ರಾಜ್ಯದಲ್ಲಿ ಶಾಲಾ -ಕಾಲೇಜು ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶಕ್ತಿ ಯೋಜನೆಯ ಪರಿಣಾಮದಿಂದಾಗಿ ಈ ಬಸ್ಸುಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಪ್ರಯಾಣಿಸುತ್ತಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.
ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆಯ ಸೌಲಭ್ಯದಿಂದ ಅಶ್ವಮೇಧ ಬಸ್ ಮತ್ತು ತಡೆರಹಿತ ಬಸ್‌ಗಳಲ್ಲಿಯೂ ಉಚಿತ ಪ್ರಯಾಣದ ಅವಕಾಶ ಇದೆ. ಆದರೆ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಅಶ್ವಮೇಧ ಬಸ್ ಮತ್ತು ತಡೆರಹಿತ ಬಸ್ ಗಳಲ್ಲಿ ಪಾಸ್ ಅನುಮತಿಸಲಾಗುತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ಅಶ್ವಮೇಧ ಬಸ್‌ಗಳೇ ಹೆಚ್ಚು ಸಂಚರಿಸುವುದರಿಂದ ವಿದ್ಯಾರ್ಥಿಗಳು ಆಗೊಮ್ಮೆ ಈಗೊಮ್ಮೆ ಬರುವ ಸಾಮಾನ್ಯ ಬಸ್‌ಗಳನ್ನೇ ಅವಲಂಬಿಸಿ ಪ್ರಯಾಣಿಸುವುದು ಅನಿವಾರ್ಯವಾಗಿದ್ದು, ಇದರಿಂದಾಗಿ ಅವರು ನಿಗದಿತ ಸಮಯಕ್ಕೆ ಗಮ್ಯಸ್ಥಾನ ತಲುಪಲು ಸಾಧ್ಯವಿಲ್ಲದಂತಾಗಿದೆ.
ಸಾರಿಗೆ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಸಮಯಪಾಲನೆ ದೃಷ್ಟಿಯಿಂದ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಡೆರಹಿತ ಮತ್ತು ಅಶ್ವಮೇಧ ಬಸ್‌ಗಳಲ್ಲಿಯೂ ವಿದ್ಯಾರ್ಥಿ ಪಾಸ್‌ಗೆ ಅನುಮತಿ ನೀಡುವಂತೆ ಆದೇಶ ನೀಡಬೇಕಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
– ಎಂ. ಪಿ.ದರ್ಶನ್ ಚಂದ್ರ, ಮುಕ್ಕಡಹಳ್ಳಿ, ಚಾಮರಾಜನಗರ ತಾ.





