Mysore
16
few clouds

Social Media

ಗುರುವಾರ, 22 ಜನವರಿ 2026
Light
Dark

ಓದುಗರ ಪತ್ರ: ಅಮೃತ್ ನಗರ ಯೋಜನೆ ವಿಫಲವಾಯಿತೆ?

ಓದುಗರ ಪತ್ರ

ಅಟಲ್ ಮಿಷನ್ ಫಾರ್ ರೆಜುನೇಷನ್ ಅಂಡ್ ಅರ್ಬನ್ ಟ್ರಾನ್ಸ್ ಫರ್ಮೇಷನ್ (ಅಮೃತ್) ನಗರ ಯೋಜನೆಯನ್ನು ೨೦೧೫ರಲ್ಲಿ ನಗರಗಳ ಶಾಶ್ವತ ಅಭಿವೃದ್ಧಿಗಾಗಿ ಭಾರತ ಸರ್ಕಾರ ಆರಂಭಿಸಿತು. ಎಲ್ಲ ನಗರ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ವ್ಯವಸ್ಥೆಯ ಸುಧಾರಣೆ, ಹಸಿರು ಪ್ರದೇಶಗಳ ವಿಸ್ತರಣೆ ಮತ್ತು ಮಳೆನೀರು ಸಂಗ್ರಹ ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಆದರೆ ವರದಿಗಳ ಪ್ರಕಾರ ಯೋಜನೆಯ ಅನುಷ್ಠಾನದಲ್ಲಿ ಅನೇಕ ಸಮಸ್ಯೆಗಳು ಎದುರಾಗಿ ಅದು ತನ್ನ ಗುರಿಯನ್ನು ಸಾಧಿಸಲು ವಿಫಲವಾಗಿದೆ.

ಯೋಜನೆ ವಿಫಲವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯದ ಕೊರತೆ, ಅನೇಕ ನಗರಗಳ ಸ್ಥಳೀಯ ಸಂಸ್ಥೆಗಳು ಸೂಕ್ತ ಯೋಜನೆ ರೂಪಿಸುವಲ್ಲಿ ವಿಫಲವಾಗಿರುವುದು, ಟೆಂಡರ್ ಪ್ರಕ್ರಿಯೆಯಲ್ಲಿ ಅಸ್ಪಷ್ಟತೆ, ತಾಂತ್ರಿಕ ಅನುಮೋದನೆಗಳ ವಿಳಂಬ ಮತ್ತು ನಿರ್ವಹಣೆಯ ಅಸಮರ್ಪಕತೆಗಳಿಂದ ಕಾಮಗಾರಿಗಳು ಸಂಪೂರ್ಣ ವಾಗಿ ನಿಂತುಹೋಗಿವೆ.

ಹಣಕಾಸಿನ ದುರ್ಬಳಕೆ ಮತ್ತು ಅಕ್ರಮಗಳೂ ಈ ಯೋಜನೆಯ ಮೇಲೆ ಕಳಂಕ ತಂದಿವೆ ಎನ್ನಲಾಗುತ್ತಿದೆ. ಕೆಲವು ನಗರಗಳಲ್ಲಿ ಬಿಲ್ ಪಾವತಿಗಳಲ್ಲಿ ಅಕ್ರಮಗಳು ನಡೆದಿದ್ದು, ನಿಜವಾದ ಕಾರ್ಯನಿರ್ವಹಣೆಗಿಂತ ರಾಜಕೀಯ ಪ್ರಭಾವ ಹೆಚ್ಚಾಗಿದೆ ಎಂಬುದು ಜನಜನಿತ. ನಾಗರಿಕರ ಭಾಗವಹಿಸುವಿಕೆಯ ಕೊರತೆಯೂ ಮತ್ತೊಂದು ಸಮಸ್ಯೆಯಾಗಿದೆ. ಜನರ ನಿಜವಾದ ಅಗತ್ಯಗಳನ್ನು ಪರಿಗಣಿಸದೆ ಯೋಜನೆ ರೂಪಿಸಿದದರಿಂದ ಈ ಯೋಜನೆ ಜನಹಿತಕಾರಿಯಾಗಿಲ್ಲ ಎನ್ನಲಾಗಿದೆ.

ಒಟ್ಟಾರೆ ನೋಡಿದರೆ, ಅಮೃತ್ ನಗರ ಯೋಜನೆ ಉದ್ದೇಶ ಒಳ್ಳೆಯದಾದರೂ ಅದರ ಅನುಷ್ಠಾನದಲ್ಲಿ ಕಂಡುಬಂದ ನಿರ್ಲಕ್ಷ್ಯ, ಅಸಮರ್ಪಕತೆ ಮತ್ತು ಪಾರದರ್ಶಕತೆಯ ಕೊರತೆಯಿಂದ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಯೋಜನೆಗಳು ಯಶಸ್ವಿಯಾಗಲು ಸರ್ಕಾರವು ಪಾರದರ್ಶಕ ನಿರ್ವಹಣೆ, ಸ್ಥಳೀಯ ಜನರ ಪಾಲ್ಗೊಳ್ಳುವಿಕೆ ಮತ್ತು ವ್ಯವಸ್ಥೆಗಳನ್ನು ಬಲಪಡಿಸಬೇಕು ಆಗ ಮಾತ್ರ ನಗರಾಭಿವೃದ್ಧಿಯ ನಿಜವಾದ ಅರ್ಥ ಸಾಕಾರವಾಗುತ್ತದೆ.

-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!