ನಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ಈಗ ರಾಜ್ಯದ ಮಟ್ಟಿಗಂತೂ ಒಡೆದ ಹೋಗಿರುವ ಮನೆಯಾಗಿದೆ. ಆಂತರಿಕವಾಗಿ ಎರಡು ಬಣಗಳಾಗಿ ಒಡೆದುಹೋಗಿರುವ ಬಿಜೆಪಿಯಲ್ಲಿ ಎರಡೂ ಬಣಗಳ ನಡುವಿನ ಮುಸುಕಿನ ಗುದ್ದಾಟ ರಾಜ್ಯದಲ್ಲಿ ಬಿಜೆಪಿ ವರ್ಚಸ್ಸಿಗೆ ಕುತ್ತು ತಂದಿದೆ.
ಈ ಎರಡೂ ಬಣಗಳ ಪ್ರಮುಖರು ತಮ್ಮ ಪಕ್ಷದ ಆಂತರಿಕ ಸಮಸ್ಯೆಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಿರುವುದು ವಿರೋಧ ಪಕ್ಷಗಳಿಗೆ ಆಹಾರವಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರಂತೂ ಪಕ್ಷದ ಹೈಕಮಾಂಡ್‌ಗೂ ಡೋಟ್ ಕೇರ್ ಎನ್ನುವಂತೆ ವರ್ತಿಸುತ್ತಿದ್ದು, ಇವರ ವರ್ತನೆಗೆ ಬ್ರೇಕ್ ಹಾಕಲು ಹೈಕಮಾಂಡ್ ವಿಫಲವಾಗಿದೆಯೇನೋ ಅನಿಸುತ್ತದೆ. ಇಲ್ಲವೇ ಹೈಕಮಾಂಡ್ ಪರೋಕ್ಷವಾಗಿ ಯತ್ನಾಳ್‌ರ ಬೆಂಬಲಕ್ಕೆ ನಿಂತಿರಬಹುದು ಎಂಬ ಅನುಮಾನ ಶುರುವಾಗಿದೆ.
ಯತ್ನಾಳ್ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಬಹಿರಂಗ ವೇದಿಕೆಗಳಲ್ಲಿ ಹೇಳಿಕೆ ನೀಡುತ್ತಿದ್ದು, ನಿಮ್ಮ ರಹಸ್ಯವನ್ನೆಲ್ಲ ಬಿಚ್ಚಿಡುತ್ತೇನೆ ಎಂಬ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಹೈಕಮಾಂಡ್ ಮಧ್ಯ ಪ್ರವೇಶಿಸಿ ಈ ಒಳ ಜಗಳವನ್ನು ತಣ್ಣಗಾಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಭಾರಿ ದಂಡ ತೆರಬೇಕಾಗುತ್ತದೆ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.