ಮೈಸೂರಿನ ನಗರ ಬಸ್ ನಿಲ್ದಾಣದೊಳಗಿನ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು, ರಸ್ತೆಗೆ ಹಾಕಿದ್ದ ಡಾಂಬರ್ ಕಿತ್ತುಬಂದಿದೆ. ಅಲ್ಲದೆ ಅಲ್ಲಿನ ಕಲ್ಲುಗಳೆಲ್ಲ ರಸ್ತೆಗೆ ಹರಡಿಕೊಂಡಿವೆ.
ನಿತ್ಯ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ನೂರಾರು ಪ್ರಯಾಣಿಕರು ಈ ನಿಲ್ದಾಣದ ಮೂಲಕ ಬಸ್ ಹತ್ತಿ ನಗರದ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಾರೆ. ಇಂತಹ ಬಸ್ ನಿಲ್ದಾಣದಲ್ಲಿ ಎಲ್ಲ ಮೂಲಸೌಕರ್ಯಗಳಿರಬೇಕಿತ್ತು.
ಆದರೆ ಇಲ್ಲಿ ನಿಲ್ದಾಣದ ರಸ್ತೆಗಳೇ ಗುಂಡಿ ಬಿದ್ದಿದ್ದು, ಜನರು ಓಡಾಡಲು ಕಷ್ಟವಾಗುತ್ತಿದೆ. ಮಳೆಗಾಲದಲ್ಲಂತೂ ಈ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ಬಸ್‌ಗಳು ಸಂಚರಿಸಿದಂತೆಲ್ಲ ಆ ನೀರೆಲ್ಲ ಪ್ರಯಾಣಿಕರಿಗೆ ರಾಚುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕೂಡಲೇ ನಿಲ್ದಾಣದೊಳಗಿನ ಗುಂಡಿಬಿದ್ದ ರಸ್ತೆಗಳನ್ನು ದುರಸ್ತಿಪಡಿಸಬೇಕಿದೆ.
-ಬಿ. ಎಂ. ಅನುಷ, ಪತ್ರಿಕೋದ್ಯಮ ವಿಭಾಗ, ಮಾನಸ ಗಂಗೋತ್ರಿ, ಮೈಸೂರು





