Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮನೆಗೆ ನುಗ್ಗಿದ ಚರಂಡಿ ನೀರು; ರಾತ್ರಿಯಿಡೀ ಗೋಳು

ಮೈಸೂರು: ವರ್ಷದ ಮೊದಲ ಮಳೆಗೆ ಮೈಸೂರು ನಗರ ತತ್ತರಿಸಿದ್ದು, ನೂರಾರು ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದು ವಾಹನಗಳು ಜಖಂ ಆಗಿರುವ ಜತೆಗೆ ಮಹಾನಗರಪಾಲಿಕೆಯ ಅವೈಜ್ಞಾನಿಕ ಯುಜಿಡಿ ಪೈಪ್ ಅಳವಡಿಕೆ ಕಾಮಗಾರಿಯಿಂದ ಮುನೇಶ್ವರ ನಗರ ಬಡಾವಣೆಯ ನೂರಾರು ಮನೆಗಳಿಗೆ ಚರಂಡಿ ನೀರು ನುಗ್ಗಿ ನಾಗರಿಕರು ಪರಿತಪಿಸುವಂತಾಯಿತು.

ಮೇ 3ರಂದು ಸಂಜೆ ಬಿದ್ದ ಮಳೆಗೆ ದೇವನೂರು ಕೆರೆಯ ಹಿಂಬದಿಯ ಚರಂಡಿಯಲ್ಲಿ ಮಳೆ ನೀರು ಉಕ್ಕಿ ಹರಿದಿದ್ದು ಮುನೇಶ್ವರ ನಗರ ಬಡಾವಣೆಯ ಮನೆಗಳಿಗೆ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಮೊಣಕಾಲುದ್ದ ಹರಿದ ಚರಂಡಿಯ ದುರ್ವಾಸನೆಯುಕ್ತ ಕೊಳಕು ನೀರು ಇಲ್ಲಿನ ಹತ್ತಾರು ಮನೆ ಹಾಗೂ ಬಡಾವಣೆಯ ಮಸೀದಿಗೂ ನುಗ್ಗಿ ನೂರಾರು ನಿವಾಸಿಗಳು ರಾತ್ರಿಯಿಡೀ ನಿದ್ದೆಯಿಲ್ಲದೆ ಕಳೆಯುವಂತಾಯಿತು.

ಚರಂಡಿ ಮಧ್ಯದಲ್ಲಿ ಯುಜಿಡಿ ಪೈಪ್:
ಮಹಾನಗರ ಪಾಲಿಕೆ ಮಳೆ ನೀರು ಚರಂಡಿಗೆ ಸಂಪರ್ಕ ಕಲ್ಪಿಸಿದ್ದ ಯುಜಿಡಿ ಪೈಪ್ ಕಾಮಗಾರಿಯನ್ನು ಪುರ್ಣಗೊಳಿಸದಿರುವುದು ಈ ಅವಾಂತರಕ್ಕೆ ಕಾರಣ. ಚರಂಡಿಯ ಮಧ್ಯದಲ್ಲಿ ಅಳವಡಿಸಿದ ಪೈಪ್‌ನಲ್ಲಿ ಕಸಕಡ್ಡಿ, ಚಿಂದಿ ಬಟ್ಟೆ, ಪ್ಲಾಸ್ಟಿಕ್ ರಾಶಿ ಸಿಲುಕಿಕೊಂಡ ಕಾರಣ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಲಿಲ್ಲ. ಸುಮಾರು 4 ಅಡಿ ಎತ್ತರಕ್ಕೆ ಹರಿದ ಕೊಳಚೆ ನೀರು ತಡೆಗೋಡೆ ದಾಟಿ ಸಮೀಪದ ರಸ್ತೆಗಳಲ್ಲಿ ಹರಿದು, ಅಕ್ಕ ಪಕ್ಕದ ಮನೆಗಳಿಗೆ, ಅಂಗಡಿ, ಗೋದಾಮುಗಳಿಗೆ ನುಗ್ಗಿದೆ.

ಅನೇಕರ ಮನೆಗಳಲ್ಲಿ ಎಳೆ ಕಂದಮ್ಮಗಳು, ಸಣ್ಣ ಮಕ್ಕಳು ಹಾಗೂ ವಯಸ್ಸಾದ ಹಿರಿಯರು ಇದ್ದರು. ಅವರೆಲ್ಲರೂ ಮನೆಯೊಳಗೆ ಹರಿದು ಬಂದ ಕೊಳಚೆ ನೀರು ಹಾಗೂ ಅದರ ದುರ್ವಾಸನೆಯಿಂದ ಬಹಳ ಸಂಕಟ ಅನುಭವಿಸಿದ್ದಾರೆ.
ರಾತ್ರಿ 2 ಗಂಟೆವರೆಗೂ ಕೊಳಚೆ ನೀರು ರಸ್ತೆಯಲ್ಲಿಯೇ ಉಕ್ಕಿ ಹರಿದಿತ್ತು. ಇದರಿಂದ ಹಾಸಿಗೆ ಹೊದಿಕೆಗಳೆಲ್ಲ ಒದ್ದೆಯಾಗಿದ್ದಲ್ಲದೆ ಮನೆಗೆ ತಂದಿದ್ದ ಅಕ್ಕಿ, ಗೋಧಿ, ರಾಗಿ, ಸಕರೆ, ಬೇಳೆ ಇತ್ಯಾದಿ ದಿನಸಿಗಳು ಕೊಳಕು ನೀರಿನಲ್ಲಿ ಮುಳುಗಿದ್ದವು. ಸೋಫಾ, ಬೆಡ್, ಬೀರು ಒಳಗೂ ಕೊಳಕು ನೀರು ನುಗ್ಗಿ ಬಟ್ಟೆಗಳೂ ಹಾಳಾಗಿವೆ.

ಜೊತೆಗಿದ್ದ ಅಧಿಕಾರಿಗಳು
ಮಾಜಿ ಮಹಾಪೌರ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆ ಸಿಬ್ಬಂದಿ ಜೆಸಿಬಿ ಮೂಲಕ ತಡೆ ತೆರವುಗೊಳಿಸುವವರೆಗೂ ಸ್ಥಳದಲ್ಲೇ ಇದ್ದ ಅವರ ನಡೆ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪರಿಹಾರಕ್ಕಾಗಿ ಸರ್ವೆ

ಪಾಲಿಕೆ ಅಧಿಕಾರಿಗಳು ಮಳೆ ನೀರು ನುಗ್ಗಿ ಹಾನಿಯಾದ ಮನೆಗಳಿಗೆ ಒಂದಷ್ಟು ಪರಿಹಾರ ನೀಡಲು ತೀರ್ಮಾನಿಸಿದ್ದು, ಸರ್ವೆ ನಡೆಸಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಿದ್ದಾರೆ.

ಇಲ್ಲಿನ ಒಳಚರಂಡಿ ಕಾಮಗಾರಿಗೆ ಶಾಸಕರು 55 ಲಕ್ಷ ರೂ.ಅನುದಾನ ನೀಡಿದ್ದಾರೆ. ಆದಷ್ಟು ಬೇಗ ಪಾಲಿಕೆಯ ಕಾಮಗಾರಿ ಪೂರ್ಣ ಗೊಳಿಸುತ್ತೇವೆ. ಇಲ್ಲಿ ಮುಡಾದವರ ಕಾಮಗಾರಿಯೂ ಬಾಕಿ ಇದೆ. ಕೆಲಸ ಮುಗಿಸಲು ಪಾಲಿಕೆ
ಕೈ ಜೋಡಿಸಲಿದೆ ಅನಂತು, ಅಭಿವೃದ್ಧಿ ಅಧಿಕಾರಿ, ವಲಯ ಕಚೇರಿ

ಅರೆ ಬರೆ ಯುಜಿಡಿ ಕಾಮಗಾರಿಯಿಂದ ಚರಂಡಿಯಲ್ಲಿ ನೀರು ಮುಂದೆ ಹೋಗದೆ ಹಿಂದಕ್ಕೆ ಬರುತ್ತಿತ್ತು. ಇದರಿಂದ ಚರಂಡಿ ನೀರು ರಸ್ತೆಗೆ ಬಂದು ಮನೆಗಳಿಗೆ ನುಗ್ಗಿತ್ತು. ಮಸೀದಿಯಲ್ಲಿದ್ದ ಚಾಪೆಗಳು ಕೊಳಕು ನೀರಿನಲ್ಲಿ ತೇಲುತ್ತಿದ್ದವು. ನಮ್ಮ ಮನೆಗೆ ನೀರು ನುಗ್ಗಿ ಸಾಮಾನೆಲ್ಲ ಹಾಳಾಯಿತು
ರೌಫ್, ಸ್ಥಳೀಯ

ಮಳೆ ನೀರು ರಸ್ತೆಯಲ್ಲಿ ತುಂಬಿ ಮನೆಯೊಳಗೆ ಕ್ಷಣ ಮಾತ್ರದಲ್ಲಿ ಹರಿದು ಮನೆಯ ಎಲ್ಲ ಕೋಣೆಗಳಿಗೂ ನುಗ್ಗಿತು, ಆಗಷ್ಟೇ ತಂದಿದ್ದ ರೇಷನ್ ಎಲ್ಲ ಹಾಳಾಯಿತು. ಹಾಸಿಗೆ, ಬಟ್ಟೆಗಳೂ ಹಾಳಾಗಿವೆ.

ಫಯಾಜ್, ಸ್ಥಳೀಯ

Tags: