ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕಲುಷಿತ ಕೇಕ್ ಸೇವಿಸಿ ಮಗುವೊಂದು ಅಸ್ವಸ್ಥಗೊಂಡಿರುವ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ. ಬೇಕರಿ, ಹೋಟೆಲ್‌ಗಳಲ್ಲಿ ಶುಚಿತ್ವ ಕಾಪಾಡದಿರುವುದು ಇಂತಹ ಪ್ರಕರಣಗಳು ನಡೆಯಲು ಮುಖ್ಯವಾದ ಕಾರಣ. ಹಾಗೆಯೇ, ಪೋಷಕರು ಕೂಡ ಎಂತಹ ಅಂಗಡಿ ಅಥವಾ ಬೇಕರಿಗಳಿಂದ ತಿನಿಸನ್ನು ಖರೀದಿಸಬೇಕು ಎಂಬುದನ್ನು ಸರಿಯಾಗಿ ನಿರ್ಧಾರ ಮಾಡಬೇಕು ಎಂಬುದಕ್ಕೆ ಈ ಪ್ರಕರಣ ಎಚ್ಚರಿಕೆಯಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಅಂಗಡಿ, ಮಳಿಗೆಗಳಲ್ಲಿ ನೈರ್ಮಲ್ಯ, ಶುದ್ಧ ಕುಡಿಯುವ ನೀರು ಇತ್ಯಾದಿ ವಿಚಾರವಾಗಿ ಆಗಾಗ್ಗೆ ತಪಾಸಣೆ ನಡೆಸಬೇಕು. ಈ ಪ್ರಕರಣ ದಲ್ಲಿ ಮಗುವಿನ ಜೀವಕ್ಕೆ ಹಾನಿಯಾಗಿಲ್ಲ. ಆದರೆ, ಮುಂದೆ ಪರಿಸ್ಥಿತಿ ಬದಲಾಗದೇ ಇದೇ ರೀತಿಯಲ್ಲಿ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಮುಂದೊಂದು ದಿನ ಇಂತಹ ಗಂಡಾಂತರ ನಮ್ಮ ಮನೆಯ ಮಗುವಿಗೆ ಅಥವಾ ಕುಟುಂಬದವರಿಗೆ ಎದುರಾದರೆ ಗತಿಯೇನು ಎಂಬುದಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಚಿಂತಿಸಿ, ಸೂಕ್ತ ಕ್ರಮಕೈಗೊಳ್ಳಬೇಕು.
-ಆರ್. ವಿ. ಸದಾಶಿವ, ಸರಸ್ವತಿಪುರಂ, ಮೈಸೂರು





