Mysore
21
overcast clouds
Light
Dark

ದೇಸಿ ಆಟಗಳ ಮರುಪರಿಚಯ: ದಿ ಡೈಸ್ ಸಂಸ್ಥೆಯ ನೂತನ ವಿನ್ಯಾಸದೊಂದಿಗೆ ಬಂದಿವೆ ದೇಸಿ ಆಟಗಳು

ಸಾಲೋಮನ್

ಪುರಾಣಗಳಲ್ಲಿ, ರಾಜಮಹಾರಾಜರ ಕಾಲದಲ್ಲಿ ಸಾಕಷ್ಟು ಕ್ರೀಡೆಗಳು ಚಾಲ್ತಿಯಲ್ಲಿದ್ದ ಬಗ್ಗೆ ನಾವು ಓದಿದ್ದೇವೆ. ಅಲ್ಲಲ್ಲಿ ಹಳೆಯ ಕಾಲದ ರಾಜರ ಕಟ್ಟಡಗಳು, ದೇವಾಲಯಗಳಲ್ಲಿ ಆ ಆಟಗಳ ಚಿತ್ರಣವನ್ನೂ ನೋಡಿರುತ್ತೇವೆ. ಇತಿಹಾಸದ ಪುಟಗಳಲ್ಲಿಯೂ ರಾಜಮಹಾರಾಜರು ಹಾಗೂ ಸಾಮಾನ್ಯ ಪ್ರಜೆಗಳೂ ಆಡುತ್ತಿದ್ದ ಪಗಡೆ, ಚದುರಂಗ ಸೇರಿದಂತೆ ಒಂದಿಷ್ಟು ದೇಸಿ ಆಟಗಳು ಈಗಲೂ ಅಲ್ಲಿ ಇಲ್ಲಿ ನಮಗೆ ಕಾಣಸಿಗುತ್ತವೆ.

ಇವೆಲ್ಲ ಕಾಲಹರಣಕ್ಕಾಗಿ ಆಡುವ ಆಟಗಳೇನಲ್ಲ. ಅವುಗಳು ಒಂದು ರೀತಿಯ ಮೈಂಡ್ ಗೇಮ್ಸ್, ನಮ್ಮ ಏಕಾಗ್ರತೆ ಹಾಗೂ ಮಿದುಳನ್ನು ಚುರುಕುಗೊಳಿಸುವ, ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳುವ ಆಟಗಳು, ಇಂತಹ ಆಟಗಳನ್ನು ನಗರ ಭಾಗದ ಜನರಿಗೆ, ಪ್ರಸ್ತುತದ ಯುವ ಸಮೂಹಕ್ಕೆ ಪರಿಚಯಿಸುವ ಸಲುವಾಗಿ ಇತ್ತೀಚೆಗೆ ಮೈಸೂರಿನ ಖಾಸಗಿ ಹೊಟೇಲ್‌ ವೊಂದರಲ್ಲಿ ‘ರೋಲ್ ದಿ ಡೈಸ್’ ಎಂಬ ಸಂಸ್ಥೆಯೊಂದು ಆಯೋಜಿಸಿತ್ತು.

ಮಹಿಳೆಯರು, ಪುರುಷರು ಹಾಗೂ ಮಕ್ಕಳನ್ನೂ ಬಿಡದೆ ಹೆಚ್ಚು ಸೆಳೆದ ದೇಸಿ ಆಟಗಳಾದ ಪಗಡೆ, ಕವಡೆ ಆಟ, ಅಳಿಗುಳಿ ಮನೆಗಳ ಜೊತೆಗೆ ಇದೇ ಮಾದರಿಯಲ್ಲಿ ವಿನ್ಯಾಸ ಮಾಡಿರುವ ನವಕಂಕರಿ, ಶೋಲ್ ಗುಟ್ಟಿ, ತಾಬ್ಲಾ ಹಾಗೂ ಆಡು ಹುಲಿ ಸೇರಿದಂತೆ 16ಕ್ಕೂ ಹೆಚ್ಚು ಆಟಗಳು ಗಮನ ಸೆಳೆದವು.

ನಗರದ ಕಾಳಿದಾಸ ರಸ್ತೆಯಲ್ಲಿರುವ ‘ರೋಲ್‌ ದಿ ಡೈಸ್’ ಸಂಸ್ಥೆಯು ಕಳೆದ 4 ವರ್ಷಗಳಿಂದ ದೇಸಿ ಆಟಗಳ ಬಗ್ಗೆ ಜನರಿಗೆ ತಿಳಿಸುವುದು ಮಾತ್ರವಲ್ಲದೇ ಆ ಆಟ ಹೇಗೆ ಆಡುವುದು ಎಂಬುದನ್ನೂ ಕಲಿಸುತ್ತಾ ಬಂದಿದೆ.

ಒಂದೇ ಕುಟುಂಬದ ಸದಸ್ಯರನ್ನೆಲ್ಲ ಒಟ್ಟಾಗಿ ಸೇರಿಸಿ ಅವರಿಗೆ ವಿವಿಧ ದೇಸಿ ಆಟಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಆಟ ಆಡುವುದನ್ನು ಕಲಿಸುವುದರಲ್ಲಿ ಈ ಸಂಸ್ಥೆ ಮುಂದಾಗಿದೆ.

ಸಾಕಷ್ಟು ಅನ್ವೇಷಣೆಗಳನ್ನು ಮಾಡಿ, ಆ ದೇಶಿ ಆಟಗಳ ಸೊಗಡನ್ನು ಸಂಗ್ರಹಿಸಿ ಅವುಗಳನ್ನು ಆಡುವ ವಿಧಾನ ಬಗ್ಗೆ ಅಧ್ಯಯನ ನಡೆಸಿ ಆ ಆಟಗಳಲ್ಲಿ ಒಂದಿಷ್ಟು ನವೀನತೆಯನ್ನು ಅಳವಡಿಸಿಕೊಂಡು ಈ ಸಂಸ್ಥೆ ಆ ಆಟಗಳನ್ನು ಜನರಿಗೆ ಮರುಪರಿಚಯ ಮಾಡುತ್ತಿದೆ. ಈ ಆಟಗಳು ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಸೆಳೆಯುತ್ತಿದ್ದು, ಅವುಗಳನ್ನು ಕಲಿಯುವುದರಲ್ಲಿ ಆಸಕ್ತಿ ತೋರುವಂತೆ ಮಾಡಿರುವುದು ವಿಶೇಷ. ಅಲ್ಲದೆ ಈ ಆಟಗಳನ್ನು ಆಡುವುದನ್ನು ಸ್ಥಳದಲ್ಲಿಯೇ ಕಲಿತು, ಅವುಗಳನ್ನು ಖರೀದಿಸಲು ಉತ್ಸಾಹರಾಗುವಂತೆ ಮಾಡಿದೆ.

ಈ ದೇಸಿ ಆಟಗಳೂ ಚದುರಂಗ, ಪಗಡೆಯಷ್ಟೇ ಮಿದುಳಿಗೆ ಕಸರತ್ತು ನೀಡುವ ಆಟಗಳಾಗಿವೆ. ಚೈನೀಸ್ ಚಕರ್‌ಗೆ ಹೋಲಿಕೆಯಾಗುವಂತಹ ಆಟಗಳು ಬುದ್ದಿಗೆ ಬಹಳ ಕಸರತ್ತು ನೀಡುತ್ತವೆ. ಮಕ್ಕಳು ಒಮ್ಮೆ ಇದನ್ನು ಆಡಿದರೆ ಖಂಡಿತ ಅವರು ಮೊಬೈಲ್, ಕಂಪ್ಯೂಟರ್ ಹಾಗೂ ವಿಡಿಯೋ ಗೇಮ್‌ಗಳ ಗೀಳಿನಿಂದ ಹೊರಬರುವ ಸಾಧ್ಯತೆಗಳು ಹೆಚ್ಚಿವೆ.

ದೇಸಿ ಆಟಗಳ ಕಾರ್ಯಾಗಾರ: ಈ ಸಂಸ್ಥೆಯ ಮುಖ್ಯಸ್ಥರಾದ ತನುಶ್ರೀ ಈ ಆಟಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ದೇಶದ ಪ್ರಮುಖ ನಗರಗಳು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಿ, ಪೌರಾಣಿಕ ಹಿನ್ನೆಲೆ ಹಾಗೂ ಐತಿಹಾಸಿಕ ಛಾಪು ಹೊಂದಿರುವ ಆಟಗಳ ಬಗ್ಗೆ ತಿಳಿದುಕೊಂಡು, ಅವುಗಳ ಆಧಾರದ ಮೇಲೆ ಸ್ವಲ್ಪ ಮಟ್ಟಿಗೆ ವಿನ್ಯಾಸವನ್ನು ಬದಲಾಯಿಸಿ ಇಂದು ಈ ರೀತಿಯಾಗಿ ದೇಸಿ ಆಟಗಳನ್ನು ಮೇಲ್ದರ್ಜೆಗೆ ಏರಿಸಿದ್ದಾರೆ. ಈ ಆಟಗಳನ್ನು ಕಲಿಸಲು ತಮ್ಮ ಕಚೇರಿ ಹಾಗೂ ಶಾಲೆಗಳಲ್ಲಿ ಕಾರ್ಯಾಗಾರಗಳನ್ನೂ ನಡೆಸುತ್ತಿದ್ದಾರೆ.

ರಾಮಕೃಷ್ಣ ಅಧ್ಯಾತ್ಮ ಕೇಂದ್ರದ 400 ಮಕ್ಕಳಿಗೆ ದೇಸಿ ಆಟಗಳ ಸವಿ ಉಣ ಬಡಿಸಿದ್ದಾರೆ. ಮೈಸೂರಿನ ಅನೇಕ ಕುಟುಂಬದ ಸದಸ್ಯರಿಗೂ ದೇಸಿ ಆಟಗಳ ಬಗ್ಗೆ ಅರಿವು ಮೂಡಿಸಿ, ಆಟ ಆಡುವುದನ್ನೂ ಕಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಾಲೆ ಸೇರದ ಚಿಕ್ಕ ಮಕ್ಕಳೂ ಮೊಬೈಲ್ ಗೀಳಿಗೆ ಬಿದ್ದಿದ್ದಾರೆ. ಅವರ ಹಠವನ್ನು ತಡೆಯ ಲಾಗದೆ ಮಕ್ಕಳಿಗೆ ಮೊಬೈಲ್‌ ಕೊಟ್ಟು ಅಭ್ಯಾಸ ಮಾಡಿರುವ ಪೋಷಕರು ಇವುಗಳಿಂದ ಮಕ್ಕಳನ್ನು ಹೊರತರುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಅಲ್ಲದೆ ಕೆಲಸ ಒತ್ತಡದಲ್ಲಿ ಜೀವನ ದೂಡುತ್ತಿರುವ ಮಂದಿಗೂ ಬಿಡುವಿನ ಸಮಯ ದಲ್ಲಿ ಈ ಆಟಗಳನ್ನು ಆಡುವುದು ಕೆಲ ಕಾಲ ಮಾನಸಿಕ ನೆಮ್ಮದಿ ನೀಡಲಿದೆ. ಆದ್ದರಿಂದ ನಾವೂ ಈ ಆಟಗಳನ್ನು ಪರಿಚಯ ಮಾಡಿಕೊಂಡು ಬಿಡುವಿನ ವೇಳೆ ಆಡುವುದು ಸೂಕ್ತ ಅನಿಸುತ್ತದೆ.