ಮೈಸೂರಿನ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಎನ್.ಆರ್.ಮೊಹಲ್ಲಾದ ಗಣೇಶ ನಗರದಲ್ಲಿರುವ ಹಿಂದೂ ರುದ್ರಭೂಮಿ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ರುದ್ರಭೂಮಿಯಲ್ಲಿ ಗಿಡಗಂಟಿಗಳು ಆಳೆತ್ತರ ಬೆಳೆದು ನಿಂತಿದ್ದು, ಶವ ಹೂಳುವವರು ಜಾಗಕ್ಕಾಗಿ ಪರದಾಡುವಂತಾಗಿದೆ. ಶವ ಸಂಸ್ಕಾರ ನಡೆಸಿದವರು ಚಟ್ಟ, ಮೃತರ ಹಾಸಿಗೆ, ಹೊದಿಕೆಗಳನ್ನು ಅರೆ ಬರೆ ಸುಟ್ಟು ಅಲ್ಲೇ ಬಿಸಾಡುವುದರಿಂದ ಕಾಲಿಡಲೂ ಜಾಗವಿಲ್ಲದಂತಾಗಿದೆ. ಜತೆಗೆ ರುದ್ರಭೂಮಿಗೆ ಸೆಕ್ಯೂರಿಟಿ ಗಾರ್ಡ್ ಇಲ್ಲದ್ದರಿಂದ ಮದ್ಯಪಾನ, ಇಸ್ಟೀಟ್ ಜೂಜು, ಮಾದಕ ಪದಾರ್ಥಗಳ ಸೇವನೆಯ ತಾಣವಾಗಿ ಮಾರ್ಪಟ್ಟಿದ್ದು, ರುದ್ರಭೂಮಿಯ ನಾಮ-ಲಕವೂ ಸ್ಪಷ್ಟವಾಗಿ ಕಾಣದಂತಿದೆ.
ಶವ ಸುಡುವ ಯಂತ್ರ ಸಮರ್ಪಕ ನಿರ್ವಹಣೆ ಇಲ್ಲದೇ ತುಕ್ಕು ಹಿಡಿದಿರುವುದರಿಂದ ಶವ ಸುಡಲು ಅವಕಾಶವಿಲ್ಲದಂತಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ರುದ್ರಭೂಮಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕಾಗಿದೆ.
-ಕೆ.ಅಭಿನಂದ , ಎನ್.ಆರ್.ಮೊಹಲ್ಲಾ, ಮೈಸೂರು





