ್ದರೆ ಓದಬಹುದು, ಅದರ ಬಗ್ಗೆ ಚರ್ಚೆ. ಒಂದು ಪದ್ಯದ ಬಗ್ಗೆ ಪ್ರಾಕ್ಟಿಕಲ್ ಕ್ರಿಟಿಸಿಸಂನ ಓದು. ಅತೀ ಒಪಿನಿಯನ್ ಹೇಳುವು ದನ್ನು ಮಾಡಕೂಡದು ಎಂದು ತಣ್ಣಗೆ ಹೇಳಿಕೊಡುತ್ತಿದ್ದರು. ನಾನು ಊರಲ್ಲಿದ್ದಾಗ ಬರೆದ ಪದ್ಯಗಳನ್ನು ಯುಆರ್‌ಎ ಮೇಷ್ಟ್ರಿಗೆ ಅಂಚೆಯಲ್ಲಿ ಕಳಿಸುತ್ತಿದ್ದೆ. ಅವರು ಆ ಪುಟಗಳ ಮಾರ್ಜಿನ್‌ನಲ್ಲಿ ಕಮೆಂಟ್ ಹಾಕಿ ಮತ್ತೆ ಪೋಸ್ಟ್ ಮಾಡೋರು. ಕವನಗಳಲ್ಲಿರೋ ನಾಟಕೀಯತೆ, ಸಡಿಲು ಸಾಲು ಎಲ್ಲವನ್ನೂ ಸೂಚಿಸೋರು. ಅಂಥಾ ಒಂದು ಪುಟದಲ್ಲಿ “ ಮಾಸ್ತರನ ಹಾಗೆ ಮಾರ್ಜಿನ್‌ನಲ್ಲಿ ಬರೆದದ್ದನ್ನು ನನ್ನ ಪ್ರಿಯ ಶಿಷ್ಯರಲ್ಲೊಬ್ಬನಾಗಿ ಕ್ಷಮಿಸು” ಎಂಬ ಒಕ್ಕಣೆ ಬರೆದಿದ್ದರು. ಬಾಳಲ್ಲಿ ಕೆಲವು ಭಾಗ್ಯ ಆಯಾಚಿತ. ಮೇಷ್ಟ್ರಶಿಷ್ಯನಾಗಿದ್ದು ಅಂಥಾ ಭಾಗ್ಯ. ಮೊನ್ನೆ ಒಂದು ಕಾಗದ ವಿಲಿವಿಲಿ ಒದ್ದಾಡುತ್ತಿದ್ದುದು ಸಿಕ್ಕಿತು. ಈ ಕವನ ಆ ಪುಟದಿಂದ ಎತ್ತಿದ್ದು.

ಹಲವು ಗುರುಗಳಿಂದ ಕಲಿತವಳು ನಾನು
ಡಾ. ಹೆಚ್. ಆರ್. ಲೀಲಾವತಿ, ಹೆಸರಾಂತ ಗಾಯಕಿ

ಜೀವನದಲ್ಲಿ ಯಾರೋ ಒಬ್ಬರನ್ನು ಮಾತ್ರ ಗುರುವೆಂದು ಕರೆಯಲು ನನ್ನಿಂದಾಗದು. ಜೀವನದ ಸಂಸ್ಕಾರ ಪಾಠವನ್ನು ಕಲಿಸಿದವರು, ನನ್ನ ತಂದೆ, ತಾಯಿ. ಸಂಗೀತ ಗುರುಗಳು, ಎನ್. ಚೆನ್ನಕೇಶವಯ್ಯ ಅವರು. ಹನ್ನೆರಡು ವರ್ಷಗಳವರೆಗೆ ಸಂಗೀತವನ್ನು ಧಾರೆ ಎರೆದ ಪ್ರಾತಃ ಸ್ಮರಣೀಯರು. ಎಷ್ಟು ಪ್ರೀತಿ, ಆತ್ಮೀಯತೆ, ಶ್ರದ್ಧೆಯಿಂದ ಪಾಠ ಕಲಿಸುತ್ತಿದ್ದರೆಂದರೆ, ಅವರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಭಕ್ತಿಯಿಂದ ತಲೆಬಾಗುತ್ತದೆ. ದುರ್ಬೀನು ಹಿಡಿದು, ಹುಡುಕಿದರೂ ಅಂದುಕೊಳ್ಳುತ್ತೇನೆ. ‘ಮಗೂ, ನೀನು ತುಂಬ ಚೆನ್ನಾಗಿ ಹಾಡ್ತೀಯಾ. ಅಹಂಕಾರ ಬೆಳೆಸಿಕೊಳ್ಳಬೇಡ. ಯಾರಾದ್ರೂ ಹಾಡಮ್ಮಾ ಅಂತ ಪ್ರೀತಿಯಿಂದ ಕೇಳಿದ್ರೆ ಯಾವುದೇ ಮುಜುಗರವಿಲ್ಲದೆ ಹಾಡ್ಬೇಕಮ್ಮಾ’ ಎಂಬ ಅವರ ಮಾತುಗಳು ಇವತ್ತಿಗೂ ನೆನಪಿದೆ. ಭಾವಗೀತೆಯ ಗುರುಗಳಾದ ಪದ್ಮ ಚರಣ್ ಸಾಹಿತ್ಯದ ಅಂತಃಸತ್ವವನ್ನು ಅರ್ಥೈಸಿದವರು. ಧ್ವನಿ, ಸ್ವರ, ರಸ, ಅರ್ಥ ಭಾವಗಳ ಕುರಿತು ಅವರಾಡಿದ ಮಾತು ಕಿವಿ ಯಲ್ಲಿ ಗುನುಗುತ್ತಿದೆ. ಶಿಕ್ಷಣ, ಕಲೆಯ ಪಾಠದ ಜೊತೆಗೆ ಬದುಕಿನ ಶಿಕ್ಷಣವನ್ನು ಹೇಳಿಕೊಟ್ಟ ಗುರು ಎಂದರೆ ನನ್ನ ಪಾಲಿಗದು ಪ್ರಕೃತಿ. ಪ್ರಯತ್ನ ನಿರಂತರ ವಾಗಿರಬೇಕು ಎಂದು ಜೇಡನನ್ನು ಕಂಡು ಕಲಿತಿದ್ದಿದೆ. ಬೇಸರವಾದಾ ಗೆಲ್ಲ, ಸಂಜೆ ಬಾಡುತ್ತೇನೆಂದು ತಿಳಿದಿದ್ದರೂ ಹಗಲಿಡೀ ನಗುವ ಹೂ ನೋಡಿದ್ದಿದೆ. ಒಟ್ಟಿನಲ್ಲಿ ಕಲೆ, ಸಾಹಿತ್ಯದ ಬದುಕಿನ ಗುರುಗಳಂತೆ ಜೀವನಕ್ಕೆ ಅಗತ್ಯ ಪಾಠಗಳನ್ನು ಹೇಳುವ ಪ್ರಕೃತಿಯನ್ನೂ ಈ ದಿನ ನೆನೆಯುತ್ತೇನೆ.

—-

ಪ್ರೀತಿಯ ರಾಜಶೇಖರ ಮೇಷ್ಟ್ರು
ಇಲ್ಯಾಸ್ ಅಹ್ಮದ್ ಖಾನ್, ನಿವೃತ್ತ ಪ್ರಾಂಶುಪಾಲರು

ಆಗಲೇ ನಾನು ರಾಜ್ಯಶಾಸ್ತ್ರದ ಅಧ್ಯಯನ ಕೈಬಿಟ್ಟು ಕನ್ನಡ ಮೇಜರ್ ಓದೋಣ ಎಂದು ನಿರ್ಧರಿಸಿದ್ದೆ. ಇಂತಹ ಅನೇಕ ಪಾಠಗಳನ್ನು ಪಿ. ಕೆ. ರಾ. ಅವರಿಂದ ಕೇಳಬಹುದೆಂದು ಕೊಂಡೆ. ಆಗ ಮೇಜರ್ ಕನ್ನಡದಲ್ಲಿ ಕಡಿಮೆ ವಿದ್ಯಾರ್ಥಿಗಳಿದ್ದರಿಂದ ಗುರುಗಳ ಹೆಚ್ಚು ಸಾಮಿಪ್ಯ ಸಿಗುತ್ತೆ, ಅವರ ಜೊತೆ ಹೆಚ್ಚು ಹೊತ್ತು ಕಾಲ ಕಳೆದು ಕಲಿಯಬಹುದು ಎಂದೆಲ್ಲ ತಿಳಿದು ಪ್ರಾಂಶುಪಾಲರ ಒಪ್ಪಿಗೆ ಪಡೆದು ಎಚ್‌ಇಕೆ ಕಾಂಬಿನೇಷನ್‌ಗೆ ಬದಲಾಯಿಸಿಕೊಂಡೆ. ಪಿ. ಕೆ. ರಾಜಶೇಖರ ರವರ ಪಾಠಗಳನ್ನು ಹೆಚ್ಚೆಚ್ಚು ಸಂತಸದಿಂದ ಆಲಿಸಿದೆ. ಅವರ ಮನೆಗೇ ಹೋಗಿ ಕೆಲವು ಪುಸ್ತಕದ ಹೆಸರುಗಳನ್ನು ತಿಳಿದು, ಅವುಗಳನ್ನು ಕೊಂಡು ಓದಿದೆ. ಅವರು ಕ್ಲಾಸ್ ಮುಗಿಸಿ ಕಾಫಿಗೆ ಕರೆದುಕೊಂಡು ಹೋಗುತ್ತಿದ್ದುದು, ನಾನಾ ರೀತಿಯ ಹರಟೆ ಹೊಡೆಯುತ್ತಿದ್ದುದು ನನ್ನ ವಿದ್ಯಾರ್ಥಿ ಜೀವನದ ರಸನಿಮಿಷಗಳಾಗಿದ್ದವು. ಯಶೋಧರಾ ನಾಟಕದ ಬಗ್ಗೆ ಪ್ರಬಂಧ ಬರೆಯಲು ಕೊಟ್ಟಾಗ ಶ್ರದ್ಧೆಯಿಂದ ಬರೆದುಕೊಂಡು ಹೋಗಿದ್ದೆ. ಅದು ತುಂಬಾ ಚೆನ್ನಾಗಿದೆಯೆಂದು ತರಗತಿಯಲ್ಲಿ ಹೊಗಳಿ ಪ್ರೋತ್ಸಾಹಿಸಿ ‘ಲೋ ನೀನು ಕವಿ ನಿಸಾರ್ ಅಹ್ಮದ್ ಅವರಂತೆ ಆಗುತ್ತೀಯ’ ಎಂದು ಬೆನ್ನು ತಟ್ಟಿದ್ದರು. ಶಬ್ದಮಣಿದರ್ಪಣ ದಲ್ಲಿ ಮೈ. ವಿ. ವಿ. ಗೆ ಹೆಚ್ಚು ಅಂಕ ಗಳಿಸಿದ ನನಗೆ ವೆಂಕಣ್ಣಯ್ಯ ಸ್ಕಾಲರ್ ಶಿಪ್ ದೊರೆತಿತು. ಮುಂದೆ ಕನ್ನಡ ಎಂ. ಎ. ಮಾಡಲು ಸಹಾಯವಾಯಿತು. ಪಿ. ಕೆ. ರಾ. ಅವರ ತಾಯ್ತನದ ವಾತ್ಸಲ್ಯ ಅನುಭವಿಸಿದ ನಾನು ಕನ್ನಡ ಉಪನ್ಯಾಸಕನಾಗಿ, ಪ್ರಾಂಶುಪಾಲನಾಗಿ ನಿವೃತ್ತನಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ.

ದಾರಿ ತೋರಿದ ಇಬ್ಬರು ಗುರುಗಳು
ಮಂಡ್ಯ ರಮೇಶ್, ನಟ ಮತ್ತು ನಿರ್ದೇಶಕ

ಹೈಸ್ಕೂಲು ದಾಟಿ, ನಾನು ಕಾಲೇಜಿಗೆ ಬರುತ್ತಿದ್ದಂತೆಯೇ ಅದಾಗಲೇ ಪ್ರತಿಭಟನೆಯ ಅಸ್ತ್ರವಾಗಿ ರಂಗಭೂಮಿಯನ್ನು ಬಳಸಿಕೊಂಡಿರುವುದು ಅರಿವಾಗತೊಡಗಿತು. ಜನಜಾಗೃತಿಯ ಸಂಕೇತವೂ ಆಗಿತ್ತು. ಬೀದಿನಾಟಕಗಳನ್ನು ನೋಡುತ್ತಾ, ಕಲಿಯುತ್ತಿದ್ದೆ. ಆ ಸಂದರ್ಭದಲ್ಲಿ ನನಗೆ ದಾರಿ ತೋರಿದ ಗುರುಗಳಿಬ್ಬರಲ್ಲಿ ಒಬ್ಬರು ಕೆ. ವಿ. ಸುಬ್ಬಣ್ಣ, ಮತ್ತೊಬ್ಬರು ಬಿ. ವಿ. ಕಾರಂತರು. ಇವರಿಬ್ಬರೂ ಕನ್ನಡ ರಂಗಭೂಮಿಯ ಪ್ರಜ್ಞಾವಂತಿಕೆಯನ್ನು ನೂರಾರು ಜೀವಗಳಿಗೆ ವಿಸ್ತರಿಸಿದವರು. ಇವತ್ತು ನಾನೊಬ್ಬ ಗುರುವಾಗುವುದಕ್ಕೆ, ಇವರಿಬ್ಬರಿಂದ ಕಲಿತದ್ದು ಬಹಳಷ್ಟಿದೆ. ಹಳ್ಳಿಗಾಡಿನಿಂದ ಬಂದ ಸಾಮಾನ್ಯನಿಗೆ ಹೇಗೆ ಹೇಳಿದರೆ ಅರ್ಥೈಸಿಕೊಳ್ಳಬಲ್ಲ? ಎಂಬ ಸೂಕ್ಷ್ಮತೆಯನ್ನು ಅವರಿಂದಲೇ ತಿಳಿದುಕೊಂಡೆ. ಒಬ್ಬ ನಟನ ನಿಲುವು, ಆತನ ವಿಚಾರಶಕ್ತಿ, ರಾಜಕೀಯ ಧೋರಣೆಗಳು, ಮನುಷ್ಯ ಪಂಥಕ್ಕೆ ಅಂಟಿಕೊಂಡು ಯಾಕೆ ಕೆಲಸ ಮಾಡಬೇಕು? ಮನಸ್ಸು ಮುಕ್ತವಾಗಿರಬೇಕೆಂಬ ಇತ್ಯಾದಿ ವಿಷಯಗಳನ್ನು ಸ್ಪಷ್ಟವಾಗಿ ಮತ್ತು ಸರಳವಾಗಿ ಹೇಳಿಕೊಟ್ಟಿದ್ದರು. ಈಗನಿಸುತ್ತದೆ, ಬಹುಶಃ ಅವರಿಬ್ಬರೂ ಅಂದು ನನಗೆ ದಾರಿ ತೋರದಿದ್ದರೆ, ನೂರಾರು ಜನರಲ್ಲಿ ನಾನೂ ಒಬ್ಬನಾಗುತ್ತಿದ್ದೆ, ಅವರಲ್ಲಿ ಕಳೆದುಹೋಗುತ್ತಿದ್ದೆ. ಆದರೆ, ಇವತ್ತು ಬೇರೆಯೇ ಆಗಿ ನಿಂತಿದ್ದೇನೆ ಎಂದರೆ ಅದು ಈ ಗುರುಗಳಿಂದಲೇ. ಕೆಲವೊಮ್ಮೆ ನಾನು ನಾಟಕ ಕಲಿಸುತ್ತಿದ್ದರೂ ವಿದ್ಯಾರ್ಥಿಗಳು ಗುರುವಾಗಿಬಿಡುತ್ತಾರೆ. ರಂಗಭೂಮಿ ಎಂಬುದೇ ಒಂದು ದೊಡ್ಡ ಗುರು. ಹಾಗೇ ಬದುಕು, ಅನುಭವ, ಅರಿವು ಎಲ್ಲವೂ ನನ್ನ ಪಾಲಿಗೆ ಗುರುವೇ.

—-

ದಾರಿ ತೋರಿದ ಅಕ್ಕ ರೇವತಿ
ಬಿ. ವಿ. ಭಾರತಿ, ಲೇಖಕಿ

ದಶಕಗಳ ಹಿಂದೆ ಮನೆ ಬಿಟ್ಟು ಹೊರಡುವುದೆಂದರೆ ಮಹಾನ್ ಮೈಗಳ್ಳಿಯಾಗಿದ್ದೆ ನಾನು. ಅಡುಗೆ ಮಾಡಿಕೊಂಡು, ಬಟ್ಟೆ ಮಡಿಸಿಕೊಂಡು, ಮಗನನ್ನು ಓದಿಸಿಕೊಂಡು ಇದ್ದುಬಿಡೆಂದರೆ ಅದೇ ಸ್ವರ್ಗ! ಇಂಥ ನಾನು ಹೊರಗೆ ದುಡಿಯುವ ಯೋಚನೆಯನ್ನೂ ಮಾಡುವುದು ಅಸಾಧ್ಯವಾಗಿತ್ತುನಮ್ಮ ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿದ್ದರೂ ಸಹ. ಹೀಗಿರುವಾಗ ಒಂದು ದಿನ ನನ್ನಕ್ಕ ರೇವತಿ ‘ಅದು ಸರಿ, ಇಡೀ ದಿನ ಮನೇಲಿ ಕೂತ್ಕೊಂಡಿರೋ ಬದಲು ಎದ್ದು ನಿನ್ನ ಗಂಡನ ಜೊತೆ ಹೋಗಿ ಫ್ಯಾಕ್ಟರಿ ನೋಡ್ಕೋಬಾರದಾ? ’ ಅಂತ ಶುರು ಮಾಡಿದಳು. ನಾನು ಆ ಕೂಡಲೇ ಹೋಗಿ ನಾನಾ ನೆಪಗಳನ್ನು ಕೊಡುತ್ತಾ ಹೋದೆ. ಅವಳಿಗೆ ಗೊತ್ತಿಲ್ಲದ್ದಾ ನನ್ನ ಮೈಗಳ್ಳತನ! ನನ್ನ ವಾದಗಳನ್ನೆಲ್ಲ ತುಂಡರಿಸಿ ಬಿಸಾಕಿ, ಕೆಲಸಕ್ಕೆ ಹೊರಡು ಅಂತ ಬೆನ್ನು ಬಿದ್ದಳು. ಆಗ ಅವಳನ್ನು ಬಯ್ದುಕೊಂಡು ಕೆಲಸಕ್ಕೆ ಹೋದೆನಾದರೂ, ಬದುಕಿನ ಈ ಘಟ್ಟದಲ್ಲಿ ನಿಂತು ಹಿಂದಿರುಗಿ ನೋಡಿದಾಗ, ಅವಳು ಒತ್ತಾಯ ಮಾಡಿದ್ದು ಎಷ್ಟು ಒಳ್ಳೆಯದಾಯ್ತು ಅನ್ನಿಸುತ್ತದೆ. ಬರೀ ಶಾಲೆಯಲ್ಲಿ ಪಾಠ ಕಲಿಸುವವರಷ್ಟೇ ಅಲ್ಲ, ಬದುಕಲು ಕಲಿಸುವವರೂ ಗುರುಗಳೇ ಅಲ್ಲವಾ?

—-

ಮಾತು ನಿಲ್ಲಿಸಿ ಎದ್ದು ಹೋದ ರಾಮು ಮೇಷ್ಟ್ರು
ಡಾ. ಎಸ್. ತುಕಾರಾಮ್, ಲೇಖಕ ಮತ್ತು ಚಿಂತಕ

ಕುಕ್ಕರಹಳ್ಳಿಯ ನಮ್ಮ ಮನೆಗೆ ಬಾಡಿಗೆಗೆಂದು ‘ಮಹಾದೇವಪ್ಪ ಸ್ಮಾರಕ ಮಾರ್ಕ್ಸ್‌ವಾದಿ ಗ್ರಂಥಾಲಯ” ಬಂದಿತು. ಅಪಾರ ಜ್ಞಾನ, ತಿಳಿವಳಿಕೆಯುಳ್ಳ ದಂಡೇ ಈ ಗ್ರಂಥಾಲಯಕ್ಕೆ ಬಂದು ಹೋಗುತ್ತಿತ್ತು. ಅವರಲ್ಲಿ ನನಗೆ ಇಂಗ್ಲಿಷ್ ಪಾಠ ಹೇಳಿಕೊಟ್ಟು ಮುಂದಿನ ಓದಿಗೆ ಕೈಹಿಡಿದು ನಡೆಸಿದ ಪಾಠದ ಮೇಷ್ಟ್ರು ಅದೃಷ್ಟದಂತೆ ಬಂದರು. ನನ್ನೊಬ್ಬನಿಗಲ್ಲ ನನ್ನಂಥ ನನ್ನೂರಿನ ನನ್ನ ವಾರಿಗಿಯವರಿಗೂ ಆಸರೆ ಸಿಕ್ಕಿತು. ಮುಂದೆ ಗಂಗೋತ್ರಿ ತನಕ ಆ ವ್ಯಕ್ತಿತ್ವ ಕರೆದೊಯ್ದು, ಬದುಕಿನ ದಡಮುಟ್ಟುವತನಕ ತಾಯಿ ನೆರಳಿನಂತೆ ಕಾಪಾಡಿತು. ೭೦-೮೦ರ ದಶಕದಲ್ಲಿ ಉದಯಿಸಿದ ದಲಿತ ಚಳವಳಿಯಲ್ಲಿ ಭಾಗಿಯಾಗಲು, ಮಾರ್ಕ್ಸ್‌ವಾದಿ ವಿಚಾರ ತಿಳಿಯಲು, ಗಾಂಽ, ಅಂಬೇಡ್ಕರ್ ಅವರನ್ನು ಓದಲು ಪುಸ್ತಕಗಳನ್ನು ಕೊಟ್ಟರು. ಹೆಸರಾಗಿದ್ದ ಕೆಲವು ಕವಿ, ಸಾಹಿತಿಗಳು, ಸಂಗೀತಗಾರರು ಮತ್ತು ಕಲಾವಿದರುಗಳ ಪರಿಚಯ ಮಾಡಿಕೊಟ್ಟು, ಪಠ್ಯಪುಸ್ತಕದಾಚೆಗಿನ ಓದಿನ ಲೋಕ ಪರಿಚಯಿಸಿದರು. ಪ್ರೌಢಾವಸ್ಥೆಯಲ್ಲಿ ಗಳಿಸಬೇಕಾದ ತಿಳಿವಳಿಕೆಯನ್ನು ಕೊಟ್ಟರು. ಈ ಬಗ್ಗೆ ನೂರಾರು ನೆನಪುಗಳಿವೆ. ಆಡಬೇಕಾಗಿದ್ದ ಮಾತಿನ್ನೂ ಮುಗಿದಿರಲಿಲ್ಲ. ಅದೇಕೋ ಅರ್ಧಕ್ಕೆ ಮಾತು ನಿಲ್ಲಿಸಿ ಎದ್ದು ಹೊರಟೇಬಿಟ್ಟರು. ಬದುಕನ್ನು ಬರಿದಾಗಿಸಿಕೊಳ್ಳದೆ ಲೋಕಹಿತ ಶಿಕ್ಷಣಕ್ಕಾಗಿ ಮಿಡಿಯುವಂತೆ ಮಾಡಿದ ಆ ವ್ಯಕ್ತಿತ್ವವೇ ರಾಮು.

ತಂದೆಯೇ ಸಂಗೀತದ ಗುರು
ಮೈಸೂರು ಎಂ. ನಾಗರಾಜ್, ಹೆಸರಾಂತ ಪಿಟೀಲು ವಾದಕ

ನನ್ನ ತಂದೆಯೇ ನನಗೆ ಗುರುಗಳಾಗಿದ್ದು, ನನ್ನ ಅದೃಷ್ಟ. ಪ್ರಖ್ಯಾತ ವಯಲಿನ್ ವಾದಕರಾಗಿದ್ದ ನಮ್ಮ ತಂದೆ ವಿದ್ವಾನ್ ಎಂ. ಮಹದೇವಪ್ಪನವರು ಚಿಕ್ಕಂದಿನಿಂದಲೂ ನನಗೆ ಮತ್ತು ನನ್ನ ಸಹೋದರ ಮಂಜುನಾಥ್‌ರವರಿಗೆ ವಯಲಿನ್ ವಾದನವನ್ನು ಶ್ರೇಷ್ಠವಾದ ರೀತಿಯಲ್ಲಿ ತರಬೇತಿ ನೀಡಿದರು. ಇದರಿಂದಾಗಿ ಇಂದು ಭಾರತದ ಶ್ರೇಷ್ಠ ವಯಲಿನ್ ವಾದಕರ ಪಟ್ಟಿಯಲ್ಲಿ ನಾನು ಮತ್ತು ನನ್ನ ಸಹೋದರ ಗುರುತಿಸಿಕೊಳ್ಳಲು ನಮ್ಮ ತಂದೆಯವರೇ ಕಾರಣ. ನಮ್ಮ ತಂದೆ ವಿಶ್ವದಾದ್ಯಂತ ನೂರಾರು ಶಿಷ್ಯರನ್ನು ಹೊಂದಿದ್ದಾರೆ. ಅವರು ನಮಗೆ ಮನೆಯಲ್ಲಿಯೇ ಸಂಗೀತದ ಶಿಕ್ಷಣದ ಜತೆಗೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೇಗೆ ಬದುಕಬೇಕು ಎಂಬುದನ್ನೂ ಕಲಿಸಿಕೊಟ್ಟಿದ್ದಾರೆ. ಶಿಸ್ತು, ಸಂಯಮವನ್ನೂ ಅವರನ್ನು ನೋಡಿಯೇ ಕಲಿತ್ತಿದ್ದೇವೆ. ನಮ್ಮ ತಂದೆಯವರು ಟಿ. ಚೌಡಯ್ಯನವರ ಕಿರಿಯ ಸಹೋದರ ತಿರಮಕೂಡಲು ಪುಟ್ಟಸ್ವಾಮಯ್ಯರವರ ಬಳಿ ವಯಲಿನ್ ತರಬೇತಿ ಪಡೆದು ವಯಲಿನ್ ವಾದನದಲ್ಲಿ ಪರಿಣತಿ ಪಡೆದವರು. ನಾವು ಅವರಿಂದ ಕಲಿತಿದ್ದೇವೆ ಎಂಬುದೇ ನಮ್ಮ ಹೆಮ್ಮೆ. ಅಂತಹ ಗುರುಗಳನ್ನು ಪಡೆದ ನಾವೇ ಧನ್ಯರು. ಸಂಗೀತ ಕ್ಷೇತ್ರದಲ್ಲಿ ನಾವು ಮನೆಮಾತಾಗಿದ್ದೇವೆ ಎಂದರೆ ಅದಕ್ಕೆ ನಮ್ಮ ತಂದೆಯವರ ಶಿಕ್ಷಣವೇ ಮುಖ್ಯ. ಇಂತಹ ಸಂದರ್ಭದಲ್ಲಿ ನಮ್ಮ ತಂದೆಯವರನ್ನು ನಾನು ಸ್ಮರಿಸುತ್ತೇನೆ.

ಗುರುವಾಗಿದ್ದ ತಂದೆ ದೂಮಣ್ಣ ರೈಗಳು
ಡಾ. ಧರಣೀದೇವಿ ಮಾಲಗತ್ತಿ, ಲೇಖಕಿ ಮತ್ತು ನಿರ್ದೇಶಕರು, ಕನ್ನಡ ಮತ್ತು ಸಂಸ್ಕತಿ ಇಲಾಖೆ

ನನಗೆ ವಿದ್ಯೆ ಕಲಿಸಿದ ಎಲ್ಲ ಗುರುಗಳಿಗೂ ನಾನು ವಂದನೆಗಳನ್ನು ಸಲ್ಲಿಸುತ್ತೇನೆ. ವಿಶೇಷವಾಗಿ ನಾನು ಈ ಸಂದರ್ಭದಲ್ಲಿ ನನ್ನ ತಂದೆಯಾಗಿ, ಗುರುವಾಗಿ ಎರಡೂ ನೆಲೆಯಲ್ಲಿ ನನ್ನನ್ನು ತಿದ್ದಿ, ತೀಡಿ ರೂಪಿಸಿದ ಮಹಾನ್ ವ್ಯಕ್ತಿತ್ವ ಪಿ. ದೂಮಣ್ಣ ರೈರವರನ್ನು ಸ್ಮರಿಸುತ್ತೇನೆ. ನಮ್ಮ ತಂದೆ ಯಕ್ಷಗಾನ ತಾಳಮದ್ದೆಳೆಗಳಲ್ಲಿ ಅರ್ಥಧಾರಿಯಾಗಿ ಮಾಗಧ ವಧೆಯ ‘ಕೃಷ್ಣ’, ಕರ್ಣಾಜುನ ಕಾಳಗದ ‘ಶಲ್ಯ’ ಪಂಚವಟಿಯ ‘ರಾಮ’ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಸಾವಿರಾರು ಜನರಿಗೆ ಅಚ್ಚುಮೆಚ್ಚಿನ ಶಿಕ್ಷಕರು. ನೂರಾರು ಶಿಷ್ಯಂದಿರಿಗೆ ತಾಳಮದ್ದಳೆಯ ಗುರುಗಳು. ಮನೆಯೇ ಪಾಠಶಾಲೆಯಾಗಿ ನೈತಿಕತೆಯ ಪಾಠವನ್ನೂ, ನ್ಯಾಯದ ದಾರಿಯಲ್ಲಿ ಎಂದೂ ವಿಚಲಿತರಾಗಬಾರದೆನ್ನುವ ಪಾಠವನ್ನೂ ಕಲಿಸುತ್ತಾ ಶಿಕ್ಷಕರಾಗಿ- ಶಾಲೆಯಲ್ಲಿ ಕನ್ನಡ ಸಾಹಿತ್ಯ, ಇಂಗ್ಲಿಷ್, ಹಿಂದಿ ಪಾಠಗಳನ್ನು ಬೋಽಸಿ ಕಲಿಸಿದ ಗುರು ನಮ್ಮ ತಂದೆ ಪಿ. ದೂಮಣ್ಣ ರೈ. ಏಳು ದಶಕಗಳ ಹಿಂದೆಯೇ ಸಮಾಜ ಪರ ಕೆಲಸಗಳನ್ನು ಯೋಜಿಸಿದ್ದವರು, ಶೋಷಿತ ಸಮುದಾಯಗಳಿಗೆ ಸೇರಿದ ಮಕ್ಕಳ ಹೆತ್ತವರ ಮನವೊಲಿಸಿ ಅವರನ್ನು ಶಾಲೆಗೆ ಕರೆದುಕೊಂಡು ಬಂದು ಅವರಿಗೆ ಶಿಕ್ಷಣ ಕೊಡಿಸಿದರು. ಬೆಳ್ತಂಗಡಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ನಮ್ಮ ತಂದೆಯವರು ಅಲ್ಲಿನ ಹಿಂದುಳಿದ, ಸಾಮಾಜಿಕ, ದುರ್ಬಲರಾಗಿದ್ದ ಸಮುದಾಯಗಳ ಮಕ್ಕಳು ಶಾಲೆಗೆ ಹಾಜರಾಗಲು ತಮ್ಮ ಶ್ರಮ ಹಾಗೂ ಸ್ಥಳೀಯ ಜಮೀನ್ದಾರರ ಸಹಕಾರದೊಂದಿಗೆ ಆ ಕಾಲದಲ್ಲಿಯೇ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿಸಿದ್ದರು. ಇಂದು ಅವರನ್ನು ನೆನೆಸಿಕೊಳ್ಳಲೇಬೇಕು.

Tags: