ರಾಜ್ಯ ಸರ್ಕಾರ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಋತುಚಕ್ರ ರಜೆಯನ್ನು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಸರ್ಕಾರದ ಈ ನೀತಿಯಿಂದಾಗಿ ಕೆಲವು ಉದ್ಯಮಗಳು ಮಹಿಳೆಯರನ್ನು ನೇಮಿ ಸುವಲ್ಲಿ ಹಿಂಜರಿಯಬಹುದು ಎಂಬ ಆತಂಕವಿದೆ. ಮಹಿಳೆಯರು ಹೆಚ್ಚು ರಜೆ ತೆಗೆದುಕೊಳ್ಳುತ್ತಾರೆ ಎಂಬ ತಪ್ಪು ಕಲ್ಪನೆಗೆ ಬದಲು, ಅವರ ಕೌಶಲ ಮತ್ತು ನಿಷ್ಠೆಯನ್ನು ಗುರುತಿಸುವ ಮನಸ್ಥಿತಿಯನ್ನು ಬೆಳೆಸಬೇಕು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಜತೆಯಾಗಿ ಈ ನೀತಿಯ ನಿಜವಾದ ಉದ್ದೇಶವನ್ನು ಸ್ಪಷ್ಟವಾಗಿ ಸಾರಬೇಕು.
ಇದನ್ನು ‘ವಿಶ್ರಾಂತಿಯ ಹಕ್ಕು’ ಎಂದಲ್ಲ, ‘ಗೌರವದ ಹಕ್ಕು’ ಎಂದು ಪರಿಗಣಿಸುವ ಸಂವೇದನೆ ಅಗತ್ಯ. ಕಾರ್ಯಸ್ಥಳದಲ್ಲಿ ನಂಬಿಕೆ ಮತ್ತು ಸಹಕಾರದ ವಾತಾವರಣವಿದ್ದರೆ ಮಾತ್ರ ಈ ನೀತಿ ಯಶಸ್ವಿಯಾಗಲಿದೆ. ಋತುಚಕ್ರ ರಜೆಕೇವಲ ರಜೆ ನೀಡುವ ಕ್ರಮವಲ್ಲ; ಅದು ಮಹಿಳೆಯರ ದೈಹಿಕ, ಮಾನಸಿಕ ಮತ್ತು ವೃತ್ತಿ ಜೀವನದಲ್ಲಿ ಸಮತೋಲನ ಸಾಧಿಸಲು ತೆಗೆದುಕೊಳ್ಳಲಾದ ಪ್ರಗತಿಪರ ಹೆಜ್ಜೆ. ನಮ್ಮ ಸಮಾಜ ಹೆಚ್ಚು ಸಂವೇದನಾಶೀಲ ಮತ್ತು ಗೌರವಪೂರ್ಣವಾಗಲಿ.
-ಡಾ. ಎಚ್ .ಕೆ . ವಿಜಯಕುಮಾರ್, ಬೆಂಗಳೂರು





