ಕೋಟೆ ತಾಲ್ಲೂಕಿನ 25ಕ್ಕೂ ಹೆಚ್ಚು ಮಂದಿ ಯುವಕರು ದೇಶ ಸೇವೆಯಲ್ಲಿ
ಮಂಜು ಕೋಟೆ
ಎಚ್. ಡಿ. ಕೋಟೆ: ಭಾರತದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರು ಹೋರಾಟ ಮತ್ತು ತ್ಯಾಗ, ಬಲಿದಾನಗೈದಿದ್ದಾರೆ. ಭಾರತದ ಗಡಿ ಭಾಗಗಳಲ್ಲಿ ತಾಲ್ಲೂಕಿನ ೨೫ಕ್ಕೂ ಹೆಚ್ಚು ಯೋಧರು ದೇಶದ ರಕ್ಷಣೆಯ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ೭೯ ವರ್ಷದ ಸಂಭ್ರಮಾಚರಣೆಯಲ್ಲಿ ತಾಲ್ಲೂಕು ಸೇರಿದಂತೆ ಇಡೀ ದೇಶಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿದೆ. ಈ ವೇಳೆ ದೇಶ ಸೇವೆ ಸಲ್ಲಿಸುತ್ತಿರುವ ತಾಲ್ಲೂಕಿನ ಯುವಕರು ಭಾರತ ದೇಶದ ವಿವಿಧ ಭಾಗದ ಗಡಿಗಳಲ್ಲಿ ಮಳೆ, ಬಿಸಿಲನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿರುವುದು ತಾಲ್ಲೂಕಿನ ಜನತೆಯಲ್ಲಿ ಸಂತತ ತಂದಿದೆ.
ಇದಲ್ಲದೆ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೋಟೆ ತಹಸಿಲ್ದಾರ್ ಶ್ರೀನಿವಾಸ್ ಸೇರಿದಂತೆ ೨೦ಕ್ಕೂ ಹೆಚ್ಚು ಅಧಿಕಾರಿಗಳು ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ತಾಲ್ಲೂಕಿನ ಬೆರಳೆಣಿಕೆಯಷ್ಟು ವಿದ್ಯಾವಂತ ಯುವಕರು ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅದರಲ್ಲೂ ಮಗ್ಗೆ ಗ್ರಾಮದ ಸುಂದರ್ ಎಂಬವರು ಜಮ್ಮು ಕಾಶ್ಮೀರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಪಾಕಿಸ್ತಾನದ ಉಗ್ರರ ಜೊತೆಗಿನ ಹೋರಾಟದಲ್ಲಿ ಹುತಾತ್ಮರಾದರು. ಪಟ್ಟಣದ ನಿವಾಸಿ ಮಹೇಶ್ ಕಾಶ್ಮೀರದ ಸಿಯಾಚಿನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮಂಜುಗೆಡ್ಡೆ ಬಿದ್ದು ಹುತಾತ್ಮರಾದರು.
ಈ ಘಟನೆಗಳು ತಾಲ್ಲೂಕಿನ ಜನರಲ್ಲಿ ಸಾಕಷ್ಟು ನೋವುಂಟು ಮಾಡಿತ್ತು. ಈ ಇಬ್ಬರ ಸೇವೆಯೂ ತಾಲ್ಲೂಕಿಗೆ ಕೀರ್ತಿ ತಂದಿದ್ದವು. ದೇಶದ ವಿವಿಧ ಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ತಾಲ್ಲೂಕಿನ ಯೋಧರುಗಳನ್ನು ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಗುರುತಿಸಿ, ಪ್ರೋತ್ಸಾಹಿಸಿ ದಾಗ ಮತ್ತಷ್ಟು ಯುವಕರು ದೇಶದ ಗಡಿ ಭಾಗದಲ್ಲಿ ಯೋಧರಾಗಿ ಸೇವೆ ಸಲ್ಲಿಸಲು ಪ್ರೋತ್ಸಾಹಿಸಿ ದಂತಾಗುತ್ತದೆ.
೭೮ ವರ್ಷಗಳ ಹಿಂದೆ ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಅನೇಕರು ಹೋರಾಟ, ತ್ಯಾಗ, ಬಲಿದಾನ ಮಾಡಿದ್ದಾರೆ. ನಮ್ಮ ದೇಶದ ಗಡಿ ಭಾಗದಲ್ಲಿ ನಾವುಗಳು ಯೋಧರಾಗಿ ಕೆಲಸ ನಿರ್ವಹಿಸಲು ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ.
– ಮಂಜುನಾಥ್, ಯೋಧ





