ತನಗೆ ಮಕ್ಕಳಿಲ್ಲದಿದ್ದರೂ, ರಸ್ತೆ ಬದಿಯಲ್ಲಿ ನೂರಾರು ಮರಗಳನ್ನು ನೆಟ್ಟು ಮಕ್ಕಳಂತೆ ಆರೈಕೆ ಮಾಡಿ, ಬೆಳೆಸಿ ‘ವೃಕ್ಷ ಮಾತೆ’ ಎಂದೇ ಹೆಸರಾಗಿದ್ದ ಶತಾಯುಷಿ ಸಾಲು ಮರದ ತಿಮ್ಮಕ್ಕ (೧೧೪) ನಮ್ಮನ್ನು ಅಗಲಿದ್ದಾರೆ. ಆದರೆ ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ನೆಟ್ಟು ಬೆಳೆಸಿ ಹೋಗಿರುವ ಮರಗಳು ಜನರನ್ನು ಸದಾ ತಣ್ಣಗಿರಿಸುತ್ತವೆ.
ಪರಿಸರಕ್ಕೆ ಕೊಡುಗೆಯ ಹೆಗ್ಗುರುತಾಗಿ ಉಳಿಯುತ್ತವೆ. ಅವರ ಸಾರ್ಥಕ ಕೆಲಸವನ್ನು ಅಜರಾಮರವಾಗಿಸುತ್ತವೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಾವಿರಾರು ಮರಗಳನ್ನು ಮಕ್ಕಳಂತೆ ಪ್ರೀತಿಯಿಂದ ಬೆಳೆಸಿರುವುದಕ್ಕೆ ಈ ಸಮಾಜ ಅವರ ಋಣದಲ್ಲಿದೆ. ಪದ್ಮಶ್ರೀ ಗೌರವ ಸೇರಿದಂತೆ ಪರಿಸರ ಸಂರಕ್ಷಣೆಗಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನೂರಾರು ಪ್ರಶಸ್ತಿಗಳು ಅವರಿಗೆ ಸಂದಿವೆ. ತಿಮ್ಮಕ್ಕ ಅವರ ಪರಿಸರ ಸೇವೆ ಅನುಕರಣೀಯ, ಸದಾ ಸ್ಮರಣೀಯ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





