ರಾಜ್ಯದ ಅತ್ಯಂತ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರೆನಿಸಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪನವರ ನಿಧನ ನಿಜಕ್ಕೂ ನೋವಿನ ಸಂಗತಿ.
ದೇಶದ ಅತಿ ಹಿರಿಯ ಶಾಸಕರಾಗಿದ್ದ ಶಿವಶಂಕರಪ್ಪನವರು ತಮ್ಮ ೯೫ ವರ್ಷಗಳ ಸುದೀರ್ಘ ಬದುಕಿನಲ್ಲಿ ೬ ಬಾರಿ ಶಾಸಕರಾಗಿ ಹಾಗೂ ಒಂದುಅ ಬಾರಿ ಲೋಕಸಭೆಯ ಸದಸ್ಯರಾಗಿ ರಾಜ್ಯ ಹಾಗೂ ದೇಶದ ರಾಜಕೀಯ ಚರಿತ್ರೆಯಲ್ಲಿ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಓರ್ವ ದಿಟ್ಟ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿದ್ದ ಶಿವಶಂಕರಪ್ಪನವರು ಯಾವುದೇ ಕಾರಣಕ್ಕೂ ತಮ್ಮ ಧ್ಯೇಯ ಮತ್ತು ಸಿದ್ಧ್ದಾಂತಗಳ ಜೊತೆ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಜೊತೆ ಸೌಹಾರ್ದ ಸಂಬಂಧ ಹೊಂದಿದ್ದ ಅವರನ್ನು ರಾಜಕೀಯ ವಲಯದಲ್ಲಿ ‘ಅಜಾತ ಶತ್ರು’ ಎಂದೇ ಕರೆಯಲಾಗುತ್ತಿತ್ತು. ಜವಳಿ ಗಿರಣಿಗಳ ನಾಡಾಗಿದ್ದ ದಾವಣಗೆರೆಯನ್ನು ಬಾಪೂಜಿ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಕಾಶಿಯನ್ನಾಗಿ ರೂಪಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.
ಕಾಂಗ್ರೆಸ್ ಪಕ್ಷದ ಓರ್ವ ನಿಷ್ಠಾವಂತ ನಾಯಕನಾಗಿ ದಾವಣಗೆರೆ ಜಿಲ್ಲೆಯಲ್ಲಿ ಮಾತ್ರವಲ್ಲದೇ ಇಡೀ ರಾಜ್ಯದಲ್ಲೇ ಗಮನ ಸೆಳೆದಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ನೇರ ನಡೆ, ನುಡಿ ಕೆಲವರಿಗೆ ಅಪಥ್ಯವೆನ್ನಿಸಿದ್ದರೂ ಅದಕ್ಕಾಗಿ ತಲೆ ಕೆಡಿಸಿಕೊಂಡವರಲ್ಲ. ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಸರಳ ಮತ್ತು ಸಜ್ಜನ ರಾಜಕಾರಣಿಯಾಗಿ ಇಡೀ ದೇಶಕ್ಕೆ ಮಾದರಿಯಾಗಿದ್ದರು.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





