Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಓದುಗರ ಪತ್ರ: ಸಾಹಿತ್ಯ ಸಮ್ಮೇಳನದ ಊಟದಲ್ಲಿ ತಾರತಮ್ಯವೇಕೆ?

ಡಿಸೆಂಬರ್ ೨೧, ೨೨, ಮತ್ತು ೨೩ರಂದು ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಗಣ್ಯರು, ಮುಖ್ಯ ಅತಿಥಿಗಳು ಮತ್ತು ಇತರೆ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಬೇರೆ-ಬೇರೆ ರೀತಿಯ ಊಟದ ವ್ಯವಸ್ಥೆ ಮಾಡಿರುವುದಾಗಿ ಸಮ್ಮೇಳನದ ಆಹಾರ ಸಮಿತಿಯವರು ಮಾಧ್ಯಮಗಳ ಮುಂದೆಯೇ ಹೇಳಿಕೆ ನೀಡಿದ್ದು, ಅದರ ಮೆನುವನ್ನೂ ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ.

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರೂ ಕನ್ನಡಾಭಿಮಾನಿಗಳು ಎಂದಾದ ಮೇಲೆ ಈ ತಾರತಮ್ಯದ ಅಗತ್ಯವಿತ್ತೆ? ಇಲ್ಲಿ ಗಣ್ಯರು ಮತ್ತು ಮುಖ್ಯ ಅತಿಥಿಗಳಿಗೆ ಸ್ಟಾರ್ ಹೋಟೆಲಿನ ಮಾದರಿಯಲ್ಲಿ ಆಹಾರದ ಮೆನು ಸಿದ್ಧಪಡಿಸಲಾಗಿದೆ. ಇತರೆ ಪ್ರತಿನಿಽಗಳಿಗೆ ಬೇರೆ ಮಾದರಿಯ ಆಹಾರದ ಮೆನು ತಯಾರಿಸಲಾಗಿದೆ. ತಿನ್ನುವ ಆಹಾರದಲ್ಲಿ ಈ ರೀತಿಯ ಭೇದ-ಭಾವ ಮಾಡಿರುವುದು ಭಾಗವಹಿಸುತ್ತಿರುವ ಪ್ರತಿನಿಧಿಗಳಿಗೆ ಮಾಡಿರುವ ಅಪಮಾನವಲ್ಲವೇ? ಕನ್ನಡ ಸಾಹಿತ್ಯ ಸಮ್ಮೇಳನಗಳು ಎಂದರೆ ಭಾಗವಹಿಸುವ ಎಲ್ಲರನ್ನೂ ಮೊದಲು ಕನ್ನಡದ ಅಭಿಮಾನಿಗಳು ಎಂದು ಭಾವಿಸಬೇಕು.

ಆನಂತರ ಅವರನ್ನು ಅತಿಥಿಗಳು, ಮುಖ್ಯ ಅತಿಥಿಗಳು ಎಂದು ಪರಿಗಣಿಸಬೇಕು. ಆದರೆ ಇಲ್ಲಿ ಭಾಗವಹಿಸುವ ಪ್ರತಿನಿಽಗಳು ಮತ್ತು ಸಾರ್ವಜನಿಕರನ್ನು ಎರಡನೇ ದರ್ಜೆಯ ಮನುಷ್ಯರಂತೆ ಕಾಣುತ್ತಿದ್ದು, ಈ ತಾರತಮ್ಯ ಒಳ್ಳೆಯ ಬೆಳವಣಿಗೆಯಲ್ಲ. ಇದು ಸಾರ್ವಜನಿಕ ಕಾರ್ಯಕ್ರಮವಾಗಿರುವುದರಿಂದ ಎಲ್ಲರನ್ನೂ ಒಂದೇ ಎಂದು ಪರಿಗಣಿಸ ಬೇಕು. ಆದ್ದರಿಂದ ಕಸಾಪ ಈ ಬಗ್ಗೆ ಗಮನಹರಿಸಿ ಸಮ್ಮೇಳನದಲ್ಲಿ ಭಾಗವಹಿಸವ ಎಲ್ಲರಿಗೂ ಒಂದೇ ಮಾದರಿಯಲ್ಲಿ ಊಟದ ವ್ಯವಸ್ಥೆ ಮಾಡಬೇಕಿದೆ.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು

 

Tags: