ಈ ಹಿಂದೆ ಕೇರಳ ರಾಜ್ಯ ಸರ್ಕಾರ ವಿದ್ಯಾರ್ಥಿನಿಯರಿಗೆ ಋತು ಚಕ್ರ ರಜೆಯನ್ನು ಘೋಷಣೆ ಮಾಡಿತ್ತು. ಆಗ ನಮ್ಮ ರಾಜ್ಯದಲ್ಲೂ ಈ ನಿಯಮ ಜಾರಿಗೆ ಬರಬೇಕೆಂಬುದು ನಮ್ಮ ರಾಜ್ಯದ ಬಹುತೇಕ ಪ್ರಜ್ಞಾವಂತರ ನಿರೀಕ್ಷೆಯಾಗಿತ್ತು. ಇದೀಗ ಕರ್ನಾಟಕ ರಾಜ್ಯ ಸರ್ಕಾರ ಋತು ಚಕ್ರ ರಜೆ ಸೌಲಭ್ಯ ಕಲ್ಪಿಸುವ ಕುರಿತು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಸಂತಸ ತಂದಿದೆ. ಪ್ರತಿ ತಿಂಗಳು ಮಹಿಳೆಯರು ಮುಟ್ಟಿನ ಸಮಯದಲ್ಲೂ ಕೆಲಸ ಮಾಡುತ್ತಾರೆ.
ಆದರೆ ಆ ಸಮಯದಲ್ಲಿ ಮಹಿಳೆಯರಿಗೆ ರಜೆಯ ಅಗತ್ಯವಿತ್ತು. ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಋತು ಚಕ್ರ ರಜೆ ನೀಡುವ ನೀತಿಯನ್ನು ಜಾರಿಗೆ ತರಲು ಅನುಮೋದನೆ ನೀಡಿದೆ. ಸರ್ಕಾರದ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿನಿಯರಿಗೂ ಮುಟ್ಟಿನ ರಜೆ ಸೌಲಭ್ಯ ಕಲ್ಪಿಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿ.
– ಎನ್.ಆಶಾ, ಬೆಂಗಳೂರು





