ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಮಾರ್ಗದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದ್ದು, ನೂತನ ಮಾರ್ಗದಲ್ಲೇ ಅಭಿಮನ್ಯು ನೇತೃತ್ವದ ಗಜಪಡೆಗೆ ತಾಲೀಮು ಕೂಡ ಆರಂಭಿಸಲಾಗಿದೆ.
ಪ್ರತಿ ಬಾರಿ ಅಂಬಾರಿ ಆನೆಯನ್ನು ಅರಮನೆಯ ಶ್ರೀ ಕೋಡಿ ಸೋಮೇಶ್ವರ ದೇವಾಲಯ ಆವರಣದಿಂದ ಬಲರಾಮ ದ್ವಾರದ ಸಮೀಪದಲ್ಲಿರುವ ರಾಜವಂಶಸ್ಥರ ನಿವಾಸದ ಆವರಣಕ್ಕೆ ಕರೆತಂದು ಅಲ್ಲಿ ಅಂಬಾರಿ ಕಟ್ಟಲಾಗುತ್ತಿತ್ತು. ನಂತರ ಆನೆಯನ್ನು ಅರಮನೆ ಮುಂಭಾಗಕ್ಕೆ ಕರೆತಂದು ಪುಷ್ಪಾರ್ಚನೆ ನೆರವೇರಿಸಲಾಗುತ್ತುತ್ತು. ಆ ನಂತರ ಜಂಬೂಸವಾರಿ ಮೆರವಣಿಗೆಯು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ನಡೆಯುತ್ತಿತ್ತು.
ಆದರೆ, ಈ ಬಾರಿ ಅಂಬಾರಿ ಕಟ್ಟಿದ ನಂತರ ಆನೆಯು ದಕ್ಷಿಣ ಭಾಗದಲ್ಲಿರುವ ಶ್ರೀ ಶ್ವೇತ ವರಾಹಸ್ವಾಮಿ ದೇವಸ್ಥಾನ ಬಳಿಯ ಮಾರ್ಗದ ಮೂಲಕ ಅರಮನೆಯ ಮುಖ್ಯದ್ವಾರವಾದ ಜಯ ಮಾರ್ತಾಂಡ ದ್ವಾರದ ಬಳಿಗೆ ಆಗಮಿಸಿ ಬಳಿಕ ಪುಷ್ಪಾರ್ಚನೆ ಜಾಗಕ್ಕೆ ಆಗಮಿಸಲಿದೆ. ಬಳಿಕ ಬನ್ನಿಮಂಟಪದತ್ತ ಹೆಜ್ಜೆ ಹಾಕಲಿದೆ. ಇದರಿಂದ ಜಂಬೂ ಸವಾರಿ ವೀಕ್ಷಿಸಲು ಆಗಮಿಸುವ ಎಲ್ಲರಿಗೂ ಅಂಬಾರಿಯ ದರ್ಶನ ದೊರೆಯಲಿದೆ.
ಜಂಬೂ ಸವಾರಿ ವೀಕ್ಷಿಸಲು ಬಂದ ಎಲ್ಲರಿಗೂ ಅಂಬಾರಿ ಕಾಣಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರು ಸೂಚನೆ ನೀಡಿದ್ದಾರೆ. ಅವರ ಸೂಚನೆಯ ಮೇರೆಗೆ ಮಾರ್ಗದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ನೂತನ ಮಾರ್ಗದಲ್ಲೇ ಅಭಿಮನ್ಯು ನೇತೃತ್ವದ ಗಜಪಡೆಗೆ ತಾಲೀಮು ನಡೆಸಲಾಗುತ್ತಿದೆ. – ಡಾ. ಐ. ಬಿ. ಪ್ರಭುಗೌಡ, ಡಿಸಿಎಫ್.





