Mysore
16
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಸಾರಾ ಮುದ್ದಿನ ಕೋತಿ; ಮರೆಯಲಾಗದ ಪ್ರೀತಿ

ಎಚ್‌.ಎಸ್‌. ದಿನೇಶ್‌ ಕುಮಾರ್‌ 

ಮೈಸೂರು: ಮಾನವ ಹಾಗೂ ಪ್ರಾಣಿಗಳ ನಡುವಿನ ಅನ್ಯೋನ್ಯ ಸಂಬಂಧ ನಿನ್ನೆ – ಮೊನ್ನೆಯದಲ್ಲ. ಪ್ರಾಣಿಗಳೊಂದಿಗೆ ಒಡನಾಟ ಹೊಂದಿರುವವರಿಗೆ ಮಾತ್ರ ಅದರ ಮಹತ್ವ ತಿಳಿದಿರುತ್ತದೆ. ಐದು ವರ್ಷಗಳ ಹಿಂದೆ ಸಾವಿಗೀಡಾದ ತಮ್ಮ ಮುದ್ದಿನ ಕೋತಿ (ಚಿಂಟು) ಗಾಗಿ ಮಾಜಿ ಸಚಿವ ಸಾ.ರಾ. ಮಹೇಶ್ ಈಗಲೂ ಮರುಗುತ್ತಾರೆ; ನೆನೆದು ಭಾವುಕರಾಗುತ್ತಾರೆ.

ಪ್ರತಿ ವರ್ಷ ಮಹೇಶ್ ಅವರು ಚಿಂಟುವಿನ ಸ್ಮರಣಾರ್ಥ ತಮ್ಮ ದಟ್ಟಗಳ್ಳಿಯ ತೋಟದ ಮನೆಯಲ್ಲಿ ಹೋಮ-ಹವನ, ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ನೂರಾರು ಜನರಿಗೆ ಅನ್ನದಾನ ಮಾಡುತ್ತಾರೆ. ಅದರಂತೆ ಮಂಗಳವಾರ ಬೆಳಿಗ್ಗೆಯಿಂದಲೇ ಮಹೇಶ್ ಅವರ ದಟ್ಟಗಳ್ಳಿಯ ತೋಟದ ಮನೆಯಲ್ಲಿ ವೇದ ಮಂತ್ರಗಳ ಘೋಷ, ತಳಿರು ತೋರಣಗಳ ಅಲಂಕಾರ ಹೂವಿನ ಚಿತ್ತಾರ ಕಂಡುಬಂತು.

ಅಲ್ಲದೆ, ಮಹೇಶ್ ಪುಸ್ತಕವೊಂದನ್ನು ಹೊರತಂದಿದ್ದು, ಒಂದು ಅಧ್ಯಾಯದಲ್ಲಿ ‘ಚಿಂಟು’ವಿನ ಒಡನಾಟವನ್ನು ಸ್ಮರಿಸಿರುವುದು ವಿಶೇಷ. ಮಹೇಶ್ ಹಾಗೂ ಚಿಂಟು ನಡುವೆ ನಂಟು ಬೆಳೆದ ಬಗೆ ಕುತೂಹಲಕಾರಿಯಾಗಿದೆ. ಐದು ವರ್ಷಗಳ ಹಿಂದೆ ಮಹೇಶ್ ಅವರ ಜಮೀನಿಗೆ ಕೋತಿಗಳ ಹಿಂಡು ಬಂದಿತ್ತು. ಅದರಲ್ಲಿ ಒಂದು ಕೋತಿಯ ಮರಿಯೂ ಇತ್ತು. ಅದು ಆಕಸ್ಮಿಕವಾಗಿ ಗುಂಪಿನಿಂದ ಬೇರ್ಪಟ್ಟು ತೋಟದಲ್ಲೇ ಉಳಿದುಕೊಂಡು ಬಿಟ್ಟಿತ್ತು. ಅದನ್ನು ಗಮನಿಸಿದ ಮಹೇಶ್, ಆ ಮರಿಯನ್ನು ಪ್ರೀತಿಯಿಂದ ಎತ್ತಿಕೊಂಡು ಮೈದಡವಿದರು. ಅದು ಕೂಡ ಯಾವುದೇ ಪ್ರತಿರೋಧ ತೋರಲಿಲ್ಲ. ಹಾಗಾಗಿ ಅವರೇ ಮರಿಯನ್ನು ಸಾಕುವುದಕ್ಕೆ ನಿರ್ಧರಿಸಿದರು. ಅದಕ್ಕೆ ಚಿಂಟು ಎಂಬ ಹೆಸರನ್ನೂ ಇಟ್ಟರು. ಮಹೇಶ್ ಅವರು ಮೈಸೂರಿನ ಮನೆಯಲ್ಲೇ ಇದ್ದರೆ, ದಿನಕ್ಕೆ ಒಂದು ಬಾರಿಯಾದರೂ ಚಿಂಟುವಿನೊಂದಿಗೆ ಸ್ವಲ್ಪ ಸಮಯ ಕಳೆಯುವುದನ್ನು ರೂಢಿಸಿಕೊಂಡಿದ್ದರು.

ಚಿಂಟು ಕೂಡ ಮಹೇಶ್ ಅವರನ್ನು ಬಿಟ್ಟಿರುತ್ತಿರಲಿಲ್ಲ. ಅಲ್ಲದೆ ಯಾರಾದರೂ ಮಹೇಶ್ ಅವರನ್ನು ಮುಟ್ಟಿದರೂ ಕೂಡ ಗುರ್ ಎಂದು ಹೆದರಿಸುತ್ತಿತ್ತು. ಅಷ್ಟರ ಮಟ್ಟಿಗೆ ಮಹೇಶ್ ಅವರ ಮೇಲೆ ಚಿಂಟು ಪ್ರೀತಿ ಇತ್ತು. ಇಷ್ಟಕ್ಕೇ ಸೀಮಿತವಾಗದ ಚಿಂಟು, ತೋಟದಲ್ಲಿ ಇದ್ದ ಹಸು, ಕುರಿ, ನಾಯಿಗಳನ್ನು ಕೂಡ ತನ್ನ ಕಣ್ಗಾವಲಿನಲ್ಲಿ ಇಟ್ಟುಕೊಂಡಿತ್ತು. ಗೇಟಿನಿಂದ ಹೊರ ಹೋಗುವುದಕ್ಕೂ ಬಿಡುತ್ತಿರಲಿಲ್ಲ. ಜೊತೆಗೆ ಮಹೇಶ್ ಅವರು ಜಮೀನಿಗೆ ಹೋದಲ್ಲಿ ಅವರೊಟ್ಟಿಗೆ ಹೆಜ್ಜೆ ಹಾಕುತ್ತಿತ್ತು. ಅವರ ಜೊತೆ ವಾಕಿಂಗ್, ಬೈಕ್ ಸವಾರಿ, ಹೆಗಲ ಮೇಲೆ ಕೂರುವುದು ಚಿಂಟುವಿಗೆ ಮಾಮೂಲಾಗಿತ್ತು.

ವಿದ್ಯುತ್ ಶಾಕ್‌ನಿಂದ ಅಸುನೀಗಿದ್ದ ಚಿಂಟು : ಐದು ವರ್ಷಗಳ ಹಿಂದೆ ಚಿಂಟು ಜಮೀನಿನಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿತ್ತು. ಆಗ ಶಾಸಕರಾಗಿದ್ದ ಸಾ. ರಾ. ಮಹೇಶ್, ದುಬೈ ಪ್ರವಾಸದಲ್ಲಿದ್ದರು. ವಿಚಾರ ಗೊತ್ತಾಗುತ್ತಿದ್ದಂತೆ ಪ್ರವಾಸ ಮೊಟಕುಗೊಳಿಸಿ ಮೈಸೂರಿಗೆ ಆಗಮಿಸಿ ತಮ್ಮ ಜಮೀನಿನಲ್ಲೇ ಚಿಂಟುವಿನ ಅಂತ್ಯಕ್ರಿಯೆಯನ್ನು ನಡೆಸಿದರಲ್ಲದೆ, ಚಿಂಟುಗಾಗಿ ಗುಡಿಯನ್ನೂ ಕಟ್ಟಿಸಿದ್ದಾರೆ. ಇದೀಗ ಚಿಂಟುವಿನ ೫ನೇ ವರ್ಷದ ಸ್ಮರಣೆಯನ್ನೂ ಅದ್ಧೂರಿಯಾಗಿ ಆಚರಿಸಿದ್ದಾರೆ.

 

 

Tags:
error: Content is protected !!