Mysore
28
scattered clouds

Social Media

ಶುಕ್ರವಾರ, 10 ಜನವರಿ 2025
Light
Dark

ಚಿತ್ರೋತ್ಸವ 16: ‘ಸರ್ವ ಜನಾಂಗದ ಶಾಂತಿಯ ತೋಟʼ ಧ್ಯೇಯವಾಕ್ಯ

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಹದಿನಾರಕ್ಕೆ ಕಾಲಿಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಾಂಸ್ಕೃತಿಕ ವೈಭವದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುತ್ತಿರುವ ಈ ಉತ್ಸವಕ್ಕೆ ಅಂತಾರಾಷ್ಟ್ರೀಯ ನಿರ್ಮಾಪಕರ ಸಂಘಟನೆಗಳ ಮಹಾಒಕ್ಕೂಟದ ಮಾನ್ಯತೆ ಸಿಕ್ಕಿರುವ ಹೆಗ್ಗಳಿಕೆ.

ಚಿತ್ರರಸಿಕರ ಕಂಗಳನ್ನು ಸೆಳೆಯುವುದು ಮಾತ್ರವಲ್ಲದೆ, ಯೋಚನೆಗೂ ಹಚ್ಚುವ ನೋಟಗಳ ಕಣಜವಾಗಿರುವ ಚಿತ್ರೋತ್ಸವದ ಈ ಬಾರಿಯ ಧ್ಯೇಯವಾಕ್ಯ ‘ಸರ್ವ ಜನಾಂಗದ ಶಾಂತಿಯ ತೋಟ’. ಮೊನ್ನೆ ಸೋಮವಾರ, ಜನವರಿ ೬ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಚಿತ್ರೋತ್ಸವ ಸಂಘಟನಾ ಸಮಿತಿಯ ಮೊದಲ ಸಭೆ ನಡೆದಿದೆ. ಮಾರ್ಚ್ ೧ರಿಂದ ೮ರವರೆಗೆ ೧೬ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯಲಿರುವುದನ್ನು ಅವರು ಸಭೆಯ ನಂತರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಈ ಬಾರಿಯೂ ಎಂದಿನಂತೆ ಏಷ್ಯಾ, ಭಾರತೀಯ ಮತ್ತು ಕನ್ನಡ ಚಿತ್ರಗಳ ಸ್ಪರ್ಧೆ ಇರುತ್ತದೆ. ಜನಪ್ರಿಯ ಕನ್ನಡ ಚಲನಚಿತ್ರಗಳ ವಿಭಾಗ, ವಿಮರ್ಶಕರ ವಾರ / ಕ್ರಿಟಿಕ್ಸ್ ವೀಕ್, ಜೀವನಚರಿತ್ರೆ / ಬಯೋಪಿಕ್ಸ್, ದೇಶ ಕೇಂದ್ರಿತ ಸಿನಿಮಾಗಳು, ಕೇಳರಿಯದ, ನಂಬಲಶಕ್ಯ ಭಾರತ ವಿಭಾಗದಲ್ಲಿ ಭಾರತೀಯ ಉಪಭಾಷಾ ಚಲನಚಿತ್ರಗಳು, ಪುನರಾವಲೋಕನ ವಿಭಾಗದಲ್ಲಿ ಆಯ್ದ ನಿರ್ದೇಶಕರು/ ಕಲಾವಿದರು/ ತಂತ್ರಜ್ಞರ ಚಿತ್ರಗಳು, ಪುನರೂಪಿತ ಮಹಾನ್ ಚಲನಚಿತ್ರಗಳು, ಶ್ರದ್ಧಾಂಜಲಿ ಮತ್ತು ನೆನಪಿನ ಗೌರವದ ಚಿತ್ರಗಳು, ಶತಮಾನೋತ್ಸವದ ಸ್ಮರಣೆಯ ಚಿತ್ರಗಳು, ಚಿತ್ರೋತ್ಸವದ ಧ್ಯೇಯವಾಕ್ಯ ಪೂರಕ ಚಿತ್ರಗಳು ಹೀಗೆ ನಾನಾ ವಿಭಾಗಗಳಲ್ಲಿ ಸುಮಾರು ೬೦ ದೇಶಗಳ ೨೦೦ರವರೆಗೆ ವೈವಿಧ್ಯಮಯ ಚಿತ್ರಗಳ ಪ್ರದರ್ಶನ ಈ ಚಿತ್ರೋತ್ಸವದಲ್ಲಿ ಆಗಲಿದೆ.

ಚಿತ್ರೋತ್ಸವದಲ್ಲಿ ಸಿನಿಮಾಗಳ ಪ್ರದರ್ಶನದೊಂದಿಗೆ ಚಲನಚಿತ್ರ ಶೈಕ್ಷಣಿಕ ಸಂವಾದವನ್ನೂ ಏರ್ಪಡಿಸಲಾಗಿದೆ. ಚಲನಚಿತ್ರ ನಿರ್ಮಾಣ, ರಸಗ್ರಹಣ, ವಿಚಾರಸಂಕಿರಣ, ಕಾರ್ಯಾಗಾರ, ತಜ್ಞರಿಂದ ಉಪನ್ಯಾಸ, ಮೊದಲಾದ ಕಾರ್ಯಕ್ರಮಗಳು ಚಲನಚಿತ್ರ ರಂಗದವರಿಗೆ, ಅಧ್ಯಯನಶೀಲರಿಗೆ, ಚಲನಚಿತ್ರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಚಲನಚಿತ್ರ ಸಂಸ್ಕೃ ತಿಯನ್ನು ತಿಳಿಯುವ ಜೊತೆಗೆ, ಚಿತ್ರೋತ್ಸವದ ಸಿನಿಮಾಗಳು ಸಮಕಾಲೀನ ಜಾಗತಿಕ ವಿದ್ಯಮಾನ ಮತ್ತು ಸ್ಥಿತಿಗತಿಗಳನ್ನು ಬಿಂಬಿಸುತ್ತವೆ. ಚಲನಚಿತ್ರ ಕರ್ಮಿಗಳಿಗೆ, ಚಲನಚಿತ್ರಾಸಕ್ತ ವಿದ್ಯಾರ್ಥಿಗಳಿಗೆ ಚಿತ್ರೋತ್ಸವ ವಿಶೇಷ ಕಮ್ಮಟವಾಗಲಿದೆ. ಈ ಬಾರಿ ೯ ಕೋಟಿ ರೂ. ಗಳನ್ನು ನೀಡುವ ನಿರ್ಧಾರವನ್ನು ಮುಖ್ಯಮಂತ್ರಿಗಳು ಚಿತ್ರೋತ್ಸವ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸುತ್ತಿದ್ದಂತೆ, ಕಳೆದ ಕೆಲವು ವರ್ಷಗಳಿಂದ ಸಹಾಯಧನ ನೀಡದೆ ಇರುವ ಕುರಿತ ಪ್ರಶ್ನೆ ಇತ್ತು.

೨೦೧೯ರಿಂದ ಸಹಾಯಧನ ಮತ್ತು ಪ್ರಶಸ್ತಿಗಳನ್ನು ನೀಡಿಲ್ಲ. ಕಳೆದ ವರ್ಷ ಅವುಗಳ ಆಯ್ಕೆಗೆ ಸಮಿತಿ ರಚನೆ ಆದಾಗ ಅದರ ವಿರುದ್ಧ ನ್ಯಾಯಾಲಯದ ಮೆಟ್ಟಲು ಹತ್ತಿದ ಪ್ರಸಂಗವೂ ಇತ್ತು! ಅದಾದ ನಂತರ ಚಿತ್ರಗಳ ವೀಕ್ಷಣೆ ಆರಂಭ ಆದ ನಂತರ, ಕೂಡಲೇ ಸಹಾಯಧನ ನೀಡಿ ಎಂದು ಪ್ರತಿಭಟನೆ, ರಾಜ್ಯಪಾಲರ ಮೂಲಕ ಒತ್ತಾಯ ಇತ್ಯಾದಿ ನಡೆಯಿತು. ಸಹಾಯಧನ ಸಿಗದೆ ನಿರ್ಮಾಪಕರು ತೊಂದರೆಯಲ್ಲಿದ್ದಾರೆ ಎನ್ನುವುದಾಗಿತ್ತು ಉದ್ಯಮದ ಕಾಳಜಿ. ಆದರೆ ಚಿತ್ರ ನಿರ್ಮಿಸಿದವರೆಲ್ಲ ಸಹಾಯಧನ ಪಡೆಯುವುದು ಅಶಕ್ಯ, ಉತ್ತಮ ಗುಣಮಟ್ಟದ ಆಯ್ದ ಚಿತ್ರಗಳಿಗೆ ಮಾತ್ರ ಅದು ಸಿಗುತ್ತದೆ. ಅದು ಕೂಡ ಸರ್ಕಾರ ಹೇಳುವ ಗರಿಷ್ಟ ಸಂಖ್ಯೆಯ ಚಿತ್ರಗಳಿಗೆ. ಈ ದಿನಗಳಲ್ಲಿ, ಕೊರೊನಾ ಮೊದಲು ಮತ್ತು ನಂತರ ೩೦೦ಕ್ಕೂ ಹೆಚ್ಚು ಚಿತ್ರಗಳು ಪ್ರತಿ ವರ್ಷ ತಯಾರಾಗುತ್ತಿವೆ. ೨೦೨೧ರವರೆಗೆ ೧೨೫ ಚಿತ್ರಗಳವರೆಗೆ ಸಹಾಯಧನ ಇದ್ದರೆ, ನಂತರ ಅದು ೨೦೦ಕ್ಕೆ ಏರಿದೆ. ತಯಾರಾಗುತ್ತಿರುವ ಚಿತ್ರಗಳ ಗುಣಮಟ್ಟದ ಕುರಿತ ವಿಷಯ ಒತ್ತಟ್ಟಿಗಿರಲಿ. ಚಿತ್ರೋತ್ಸವದ ಕುರಿತು.

ಪ್ರತಿ ವರ್ಷದಂತೆ ಈ ಬಾರಿಯೂ ಬಹಳ ತಡವಾಗಿ ಚಿತ್ರೋತ್ಸವದ ಸಿದ್ಧತೆಗಳು ಅಽಕೃತವಾಗಿ ಆರಂಭವಾಗಿವೆ. ಕೇವಲ ೫೩ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಚಿತ್ರೋತ್ಸವಕ್ಕೆ ಸಿದ್ಧತೆ ಆಗಬೇಕಾಗಿದೆ. ಭಾರತದಲ್ಲಿ ನಡೆಯುವ ಇತರ ಮಾನ್ಯತೆ ಪಡೆದ ಚಿತ್ರೋತ್ಸವಗಳ ಸಿದ್ಧತೆ ಕಡಿಮೆ ಎಂದರೂ ಆರು ತಿಂಗಳ ಮೊದಲೇ ಆರಂಭವಾಗುತ್ತದೆ. ಕೇರಳದ ಅಂತಾರಾಷ್ಟ್ರೀಯ ಚಿತ್ರೋತ್ಸವ ಕೂಡ ಮಾನ್ಯತೆ ಪಡೆದಿದೆ. ಅಲ್ಲಿನ ಚಲನಚಿತ್ರ ಅಕಾಡೆಮಿಯಲ್ಲಿ ಚಿತ್ರೋತ್ಸವದ ಪ್ರತ್ಯೇಕ ಘಟಕ ಇದೆ. ವರ್ಷ ಪೂರ್ತಿ ಬೇರೆಬೇರೆ ಚಿತ್ರೋತ್ಸವಗಳನ್ನು ನಡೆಸುವುದು, ಕಾರ್ಯಾಗಾರಗಳು, ಪುಸ್ತಕ ಪ್ರಕಟಣೆ, ಚಲನಚಿತ್ರ ಕ್ಲಬ್ (ಫಿಲಂ ಸೊಸೈಟಿ ಮಾದರಿ) ಸೇರಿದಂತೆ ಚಲನಚಿತ್ರ ಶೈಕ್ಷಣಿಕ ಕೆಲಸಗಳಲ್ಲಿ ಅದು ನಿರತವಾಗಿದೆ. ಚಿತ್ರನಗರಿ, ಚಿತ್ರಮಂದಿರಗಳು, ಚಿತ್ರಗಳ ನಿರ್ಮಾಣ, ಒಟಿಟಿ ಇತ್ಯಾದಿಗಳ ಉಸ್ತುವಾರಿ ಕೇರಳ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮದ್ದು. ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ, ಕೊಲ್ಕತ್ತಾ ಚಿತ್ರೋತ್ಸವ ಮತ್ತು ಮುಂಬೈ ಚಿತ್ರೋತ್ಸವಗಳು, ಬೆಂಗಳೂರು ಮತ್ತು ಕೇರಳದಂತೆ ಮಾನ್ಯತೆ ಪಡೆದವುಗಳು. ಗೋವಾದಲ್ಲಿ ನೆಲೆಯೂರಿರುವ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ ಇತ್ತೀಚೆಗೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳತೊಡಗಿದೆ.

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಕೈಗೆ ಅದನ್ನು ನೀಡಿರುವುದು, ಮುಂಬೈ ಮಂದಿಯ ಓಲೈಕೆ, ಇದಕ್ಕೆ ಮುಖ್ಯ ಕಾರಣ. ಕೊಲ್ಕತ್ತಾ ಮತ್ತು ಮುಂಬೈ ಚಿತ್ರೋತ್ಸವಗಳದೂ ಅದೇ ಕಥೆ. ಈಗಿರುವಂತೆ ಚಿತ್ರಗಳ ಆಯ್ಕೆ ಮತ್ತು ಕಾರ್ಯಕ್ರಮಗಳಲ್ಲಿ ಕೇರಳ ಮತ್ತು ಬೆಂಗಳೂರು ಚಿತ್ರೋತ್ಸವಗಳ ಹೆಸರು ಮುಂಚೂಣಿಯಲ್ಲಿದೆ. ಕೇರಳದಲ್ಲಿ ಸಿನಿಮಾ ಸಂಸ್ಕ ತಿ ಸಾಕಷ್ಟು ವಿಸ್ತೃತವಾಗಿ ಹರಡಿದೆ. ಆ ಕಾರಣದಿಂದಲೇ ಅಲ್ಲಿ ಚಿತ್ರೋತ್ಸವಕ್ಕೆ ಪ್ರತಿನಿಽಗಳಾಗಲು ಕರೆ ನೀಡುತ್ತಲೇ ಸಾವಿರಾರು ಮಂದಿ ಒಂದೇ ದಿನದಲ್ಲಿ ನೋಂದಣಿ ಮಾಡಿಬಿಡುತ್ತಾರೆ. ತಡವಾದರೆ ಪ್ರತಿನಿಽಯಾಗಲು ಆಗುವುದಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಿದ್ಧತೆ ಕೊನೆಯ ಕ್ಷಣದಲ್ಲಿ ಆಗುತ್ತಿರುವುದರಿಂದ ಬೇರೆ ದೇಶಗಳಿಂದ ಸಿನಿಮಾ ಸಂಬಂಽಸಿದ ಹೆಚ್ಚು ಮಂದಿಯನ್ನು ಕರೆಸಿಕೊಳ್ಳುವುದು ಕಷ್ಟ. ಕೆಲವು ದೇಶಗಳಿಂದ ಬರುವವರು ವೀಸಾ ಪಡೆಯಲು ಹೆಚ್ಚು ಕಾಲಾವಕಾಶ ಬೇಕಾಗುತ್ತದೆ.

ಒಂದು ಒಂದೂವರೆ ತಿಂಗಳಲ್ಲಿ ಅದು ಕಷ್ಟಸಾಧ್ಯ. ಒಳ್ಳೆಯ ಚಿತ್ರಗಳ ಆಯ್ಕೆ ಅನುಭವೀ ತಂಡಗಳಿಗೆ ಸ್ವಲ್ಪ ಸುಲಭ ಆಗಬಹುದು. ಕಾರಣವಿಷ್ಟೇ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಬಹುತೇಕ ವರ್ಷದ ಕೊನೆಯದು. ವಿಶ್ವಾದ್ಯಂತ ನಡೆಯುವ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ, ಪಾಲ್ಗೊಂಡ ಚಿತ್ರಗಳಲ್ಲಿ ಬೇಕಾದ್ದನ್ನು ಪಡೆಯುವ ಪ್ರಯತ್ನ ಮಾಡಬಹುದು. ಪ್ರತಿಷ್ಠಿತ ಚಿತ್ರೋತ್ಸವ ಅನ್ನಲು ಕಾರಣವಿದೆ. ವಿಶ್ವಾದ್ಯಂತ ಹತ್ತುಸಾವಿರಕ್ಕೂ ಹೆಚ್ಚು ಸಂಖ್ಯೆಯ ಚಿತ್ರೋತ್ಸವಗಳಿವೆ. ಅವುಗಳಲ್ಲಿ ಬಹುತೇಕ ಒಬ್ಬರೋ, ಇಬ್ಬರೋ ನಡೆಸುವವು. ಇದೊಂದು ಲಾಭದ ವ್ಯವಹಾರ ಎಂದುಕೊಂಡು ಈ ಮಂದಿಗೆ ಪ್ರವೇಶ ಶುಲ್ಕ, ಪ್ರಾಯೋಜಕತ್ವಗಳೇ ವಾರ್ಷಿಕ ಆದಾಯ. ಕೆಲವು ಚಿತ್ರೋತ್ಸವಗಳಂತೂ, ಶುಲ್ಕ ನೀಡಿ ಪ್ರವೇಶ ಪಡೆದ ಎಲ್ಲರಿಗೂ ಒಂದಲ್ಲ ಒಂದು ಪ್ರಶಸ್ತಿ, ಪ್ರಮಾಣಪತ್ರ ನೀಡುವ ಆಶ್ವಾಸನೆ ನೀಡುತ್ತದೆ. ಅಲ್ಲಿ ಪ್ರಶಸ್ತಿ ಪಡೆದು ಸಂಭ್ರಮಿಸುವ ಮಂದಿ ಕೂಡ ಇದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಹಂತಹಂತವಾಗಿ ಮೇಲ್ದರ್ಜೆಗೇರಿಸುವ ತಮ್ಮ ನಿರ್ಧಾರವನ್ನು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿರುವ ಸಾಧುಕೋಕಿಲ ಹೇಳಿದ್ದಾರೆ.

ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ವಿಶ್ವ ಮಾರುಕಟ್ಟೆ ಒದಗಿಸುವ, ಒಟಿಟಿ ತಾಣಗಳಲ್ಲಿ ಅವುಗಳನ್ನು ಉತ್ತೇಜಿಸುವ ನಿಟ್ಟಿನ ಕಾರ್ಯಕ್ರಮಗಳು. ಕಾನ್ ಮತ್ತು ಗೋವಾಗಳಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಅಲ್ಲಿದ್ದ ಫಿಲಂ ಬಜಾರ್‌ಗಳನ್ನು ನೋಡಿರುವ ಸಾಧು ಅವರ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ. ಅಂತಹದೊಂದು ಯೋಜನೆ ಸಾಧ್ಯವೇ ಎನ್ನುವುದನ್ನು ಮುಂದಿನ ದಿನಗಳು ಹೇಳಲಿವೆ. ಮಾರ್ಚ್ ೩, ಕನ್ನಡದ ಮೊದಲ ಚಲನಚಿತ್ರ ‘ಸತಿ ಸುಲೋಚನ’ ತೆರೆಕಂಡ ದಿನ. ಈ ದಿನವನ್ನು ವಿಶ್ವ ಕನ್ನಡ ಸಿನಿಮಾ ದಿನ ಆಗಿ ಆಚರಿಸುವ ಮತ್ತು ಅಂದೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆರಂಭಿಸುವ ನಿರ್ಧಾರವನ್ನು ಹಿಂದಿನ ಸರ್ಕಾರ ಮಾಡಿತ್ತು. ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗುತ್ತಿಲ್ಲ. ಚಿತ್ರೋತ್ಸವ ನಡೆಯುವ ವಾರದಲ್ಲಿ ಆ ದಿನ ಇರುವಂತೆ ನೋಡಿಕೊಳ್ಳಲಾಗಿದೆ. ಡಿಜಿಟಲ್ ದಿನಗಳಲ್ಲಿ, ಬೇಕಾದ ಚಿತ್ರಗಳನ್ನು ಯಾವಾಗ ಎಲ್ಲಿ ಬೇಕೆಂದರಲ್ಲಿ ನೋಡಲು ಸಾಧ್ಯ, ಇಂತಹ ಚಿತ್ರೋತ್ಸವಗಳು ಬೇಕೇ ಎಂದು ಕೇಳಿದ ಮಂದಿ, ನಂತರ ಅದರ ಮಹತ್ವವನ್ನು ತಿಳಿದು ತಮ್ಮ ನಿಲುವು ಬದಲಿಸಿಕೊಂಡ ಪ್ರಸಂಗಗಳೂ ಇವೆ.

ಕನ್ನಡ ನಾಡಿನ ಹಿರಿಮೆಗರಿಮೆಗಳನ್ನು ನಿತ್ಯ ಸಾರುತ್ತಿರುವ ನಾಡಗೀತೆಯ ಸಾಲು ‘ಸರ್ವ ಜನಾಂಗದ ಶಾಂತಿಯ ತೋಟ’ ಈ ಬಾರಿಯ ಚಿತ್ರೋತ್ಸವದ ಧ್ಯೇಯವಾಕ್ಯ ಆಗಿರುವುದು, ಉತ್ಸವ ನಡೆಯುವ ನಾಡಿನ ಯೋಚನೆಗೆ ಕನ್ನಡಿ ಹಿಡಿದಂತೆ. ಹ್ಞಾಂ, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ೧೬ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಂಘಟನಾ ಸಮಿತಿಯ ಸದಸ್ಯರಾಗಿ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಮೇಲ್ಮನೆ ಸದಸ್ಯೆ, ನಟಿ ಉಮಾಶ್ರೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರು, ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್, ಅನೂಪ್ ಚಂದ್ರಶೇಖರ್, ವಿದ್ಯಾಸಾಗರ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟರಾದ ಡಾಲಿ ಧನಂಜಯ, ನೀನಾಸಂ ಸತೀಶ್, ನಿರ್ಮಾಪಕ ಕೆ. ವೆಂಕಟನಾರಾಯಣ್, ಎಸ್. ರವಿ, ಐಪಿಎಸ್, ನಟಿ ಭಾವನಾ, ನಿರ್ದೇಶಕ ನಂಜುಂಡೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಚಲನಚಿತ್ರ ವಿಭಾಗದ ಜಂಟಿ ನಿರ್ದೇಶಕರು ಮತ್ತು ಅಕಾಡೆಮಿಯ ರಿಜಿಸ್ಟ್ರಾರ್ ಸದಸ್ಯರಾಗಿದ್ದಾg

 

Tags: