ಹೆಚ್. ಡಿ. ಕೋಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಜನರು ಚಿಕಿತ್ಸೆಗಾಗಿ ಬರುತ್ತಾರೆ . ಈ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಲಭ್ಯವಿದ್ದರೂ ಇಲ್ಲಿನ ಸಿಬ್ಬಂದಿ ರೋಗಿಗಳನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ಕಳುಹಿಸುತ್ತಾರೆ. ಬಡ ರೋಗಿಗಳು ಹಾಗೂ ಕೂಲಿ ಕಾರ್ಮಿಕರು ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಸ್ಕ್ಯಾನಿಂಗ್ ಮಾಡಿಸಲು ಸಾವಿರಾರು ರೂ. ತೆರಬೇಕಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಯಲ್ಲಿರುವ ಸ್ಕ್ಯಾನಿಂಗ್ ಹಾಗೂ ಇತರ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಿದರೆ ಬಡಜನರಿಗೆ ನೆರವಾಗುತ್ತದೆ.
ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಪಘಾತ, ಶಸಚಿಕಿತ್ಸೆ ಮೊದಲಾದ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತದ ಅಗತ್ಯವಿದ್ದಲ್ಲಿ ಮೈಸೂರಿನ ಕೆ. ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ಕಳುಹಿಸುತ್ತಾರೆ. ರಕ್ತ ಸಿಗುವುದು ತಡವಾದರೆ ರೋಗಿಗಳ ಜೀವಕ್ಕೇ ಎರವಾಗುವ ಸಾಧ್ಯತೆಯಿರುತ್ತದೆ.
ತಾಲ್ಲೂಕು ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಸಕಾಲದಲ್ಲಿ ರಕ್ತ ಸಿಗುವ ಹಾಗೆ ವ್ಯವಸ್ಥೆ ಮಾಡಿದರೆ ರೋಗಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾ





