ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ಅರಮನೆ ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಮೂಲೆಗಳಿಂದ ಮೈಸೂರಿಗೆ ಜನಸಮೂಹ ಹರಿದು ಬರುತ್ತಿದೆ. ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಲಲಿತ ಕಲೆಗಳ ಪ್ರದರ್ಶನ, ವಸ್ತು ಪ್ರದರ್ಶನ ಹಾಗೂ ಇನ್ನಿತರ ಕಣ್ಮನ ಸೆಳೆಯುವ ಮತ್ತು ಮನರಂಜನೆಯ ಕಾರ್ಯಕ್ರಮಗಳು ಜರುಗುತ್ತಿವೆ. ಆದರೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪುಸ್ತಕ ಮೇಳಕ್ಕೆ ನಿರೀಕ್ಷೆಯ ಮಟ್ಟದಲ್ಲಿ ಜನ ಭೇಟಿ ನೀಡದೆ ಇರುವುದು ಬೇಸರದ ಸಂಗತಿ.
ಕನ್ನಡ ಪುಸ್ತಕಗಳ ಓದುಗರ ಸಂಖ್ಯೆ ಕಡಿಮೆಯಾಗಿದೆಯೇನೋ ಎಂಬ ಆತಂಕ ಮೂಡುತ್ತದೆ. ಇಂದಿನ ಯುವಸಮೂಹ ಸಾಮಾಜಿಕ ಮಾಧ್ಯಮಗಳಿಂದ ಪ್ರಭಾವಿತರಾಗಿ ಅದರಲ್ಲೇ ಹೆಚ್ಚು ಸಮಯ ಕಳೆಯುತ್ತಿರುತ್ತಾರೆ. ಇದರ ಜೊತೆಯಲ್ಲೇ ಕನ್ನಡ ಪುಸ್ತಕ ಓದುವ ಹವ್ಯಾಸ ಮತ್ತು ಸಾಹಿತ್ಯಾಸಕ್ತಿಯನ್ನೂ ಬೆಳೆಸಿಕೊಂಡರೆ ಕನ್ನಡ ಭಾಷೆಯ ಉಳಿವಿಗೆ ಮತ್ತಷ್ಟು ಬೆಳವಣಿಗೆಗೆ ಪುಷ್ಟಿ ದೊರೆತಂತಾಗುತ್ತದೆ.
– ಎಂ.ಪಿ.ದರ್ಶನ್ ಚಂದ್ರ, ಮೈಸೂರು





