ಅರಮನೆ ನಗರಿ ಮೈಸೂರಿನ ಸುತ್ತಮುತ್ತಲಿನ ಪಾರಂಪರಿಕ ಕೆರೆಗಳ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೆರೆ ಅಭಿವೃದ್ಧಿ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಕೆರೆಗಳ ಪುನಶ್ಚೇತನಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ.
ದಳವಾಯಿ,ಹುಯಿಲಾಳು, ಹಿನಕಲ್, ದೇವನೂರು, ಭುಗತಗಳ್ಳಿ ಹಾಗೂ ವಾಜಮಂಗಲ ಕೆರೆಗಳ ಪುನಶ್ಚೇತನಕ್ಕೆ ಮೊದಲ ಹಂತದಲ್ಲಿ ೪೦ ಕೋಟಿ ರೂ.ಗಳನ್ನು ವೆಚ್ಚ ಮಾಡಲು ಉದ್ದೇಶಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಕೆರೆಗಳ ಪುನಶ್ಚೇತನ ಕಾಮಗಾರಿ ಕೈಗೊಳ್ಳುತ್ತೇವೆ ಎಂದು ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಎಂಡಿಎ)ದ ಆಯುಕ್ತರು ತಿಳಿಸಿರುವುದು ಶ್ಲಾಘನೀಯ.
ಕೆರೆಗಳ ಪುನಶ್ಚೇತನ ಕಾಮಗಾರಿ ಶುರು ಮಾಡುವ ಮೊದಲು ಸರ್ವೆ ನಡೆಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಕಾಮಗಾರಿ ಆರಂಭಿಸುವುದು ಒಳ್ಳೆಯದು. ಜಿಲ್ಲಾಧಿಕಾರಿಗಳು ಹಾಗೂ ಎಂಡಿಎ ಆಯುಕ್ತರು ಕೆರೆಗಳ ಪುನಶ್ಚೇತನ ಕಾಮಗಾರಿ ಕಳಪೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದು ಅಗತ್ಯ.
– ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು





