ಒಂದೆಡೆ ತಂಪಿನ ವಾತಾವರಣ : ಮತ್ತೊಂದೆಡೆ ಕಿರಿಕಿರಿ ಉಂಟುಮಾಡುವ ಕೆಸರುಮಯ ತಾಣ
ಜಿ. ತಂಗಂ ಗೋಪಿನಾಥಂ
ಮಂಡ್ಯ: ಕಳೆದ ಎರಡು ದಿನಗಳಿಂದ ಕನ್ನಡ ಸಾಹಿತ್ಯದ ಕಂಪು ಸೂಸುತ್ತಿದ್ದ ಸಕ್ಕರೆ ನಗರಿ ಮಂಡ್ಯ ನೆಲ ಶನಿವಾರ ಮಳೆಯಿಂದಾಗಿ ಮಣ್ಣಿನ ಕಂಪು ಸೂಸಿತು. ಬೆಳಿಗ್ಗೆಯಿಂದ ಬಸವಳಿದಿದ್ದ ಧರೆಯನ್ನು ಮಳೆ ಹನಿ ತಾಕುತ್ತಿದ್ದಂತೆ ಮಣ್ಣಿನ ವಾಸನೆ ಮೂಗಿಗೆ ಬಡಿದು ಆಹ್ಲಾದಕರವೆನ್ನುವಂತೆ ಮಾಡಿತು.
೮೭ನೇ ನುಡಿಜಾತ್ರೆಯ ಎರಡನೇ ದಿನವಾದ ಶನಿವಾರ ಸಂಜೆ ದಿಢೀರ್ ಮಳೆ ಬಂದು ಸಾಹಿತ್ಯಾಸಕ್ತರು ಪರದಾಡಿದರು.
ನಗರದಲ್ಲಿ ಶನಿವಾರ ಗರಿಷ್ಟ ೨೮ ರಷ್ಟಿದ್ದ ಉಷ್ಣಾಂಶ ಸಾಹಿತ್ಯಾಸಕ್ತರನ್ನು ಬಸವಳಿಯುವಂತೆ ಮಾಡಿತ್ತು. ಮಧ್ಯಾಹ್ನ ಊಟದ ನಂತರವಂತೂ ಬಿಸಿಲಿನ ತಾಪ ತಾಳಲಾರದೇ ಸಾಕಷ್ಟು ಜನ ಫ್ಯಾನ್, ಹೇರ್ ಕೂಲರ್‌ಗಳಿರುವ ಜಾಗಕ್ಕೆ ಹೋಗಿ ಕೂರುವಂತೆ ಮಾಡಿತ್ತು. ಬಿಸಿಲಿನ ಜೊತೆಗೆ ಮಣ್ಣಿನ ಧೂಳು ಕಿರಿಕಿರಿ ಉಂಟು ಮಾಡಿತ್ತು.
ಆದರೆ, ಸಂಜೆ ೬ ಗಂಟೆಗೆ ಮೋಡ ಕವಿದ ವಾತಾವರಣ ಉಂಟಾಗಿ ಸಣ್ಣಗೆ ಪ್ರಾರಂಭವಾದ ಮಳೆ ಕೆಲ ಸಮಯದ ನಂತರ ಜೋರಾಗಿಯೇ ಸುರಿಯಿತು. ಸುಮಾರು ೨೦ ನಿಮಿಷಗಳ ಕಾಲ ಸುರಿದ ಮಳೆ ಅಕ್ಷರ ಜಾತ್ರೆಗೆ ತಂಪಿನ ಪರಿಮಳ ಚೆಲ್ಲಿತು.
ಈ ಬಾರಿಯ ಪುಸ್ತಕ ಮೇಳದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರೂ ಖರೀದಿ ಮಾತ್ರ ಸ್ವಲ್ಪಮಟ್ಟದಲ್ಲಿ ನಡೆದಿದೆ. ಅಂತಹದರಲ್ಲಿ ಮಳೆ ಬಂದು ಪುಸ್ತಕಗಳೆಲ್ಲ ನೆನೆದುಹೋಗಿವೆ. ಇದರಿಂದ ನಷ್ಟವುಂಟಾಗಿದೆ. -ಲಾಯಪ್ಪ, ಪುಸ್ತಕ ವ್ಯಾಪಾರಿ, ಬಿಜಾಪುರ
ರಸ್ತೆಗಳು ಕೆಸರುಮಯ
ಮಳೆಯಿಂದ ವಾಣಿಜ್ಯ ಮಳಿಗೆ, ಸಮಾನಾಂತರ ವೇದಿಕೆ ಹಾಗೂ ಪುಸ್ತಕ ಮೇಳಕ್ಕೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಗಳು ಕೆಸರು ಮಯವಾಗಿದ್ದವು. ಇದರಿಂದ ಸಾರ್ವಜನಿಕರು ಸುಗಮವಾಗಿ ಸಂಚರಿ ಸಲು ಪರಡಾಡಿದರು. ಕೆಸರು ಗದ್ದೆಯಾದ ಪರಿಣಾಮ ಸಾರ್ವಜನಿಕರು ಹೆಜ್ಜೆಯನ್ನು ಜಾಗೃತವಾಗಿ ಇಡುತ್ತಿದ್ದರು. ಮಹಿಳೆ ಯರು, ಮಕ್ಕಳು, ವೃದ್ಧರು ಕೆಲವೊಂದು ಕಡೆ ಕಾಲು ಜಾರಿದ ಪ್ರಸಂಗ ನಡೆಯಿತು.
ವೇದಿಕೆ ಸೋರಿಕೆ
ಶನಿವಾರ ಬಿದ್ದ ಮಳೆಗೆ ನುಡಿಜಾತ್ರೆಯ ಪ್ರಧಾನ ವೇದಿಕೆಯ ಕೆಲವು ಕಡೆ ನೀರು ಸೋರಿತು. ಪರಿಣಾಮ ಜನರು ಕುರ್ಚಿಗಳನ್ನು ತಲೆ ಮೆಲಿಟ್ಟು ಆಶ್ರಯ ಪಡೆದ ದೃಶ್ಯ ಕಂಡುಬಂತು.