ದಾ.ರಾ. ಮಹೇಶ್
ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಬನ್ನಿಕುಪ್ಪೆ ಗೇಟ್‌ನ ಸುಮಾರು ೫೦೦ ಮೀಟರ್ ಉದ್ದಕ್ಕೂ ರಸ್ತೆಯ ಎರಡೂ ಬದಿಯಲ್ಲಿ ಅವ್ಯಾಹತವಾಗಿ ಅವರೆ ಕಾಯಿ ವ್ಯಾಪಾರ ನಡೆಯುತ್ತಿದ್ದು, ಟ್ರಾಫಿಕ್ ಜಾಮ್ ಆಗುತ್ತಿದೆ.
ಏನಾದರೂ ಅವಘಡ ಸಂಭವಿಸಿದಲ್ಲಿ ಆಗುವ ಅನಾಹುತಕ್ಕೆ ಯಾರು ಹೊಣೆ? ಹೆದ್ದಾರಿಯಲ್ಲೇ ವಹಿವಾಟು ನಡೆಯುತ್ತಿದ್ದರೂ ಪೊಲೀಸ್, ಆರ್‌ಟಿಒ ಹಾಗೂ ಗ್ರಾ. ಪಂ. ನವರು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅವರೆಕಾಯಿ ಮಾರಾಟಕ್ಕಾಗಿ ಎಪಿಎಂಸಿ ವತಿಯಿಂದ ಹಲವು ವರ್ಷಗಳ ಹಿಂದೆ ಹೆದ್ದಾರಿಯ ಬದಿಯಲ್ಲೇ ಮಾರುಕಟ್ಟೆ ನಿರ್ಮಿಸಿ ದ್ದರೂ ಸ್ಥಳ ಚಿಕ್ಕದೆಂಬ ಕಾರಣಕ್ಕೆ ಅಲ್ಲಿ ಮಾರುಕಟ್ಟೆ ನಡೆಯುತ್ತಿಲ್ಲ.
ಇದು ಪ್ರತಿವರ್ಷದ ಗೋಳು. ಮಾರುಕಟ್ಟೆಯನ್ನು ಸ್ಥಳಾಂತರಿಸುತ್ತೇವೆ ಎಂದು ಬನ್ನಿಕುಪ್ಪೆ ಗ್ರಾ. ಪಂ. ಹೇಳುತ್ತಲೇ ಬಂದಿದ್ದರೂ ಈವರೆಗೂ ಆಗಿಲ್ಲ. ಆದರೆ ಮಾರಾಟಗಾರರಿಂದ ಶುಲ್ಕ ವಸೂಲಿಗಾಗಿ ಟೆಂಡರ್ ಮೂಲಕ ಲಕ್ಷ ರೂ. ಗೆ ಹರಾಜು ಹಾಕಿದೆ. ಬೆಳಿಗ್ಗೆ ೬ರಿಂದ ಮಧ್ಯಾಹ್ನ ೧ರವರೆಗೆ ರಸ್ತೆಯಲ್ಲೇ ಜೋರು ವ್ಯಾಪಾರ ನಡೆಯುತ್ತದೆ. ರಸ್ತೆ ಬದಿಯಲ್ಲೇ ವ್ಯಾಪಾರಸ್ಥರು ಮೂಟೆ ತುಂಬುವುದು, ವಾಹನಕ್ಕೆ ಏರಿಸುವುದರಿಂದ ಜಾಗ ಸಾಲದೆ ರಸ್ತೆಯಲ್ಲಿ ನಿಂತು ರೈತರು ಮಾರಾಟ ಮಾಡಬೇಕಾಗಿದೆ. ಹೆದ್ದಾರಿಯಾಗಿದ್ದರಿಂದ ನಿಮಿಷಕ್ಕೆ ನೂರಾರು ವಾಹನಗಳು ಸಂಚರಿಸುತ್ತವೆ.
ಕನಿಷ್ಠ ೧೦ ನಿಮಿಷಕ್ಕೆ ಒಮ್ಮೆಯಾದರೂ ವಾಹನಗಳ ದಟ್ಟಣೆ ಆಗುತ್ತಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ವಾಹನಗಳಿಗೂ ಅಡಚಣೆಯಾಗುತ್ತಿದೆ. ಸಣ್ಣ-ಪುಟ್ಟ ಅಪಘಾತಗಳೂ ನಡೆಯುತ್ತಿವೆ. ಬನ್ನಿಕುಪ್ಪೆ ಸುತ್ತಮುತ್ತಲಿನ ೫೦ಕ್ಕೂ ಹೆಚ್ಚು ಗ್ರಾಮಗಳ ರೈತರು ಅವರೆಕಾಯಿ ಮೂಟೆಯನ್ನು ತಮ್ಮ ಬೈಕ್‌ಗಳಲ್ಲೇ ಇಲ್ಲಿನ ಮಾರುಕಟ್ಟೆಗೆ ತಂದು ರಸ್ತೆಯಲ್ಲೇ ವ್ಯಾಪಾರ ಕುದುರಿಸುತ್ತಾರೆ. ಒಮ್ಮೊಮ್ಮೆ ಮೂಟೆ ಹೊತ್ತ ೫೦೦ಕ್ಕೂ ಹೆಚ್ಚು ಬೈಕ್ ಗಳು ಇಡೀ ರಸ್ತೆಯನ್ನೇ ಆವರಿಸಿಕೊಂಡಿರುತ್ತವೆ. ಅಲ್ಲದೆ ಅವರೆಕಾಯಿಯನ್ನು ಖರೀದಿಸುವ ಭರದಲ್ಲಿ ಓಡಾಡುವ ಪ್ರಯಾಣಿಕರು ಕೂಡ ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಾರೆ. ಅವರೆಕಾಯಿ ಯೊಂದಿಗೆ ಇತರೆ ತರಕಾರಿಗಳ ವ್ಯಾಪಾರ ಕೂಡ ಇಲ್ಲಿ ನಡೆಯುತ್ತದೆ. ಹೀಗಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ.
ಅಕ್ಕ-ಪಕ್ಕದ ಗ್ರಾಮಗಳಿಂದ ರೈತರು ಬೈಕ್‌ಗಳಲ್ಲಿ ಅವರೆಕಾಯಿ ಮೂಟೆ ತಂದು, ರಸ್ತೆಯಲ್ಲೇ ವ್ಯಾಪಾರ ಮಾಡುತ್ತಾರೆ. ಇದು ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. -ಸಂತೋಷ್, ರೈತ, ದೊಡ್ಡೇಗೌಡನ ಕೊಪ್ಪಲು.
ಬನ್ನಿಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರುಕಟ್ಟೆ ನಿರ್ಮಿಸಿದ್ದರೂ ಜಾಗ ಸಾಲುತ್ತಿಲ್ಲ. ಬೇರೆಡೆ ಸ್ಥಳವೂ ಇಲ್ಲ. ಹೀಗಾಗಿ ಹೆದ್ದಾರಿಯಲ್ಲೇ ಅವರೆ ಆವಕ ಅನಿವಾರ್ಯವಾಗಿ ನಡೆಯುತ್ತಿದ್ದು, ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರನ್ನು ಕೋರಲಾಗಿದೆ. ಮುಂದೆ ಜಾಗ ಸಿಕ್ಕಲ್ಲಿ ಅವರೆಕಾಯಿ ಮಾರಾಟಕ್ಕಾಗಿ ಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. -ಜಿ. ಡಿ. ಹರೀಶ್ ಗೌಡ, ಶಾಸಕ