Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಎಸ್‌ಎಸ್‌ಎಲ್‌ಸಿ: 1ನೇ ಸ್ಥಾನಕ್ಕೆ 50 ಅಂಶಗಳ ಪ್ಯಾಕೇಜ್

ಕೆ.ಬಿ.ರಮೇಶನಾಯಕ

ಬಿಇಒ, ಎಚ್‌ಎಂಗಳಿಗೆ ದಿನ, ವಾರ, ತಿಂಗಳ ಟಾಸ್ಕ್
ಮಕ್ಕಳ ಕಲಿಕೆಗೆ 4 ಹಂತದ ಪ್ರಾಯೋಗಿಕ ಟೆಸ್ಟ್
ಸಿಎಂ ತವರಲ್ಲಿ ನಂ.1 ಗುರಿ ಹಾಕಿದ ಡಿಡಿಪಿಐ

ಮೈಸೂರು: ಶೈಕ್ಷಣಿಕ ಕ್ಷೇತ್ರದ ತವರು ಎಂದೇ ಹಿರಿಮೆ ಹೊಂದಿರುವ ಮೈಸೂರು ಜಿಲ್ಲೆಯಲ್ಲಿ 2024-25ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನಗಳಿಸಲು 50 ಅಂಶಗಳಪ್ಯಾಕೇಜ್ ರೂಪಿಸಿದ್ದು, ಗಣಿತ, ವಿಜ್ಞಾನ ವಿಷಯಗಳಲ್ಲಿ ಹಿಂದುಳಿದಿರುವ ನಗರ ಮತ್ತು ಗ್ರಾಮಾಂತರ ಮಕ್ಕಳಿಗೆ ಪೂರಕವಾಗುವಂತಹ ರೀತಿಯಲ್ಲಿ ಬೇಕಾದ ಸೂತ್ರ ರೂಪಿಸಲಾಗಿದೆ.

ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೊದಲನೇ ಸ್ಥಾನ ತಲುಪಲೇಬೇಕೆಂಬ ಗುರಿ ಹೊಂದಿರುವ ಶಾಲಾ ಶಿಕ್ಷಣ ಇಲಾಖೆಯು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರಿಗೆ ದಿನ, ವಾರ ಮತ್ತು ತಿಂಗಳ ಲೆಕ್ಕದಲ್ಲಿ ಟಾಸ್ಕ್ ನೀಡಿದೆ. ವೆಬ್ ಕ್ಯಾಮೆರಾ, ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಮಕ್ಕಳು ಧೈರ್ಯದಿಂದ ಪರೀಕ್ಷೆ ಎದುರಿಸುವಂತಹ ವಾತಾವರಣ ಹಾಗೂ ಆತ್ಮವಿಶ್ವಾಸ ಮೂಡಿಸುವ ಪ್ರಯೋಗಕ್ಕೂ ಮುಂದಾಗಿದೆ.

2023-24ರ ಪರೀಕ್ಷೆಯಲ್ಲಿ 10ರೊಳಗೆ ಸ್ಥಾನ ಪಡೆದಿದ್ದ ಮೈಸೂರು ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರುವ ಉದ್ದೇಶದಿಂದ ರೂಪಿಸಿರುವ 50 ಅಂಶಗಳ ಪ್ಯಾಕೇಜ್‌ ಅನ್ನು ಕಾರ್ಯರೂಪಕ್ಕೆ ತರುವ ಕೆಲಸ ಆರಂಭಿಸಲಾಗಿದೆ. 2023ರಲ್ಲಿ ಜಿಲ್ಲೆಯು 19ನೇ ಸ್ಥಾನಕ್ಕೆ ಕುಸಿದಾಗ ವ್ಯಾಪಕ ಟೀಕೆ, ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ, ಸಿಎಂ ಸಿದ್ದರಾಮಯ್ಯ ಅವರು ಐದರೊಳಗೆ ಸ್ಥಾನ ಪಡೆಯಬೇಕೆಂಬ ಗುರಿ ನೀಡಿದ್ದರಿಂದ ಎಚ್ಚೆತ್ತ ಅಧಿಕಾರಿಗಳು ಅದಕ್ಕೆ ತಕ್ಕಂತೆ ಕೆಲಸ ಮಾಡಿದ ಪರಿಣಾಮವಾಗಿ 7ನೇ ಸ್ಥಾನಕ್ಕೆ ತಲುಪಿದ್ದರು. ಇದೀಗ 2025ರ ಸಾಲಿನಲ್ಲಿ ಪ್ರಥಮ ಸ್ಥಾನಕ್ಕೆ ತಲುಪಬೇಕೆಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಅವರು ಗುರಿ ಹಾಕಿಕೊಂಡಿದ್ದಾರೆ.

ನಾಲ್ಕು ಹಂತದ ಪ್ರಾಯೋಗಿಕ ಟೆಸ್ಟ್ ಫಲಿತಾಂಶವನ್ನು ಸುಧಾರಿಸಲು ಈ ಬಾರಿ ಮಕ್ಕಳಿಗೆ ನಾಲ್ಕು ಹಂತದ ಪ್ರಾಯೋಗಿಕ ಟೆಸ್ಟ್‌ಗಳನ್ನು ನಡೆಸಲಾಗುತ್ತಿದ್ದು, ಸರ್‌ ಪೈಸ್ ಟೆಸ್ಟ್, ವಾರದ ಟೆಸ್ಟ್, ಮುಕ್ತ ಟೆಸ್ಟ್, ತಿಂಗಳ ಟೆಸ್ಟ್ ಆಯೋಜಿಸಲಾಗುತ್ತದೆ. ಮೂರು, ಆರು ಮತ್ತು 9 ತಿಂಗಳ ಗುರಿಯನ್ನು ಹಾಕಿಕೊಂಡು ಪಠ್ಯಗಳನ್ನು ಮುಗಿಸುವ ಜತೆಗೆ ವಾರದಲ್ಲಿ ಮುಗಿಸಿದ ಪಠ್ಯಕ್ಕೆ ತಕ್ಕಂತೆ 50 ಪ್ರಶ್ನೆಗಳಿಗೆ ಉತ್ತರ ಬರೆಸುವಂತೆ ಮಾಡುವುದನ್ನು ರೂಪಿಸಲಾಗಿದೆ.

ಮುಖ್ಯೋಪಾಧ್ಯಾಯರಿಗೂ ಟಾಸ್ಕ್: ಮುಖ್ಯೋಪಾಧ್ಯಾಯರಿಗೂ ಟಾಸ್ಕ್‌ಗಳನ್ನು ನೀಡಲಾಗಿದೆ. ಶಾಲಾ ಹಂತದ ಕ್ರಿಯಾಯೋಜನೆ, ಮೂರು ವರ್ಷಗಳ ಫಲಿತಾಂಶವನ್ನು ಅವಲೋಕನ ಮಾಡಿ ಶೇ.100ರ ಗುರಿ ತಲುಪಲು ಕಾರ್ಯಯೋಜನೆ, ಎಸ್‌ ಸಿ, ಎಸ್ ಟಿ, ಹಿಂದುಳಿದ, ಗ್ರಾಮೀಣ ಮಕ್ಕಳ ಕಲಿಕಾ ಮಟ್ಟ ಗುರುತಿಸಿ ವಿಷಯವಾರು ಕ್ರಿಯಾಯೋಜನೆ, ಶಿಕ್ಷಕರ ಸಭೆ ಆಯೋಜಿಸಿ ಹಿಂದೆ ಬಿದ್ದಿರುವ ಮಕ್ಕಳಿಗೆ ವಿಶೇಷ ತರಗತಿ ನಡೆಸುವಂತೆ ನೋಡಿಕೊಳ್ಳುವಂತೆ ಮಾಡುವುದು. ಎರಡನೇ ಶನಿವಾರ ಪೋಷಕರ ಸಭೆ ನಡೆಸಿ ಮಕ್ಕಳ ಹಾಜರಾತಿ ಕುರಿತು ಚರ್ಚೆ, ಎಸ್‌ಡಿಎಂಸಿ ಸಭೆಕರೆದು ಫಲಿತಾಂಶದ ಬಗ್ಗೆ ಮುಕ್ತ ಸಮಾಲೋಚನೆ ಮಾಡುವ ಹೊಣೆ ನೀಡಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾರಕ್ಕೊಂದು ದಿನ ಮುಖ್ಯೋಪಾಧ್ಯಾಯರ ಸಭೆ ನಡೆಸುವ ಜತೆಗೆ ಶಾಲೆಗಳಿಗೆ ತಪ್ಪದೆ ಭೇಟಿ ನೀಡಿ ಶಿಕ್ಷಕರು, ಮಕ್ಕಳ ಜತೆ ಸಂಹವನ ನಡೆಸುವುದು, ಫೋನ್ ಇನ್ ಕಾರ್ಯಕ್ರಮ ಆಯೋಜಿಸಿ ಮಕ್ಕಳಿಂದ ಬರುವ ಸಲಹೆಗಳನ್ನು ಸ್ವೀಕರಿಸಿ ಪರಿಹಾರ ಕಂಡು ಹಿಡಿಯುವುದಕ್ಕೆ ಯೋಜನೆ ರೂಪಿಸುವಂತೆ ಹೇಳಲಾಗಿದೆ.

ನನ್ನ ಗುರಿ-ನನ್ನ ಸಾಧನೆ ಎನ್ನುವಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯು ಮೊದಲನೇ ಸ್ಥಾನ ಗಳಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅಧಿಕಾರಿಗಳ ಜತೆಗೆ ಈ ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಹೊಣೆ ವಹಿಸಲಾಗಿದೆ. ಪ್ರಥಮ ಸ್ಥಾನ ಪಡೆಯಲು 50 ಅಂಶಗಳ ಪ್ಯಾಕೇಜ್ ರೂಪಿಸಿ ಅನುಷ್ಠಾನಕ್ಕೆ ತರುವಂತೆ ಹೇಳಿದ್ದೇವೆ. ಈ ವಿಚಾರದಲ್ಲಿ ಸಫಲವಾಗುತ್ತೇವೆ ಎನ್ನುವ ನಿರೀಕ್ಷೆಯಿದೆ.
ಜವರೇಗೌಡ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ.

ಅನುಷ್ಠಾನ ಮಾಡಬೇಕಿರುವ 50 ಅಂಶಗಳು
1.ಫಲಿತಾಂಶ ವಿಶ್ಲೇಷಣೆ
2. ಶಾಲಾ ಕ್ರಿಯಾಯೋಜನೆ 3. ವಿಷಯವಾರು ಕ್ರಿಯಾಯೋಜನೆ 4. ಶಿಕ್ಷಕರ ಸಭೆ ಆಯೋಜನೆ
5. ವಿಶೇಷ ತರಗತಿ
6. ಗುಂಪು ಅಧ್ಯಯನ
7. ಪೋಷಕರ/ತಾಯಂದಿರ ಸಭೆ
8. ಎಸ್‌ಡಿಎಂಸಿ ಸಭೆ
9. ದತ್ತು ಯೋಜನೆ
10. 24ಗಂಟೆಯ ವೇಳಾಪಟ್ಟಿ
11. ಪಠ್ಯಕ್ರಮ ಪೂರ್ಣಗೊಳಿಸುವುದು
12. ಮಕ್ಕಳ ಮನೆಗೆ ಭೇಟಿ
13. ವಾಟ್ಸಾಪ್ ಗುಂಪು ರಚನೆ
14. ವೇಕ್ ಅಪ್/ಮಿಸ್ ಕಾಲ್
15. ಕಲಿಕಾ ಖಾತ್ರಿ, ಪ್ರೇರಣಾ ಪರೀಕ್ಷೆ
16. ರಸಪ್ರಶ್ನೆ ಕಾರ್ಯಕ್ರಮ 17. ತಿಂಗಳ ತಿರುಳು
18. ಪ್ರಶ್ನೆ ಕೋಠಿ ತಯಾರಿಕೆ
19. ಮಕ್ಕಳೊಂದಿಗೆ ಸಂವಾದ ಮತ್ತು ಆಪ್ತ ಸಮಾಲೋಚನೆ 20. ದಿನಪತ್ರಿಕೆಗಳ ಅವಲೋಕನ
21. ರೇಡಿಯೋ ಮತ್ತು ದೂರದರ್ಶನ ಕಾರ್ಯಕ್ರಮ 22. ತೆರೆದ ಪುಸ್ತಕಗಳ ಪರೀಕ್ಷೆ
23. ಅಭ್ಯಾಸ ಪ್ರಶ್ನೆ ಪತ್ರಿಕೆಗಳ ತಯಾರಿಕೆ
24. ಪ್ರಶ್ನೆಪತ್ರಿಕೆ ಮಾದರಿಯ ಪರಿಚಯ
25. ಸ್ಟೋರಿಂಗ್ ಪ್ಯಾಕೇಜ್‌ನ ಅಭ್ಯಾಸ
26. ಮಾದರಿ ಪ್ರಶ್ನೆಪತ್ರಿಕೆಗಳ ಅಭ್ಯಾಸ
27. ಫೋನ್ ಇನ್ ಕಾರ್ಯಕ್ರಮ
28. ವಿಷಯ ಶಿಕ್ಷಕರಿಗೆ ಕಾರ್ಯಾಗಾರ
29. ಪ್ರಾರ್ಥನಾ ಸಮಯದ ಪ್ರಶೋತ್ತರ
30. ತರಗತಿಗಳಲ್ಲಿ ಕಲಿಕಾ ಚಾರ್ಟ್‌ಗಳ ಪ್ರದರ್ಶನ
31. ಸರಣಿ, ಪೂರ್ವಸಿದ್ದತಾ ಪರೀಕ್ಷೆಗಳ ಆಯೋಜನೆ
32. ಕಲಿಕಾ ವಾರ್ಡ್ ತಯಾರಿಕೆ
33. ಕಂಠಪಾಠ ಸ್ಪರ್ಧೆ
34. ಪ್ರಬಂಧ, ಪತ್ರಲೇಖನ ಸ್ಪರ್ಧೆ
35. ವಾರಕ್ಕೊಂದು ವಿಜ್ಞಾನ ಪ್ರಯೋಗ
37. ವಿಜ್ಞಾನ ಚಿತ್ರಕಲಾ ಸ್ಪರ್ಧೆ
38. ಭಾರತದ ನಕ್ಷೆ ಬಿಡಿಸುವ ಸ್ಪರ್ಧೆ
39. ದಿನಕ್ಕೊಂದು ಲೆಕ್ಕ ನಾ ಆಗುವೆ ಪಕ್ಕ
40. ವೀಕೆಂಡ್ ವಿತ್ ಪ್ರಮೇಯ
41. ಬರವಣಿಗೆ ಕೌಶಲ
42. ನಾಮಫಲಕದಲ್ಲಿ ವಿದ್ಯಾರ್ಥಿಗಳ ಹೆಸರು
43. ಕಲಿಕಾ ಪ್ರಗತಿ ದಾಖಲೆ ಚಾರ್ಟ್
44. ವಿದ್ಯಾರ್ಥಿ ಕೃತಿ ಸಂಪುಟ
45, ಈಚ್ ಒನ್ ಟೀಚ್ ಒನ್, ಟು
46. ಸಹಾಯವಾಣಿ ಸ್ಥಾಪನೆ
47. ತಜ್ಞರಿಂದ ಆರೋಗ್ಯ ಸಲಹೆ
48. ರೂಪಣಾತ್ಮಕ ಮೌಲ್ಯಮಾಪನ ಚಟುವಟಿಕೆಗಳು
49. ಗೂಗಲ್ ಸಭೆಗಳು
50. ನಿರಂತರ ಕಲಿಕಾ ದಿನಗಳು

Tags: