Mysore
29
moderate rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಗಂಗೋತ್ರಿಯಲ್ಲಿ ಹಾಳಾಗಿರುವ ಶುದ್ಧ ನೀರಿನ ಘಟಕಗಳು

ವಾಸು ವಿ. ಹೊಂಗನೂರು

ಮೈಸೂರು: ಮಾನಸ ಗಂಗೋತ್ರಿಯಲ್ಲಿ ಲಕ್ಷಾಂತರ ರೂ. ಖರ್ಚುಮಾಡಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಆರು ತಿಂಗ ಳಲ್ಲೇ ಹಾಳಾಗಿದ್ದು, ವಿದ್ಯಾರ್ಥಿಗಳಿಗೆ ನೀರಿಲ್ಲದೇ ತೀವ್ರ ತೊಂದರೆಯಾಗಿದೆ.

ಹೀಗಾಗಿ ಮಾನಸ ಗಂಗೋತ್ರಿಯಲ್ಲಿ ಶುದ್ಧ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಸ್ಥಳೀಯ ಕ್ಯಾಂಟೀನ್‌ಗಳು, ಬಾಟಲಿ ನೀರನ್ನು ಅವಲಂಬಿಸಬೇಕಾಗಿದೆ. ಗಂಗೋತ್ರಿ ಆವರಣದಲ್ಲಿ ಗಣಿತಶಾಸ್ತ್ರ ಅಧ್ಯಯನ ವಿಭಾಗ, ಗ್ರಂಥಾಲಯದ ಹಿಂಭಾಗ ಹಾಗೂ ಭೂವಿಜ್ಞಾನ ಶಾಸ್ತ್ರ ಮತ್ತು ಇತಿಹಾಸ ಅಧ್ಯಯನ ವಿಭಾಗದ ಮುಂಭಾಗಗಳಲ್ಲಿ ಹೀಗೆ ಮೂರು ಕಡೆ ಶುದ್ಧ ಕುಡಿಯುವ ನೀರಿನ ಘಟಕ ಗಳನ್ನು ನಿರ್ಮಿಸಲಾಯಿತು.

ನಿರ್ಮಾಣವಾದ ಆರು ತಿಂಗಳಲ್ಲೇ ಈ ಶುದ್ಧ ನೀರಿನ ಘಟಕಗಳು ಹಾಳಾಗಿದ್ದರೂ ಸಂಬಂಧಪಟ್ಟವರು ದುರಸ್ತಿ ಮಾಡಲು ಕ್ರಮ ಕೈಗೊಳ್ಳದೇ ಇರುವುದರಿಂದ ನೀರಿನ ಘಟಕಗಳ ಸುತ್ತಲಿನ ಕಬ್ಬಿಣದ ತಗಡುಗಳು ತಳಭಾಗದಲ್ಲಿ ತುಕ್ಕು ಹಿಡಿದಿವೆ. ನೀರಿನ ಪೂರೈಕೆಗಾಗಿ ಬಳಸಿದ್ದ ಪ್ಲಾಸ್ಟಿಕ್ ಟ್ಯಾಂಕ್‌ಗಳೂ ಸಂಪೂರ್ಣವಾಗಿ ಹಾಳಾಗಿವೆ. ಗಣಿತಶಾಸ್ತ್ರ ಅಧ್ಯಯನ ವಿಭಾಗದಲ್ಲಿರುವ ನೀರಿನ ಘಟಕದ ಮೇಲೆ ಮರದ ಕೊಂಬೆಗಳು ಬಿದ್ದು ಟ್ಯಾಂಕ್ ಹಾಳಾಗಿದೆ.

ಗ್ರಂಥಾಲಯದ ಮುಂದೆ ಇರುವ ನೀರಿನ ಟ್ಯಾಂಕ್ ಸುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದು, ಬಳಸಿ ಬಿಸಾಡಿರುವ ಶೌಚಾಲಯದ ಕಮೋಡ್‌ಗಳನ್ನೂ ಟ್ಯಾಂಕ್ ಬಳಿಯೇ ಇರಿಸಲಾಗಿದೆ. ಇತಿಹಾಸ ಅಧ್ಯಯನ ವಿಭಾಗದ ಮುಂಭಾಗದಲ್ಲಿರುವ ಆರ್ ಒ ಪ್ಲಾಂಟ್ ಕೂಡ ಹಾಳಾಗಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ವಿದ್ಯಾರ್ಥಿಗಳ ಕ್ಷೇಮ ಪಾಲನೆಗೆ ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಮುಂದಾಗಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಸದ್ಯದಲ್ಲೇ ದುರಸ್ತಿಗೆ ಕ್ರಮ: ಮಾನಸ ಗಂಗೋತ್ರಿಯ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಗಣಿತ ಅಧ್ಯಯನ ವಿಭಾಗದ ಕಡೆ ಈಗಷ್ಟೇ ಕಾವೇರಿ ನೀರಿನ ಸಂಪರ್ಕ ಬಂದಿದೆ. ಎಲ್ಲ ವಿಭಾಗಗಳ ಕಡೆಗೂ ಕಾವೇರಿ ನೀರಿನ ಸಂಪರ್ಕ ಬಂದ ನಂತರ ನೀರಿನ ಘಟಕಗಳನ್ನು ದುರಸ್ತಿ ಮಾಡಲಾಗುತ್ತದೆ. ನೀರಿನಲ್ಲಿ ಲವಣಾಂಶ ಹೆಚ್ಚಾಗಿರುವ ಕಾರಣ ಆರ್. ಒ. ಪ್ಲಾಂಟ್‌ಗಳು ಹಾಳಾಗಿವೆ.
-ಎನ್. ಕೆ. ಲೋಕನಾಥ್, ಕುಲಪತಿ, ಮೈಸೂರು ವಿವಿ

ಮಾನಸ ಗಂಗೋತ್ರಿಯ ಆರ್ ಒ ಪ್ಲಾಂಟ್‌ಗಳ ಶುಚಿತ್ವಕ್ಕಾಗಲೀ, ಅವುಗಳ ದುರಸ್ತಿಗಾಗಲೀ ಸಂಬಂಧಪಟ್ಟ ಅಽಕಾರಿಗಳು ಮುಂದಾಗಿಲ್ಲ. ನೀರಿಗಾಗಿ ನಾವು ಕ್ಯಾಂಟೀನ್, ಬಾಟಲಿ ನೀರನ್ನು ಅವಲಂಬಿಸಬೇಕಿದೆ. ವಿವಿ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲ ಸೌಕರ್ಯಗಳನ್ನಾದರೂ ಒದಗಿಸಬೇಕು. -ಎನ್. ಮನೋಜ್, ಎಂಬಿಎ ವಿದ್ಯಾರ್ಥಿ, ಮಾನಸ ಗಂಗೋತ್ರಿ

ಮೂರು ವರ್ಷಗಳ ಹಿಂದೆ ನಿರ್ಮಿಸಲಾದ ಶುದ್ಧ ನೀರಿನ ಘಟಕಗಳು ಕಾರ್ಯ ನಿರ್ವಹಿಸಿದ್ದು ಕೇವಲ ಆರು ತಿಂಗಳು ಮಾತ್ರ. ಸೂಕ್ತ ನಿರ್ವಹಣೆ ಮಾಡದಿರುವುದ ರಿಂದಾಗಿ ಕುಡಿಯುವ ನೀರನ್ನು ದುಡ್ಡು ಕೊಟ್ಟು ಖರೀದಿಸುವುದು ಅನಿವಾರ್ಯವಾಗಿದೆ. ಗ್ರಂಥಾಲಯಕ್ಕೆ ಪ್ರತಿದಿನ ಖಾಸಗಿಯವ ರಿಂದಲೇ ನೀರು ಖರೀದಿಸಲಾಗುತ್ತಿದೆ. ಬೇಸಿಗೆಗೆ ಮುನ್ನ ವಿವಿ ಅಧಿಕಾರಿಗಳು ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡುವ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬೇಕಾಗಿದೆ. -ಪ್ರಸನ್ನಕುಮಾರ್, ಸಂಶೋಧಕರು ಮೈ. ವಿವಿ

 

Tags: