Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಸಮ್ಮೇಳನದಲ್ಲಿ ಕಂಡ ಮುಖಗಳು

  • ಕೀರ್ತಿ

ಸಾಹಿತ್ಯ ಸಮ್ಮೇಳನದ ಮೂರೂ ದಿನಗಳು ಇವರನ್ನು ಭೇಟಿಯಾಗುತ್ತಲೇ ಇದ್ದೆ. ತಿಂದವರ ಊಟದ ಎಲೆಗಳನ್ನು ತೆಗೆಯುತ್ತಾ, ತಮಿಳು ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿದ್ದರು. ದೂರದ ತಮಿಳುನಾಡಿನಿಂದ ಕೆಲಸಕ್ಕೆಂದು ಬಂದ ಚಿನ್ನಮ್ಮ, ಶಾಂತಿ, ಶಾಂತ ಮತ್ತು ಅಂಜಲಿ ಅವರೊಂದಿಗೆ ಮಾತುಕತೆಗೆಂದು ನಿಂತೆ. ಈ ನಾಲ್ವರೂ ತಮಿಳುನಾಡಿನವರೇ ಆದರೂ ಒಬ್ಬರಿಗೊಬ್ಬರು ಅಷ್ಟು ಪರಿಚಿತರಲ್ಲ.

ಆದರೆ ಸ್ವಾವಲಂಬಿ ಸೂತ್ರ ಕೊಂಡಿಯಂತೆ ಬೆಸೆದಿದೆ. ‘ಮನೇಲಿ ಕುತ್ಕೊಂಡಿದ್ರೆ ಹತ್ತು ರೂಪಾಯಿ ಯಾರು ಕೊಡ್ತಾರೆ? ’ ಎಂಬ ಧೀಶಕ್ತಿ ರೂಪಗಳು’ ಇವರು. ಮೊದಲೆಲ್ಲ ಆಚೀಚೆ ಮನೆಯ ಕೆಲಸಕ್ಕೆ ಹೋಗುತ್ತಲೇ ದಿನ ದೂಡುತ್ತಿದ್ದರು. ತಮ್ಮ ದೈನಂದಿನ ಖರ್ಚನ್ನು ಹೊಂದಿಸಿಕೊಳ್ಳಬೇಕೆಂಬ ಕಾರಣಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಇವರಿಗೆಲ್ಲ ಮಕ್ಕಳ ಓದಿಗೆಂದೋ, ಮದುವೆಗೆಂದೋ, ಇಲ್ಲಾ, ಮನೆ ಕಟ್ಟುವ ಸಲುವಾಗಿ ಮಾಡಿದ ಸಾಲವೆಲ್ಲ ಬೆನ್ನ ಮೇಲೆ ಬಿದ್ದು ಹೊರೆಯಾದಾಗಲೋ ಹೆಚ್ಚಿನ ದುಡಿಮೆ ಅನಿವಾರ್ಯವಾಯಿತು.

ಈಗಲೂ ತಿಂಗಳು ಪೂರ್ತಿ ಕೆಲಸವಿರುತ್ತದೆ. ಕೆಲಸದಿಂದ ಬೆಸೆದ ಬಾಂಧವ್ಯ ಇವರದು. ಐದು ವರ್ಷಗಳಿಂದ ಕರ್ನಾಟಕಕ್ಕೆ ಬರುತ್ತಿದ್ದುದರಿಂದ ಕನ್ನಡ ಭಾಷೆ ಪರಿಚಯವಾಯಿತು. ‘ಕೆಲ್ಸ ಮಾಡಕ್ಕೂ ಭಾಷೆ ಕಲೀಬೇಕು’ ಎಂದ ಶಾಂತಿಯಮ್ಮನ ಮಾತಿಗೆ ಮೂವರೂ ಹೌದೆಂದರು. ಚಿನ್ನಮ್ಮ ಅವರಂತೂ ಒಂದು ಹೆಜ್ಜೆ ಮುಂದೆ ಬಂದು, ’ಏನಾದ್ರು ಬೈದ್ರೂ ಗೊತ್ತಾಗಿ ಬಿಡುತ್ತೆ’ ಎನ್ನುತ್ತಾ ಪಿಸುಗುಟ್ಟಿ ನಕ್ಕರು.

ಸಾಹಿತ್ಯ ಸಮ್ಮೇಳನದ ಮೂರೂ ದಿನಗಳೂ ಬೆಳಿಗ್ಗೆ ಆರು ಗಂಟೆಗೆ ಶುರುವಾಗುತ್ತಿದ್ದ ಕೆಲಸ ಮುಗಿಯುತ್ತಿದ್ದದ್ದು, ರಾತ್ರಿ ಹನ್ನೊಂದು ಗಂಟೆಗೆ. ಮತ್ತೆ ಎಲ್ಲೋ ಹೊರಗಡೆ ಹೋಗಿಲ್ಲವಾ ಎಂದರೆ ‘ಜನ ಬರ್ತಾನೇ ಇರ್ತಾರೆ. ಬಿಟ್ಟು ಹೋಗೋಕ್ಕಾಗಲ್ಲ’ ಎಂದರು. ಮುಂದುವರಿದು ‘ಈ ಪ್ರೋಗ್ರಾಂ ಏನು ಅಂತ ಗೊತ್ತಾ? ’ ಎಂದು ಕೇಳಿದೆ. ಗೆಳತಿಯರೆಲ್ಲ ಮುಖ ನೋಡಿ ನಕ್ಕರು. ಅರ್ಥವಾಗಿ ನಾನೂ ನಕ್ಕೆ. ಊಟದ ಕೌಂಟರಿನ ಹಿಂಭಾಗದ ಜಾಗವೊಂದರಲ್ಲಿ ಉಳಿದು, ಸಮ್ಮೇಳನದ ಮೂರೂ ದಿನಗಳನ್ನು ಕಳೆದಿದ್ದಾರೆ.

ಜನಜಂಗುಳಿಯನ್ನು ಕಂಡ ಮೊದಲ ದಿನ ಇದೇನಿದು ಎಂದು ಅಚ್ಚರಿಪಟ್ಟಿದ್ದರು. ಎರಡನೇ ದಿನದ ಹೊತ್ತಿಗೆ ಜನರ ಓಡಾಟವನ್ನೆಲ್ಲ ನೋಡಿ, ಇದು ನಮ್ಮ ಊರೇ ಆಗಿದ್ರೆ ಎಷ್ಟು ಚಂದವಿರುತ್ತಿತ್ತು ಎಂದು ಅಂಜಲಿಯಮ್ಮ ಫಿಲ್ಟರ್ ಇಲ್ಲದೆ ಮಾತಾಡುತ್ತಿದ್ದರೆ, ಅವರ ಉಳಿದ ಗೆಳತಿಯರು ಮೂರನೇ ದಿನ ಎಲ್ಲ ಕಡೆ ಸುತ್ತಾಡುವ ಉಪಾಯವನ್ನು ರೂಪಿಸುತ್ತಿದ್ದರು. ಸಮ್ಮೇಳನದ ಕಡೆಯ ದಿನ ಜನರ ನಡುವೆ ಅವರೆಲ್ಲೂ ಕಾಣಲೇ ಇಲ್ಲ. ಕಂಡರೋ ಇಲ್ಲವೋ ಎಂದು ಕೇಳುವುದಕ್ಕೂ ಆಗಲಿಲ್ಲ. ಶಾಂತಿ, ಅಂಜಲಿ ಮತ್ತು ಚಿನ್ನಮ್ಮರು ಕನ್ನಡವನ್ನು ತುಸು ಮಟ್ಟಿಗೆ ಅರ್ಥವಾಗುವಂತೆ ಮಾತಾಡುತ್ತಿದ್ದರು. ಶಾಂತಮ್ಮನಿಗೆ ಮಾತ್ರ ಕನ್ನಡ ಭಾಷೆ ತಿಳಿದಿರಲಿಲ್ಲ. ನನಗೋ ತಮಿಳು ಭಾಷೆಯ ಒಂದು ಪದವೂ ಗೊತ್ತಿಲ್ಲ! ಭಾಷೆಯ ಹಂಗಿಲ್ಲದೆ, ಕುಶಲೋಪರಿಗಳನ್ನು ವಿಚಾರಿಸಿಕೊಳ್ಳುತ್ತಿದ್ದೆವು. ‘ಎತ್ತಣ ಸಾಹಿತ್ಯ ಎತ್ತಣ ಬಾಂಧವ್ಯ’

 

Tags:
error: Content is protected !!