ಮೈಸೂರಿನ ತಾತಯ್ಯ ಸರ್ಕಲ್, ರಾಮಸ್ವಾಮಿ ವೃತ್ತ, ಸಿದ್ದಪ್ಪ ವೃತ್ತ, ದಾಸಪ್ಪ ವೃತ್ತ, ಮೆಟ್ರೋಪೋಲ್ ವೃತ್ತ ಸೇರಿದಂತೆ ವಿವಿಧೆಡೆ ಇರುವ ಸಿಗ್ನಲ್ ದೀಪಗಳು ಸಂಚಾರ ನಿಯಮದ ಮಾನದಂಡ ದಂತೆ ಕಾರ್ಯನಿರ್ವಹಿಸುತ್ತಿಲ್ಲ.
ಕೆಂಪು ಬಣ್ಣ-ವಾಹನ ನಿಲ್ಲುವಂತೆ, ಹಳದಿ ಬಣ್ಣ-ವಾಹನಗಳು ಹೊರಡಲು ಸಿದ್ಧವಾಗಿರುವುದಕ್ಕೆ, ಹಸಿರು ಬಣ್ಣ- ವಾಹನಗಳು ಹೊರಡುವಂತೆ ಸಂಚಾರ ನಿಯಮ ಸೂಚಿಸುತ್ತದೆ. ಆರ್‌ಟಿಓ ಕಚೇರಿಗಳಲ್ಲಿ ವಾಹನ ಚಾಲನಾ ಪರವಾನಗಿ ಪಡೆಯುವ ಮುನ್ನ ನಡೆಸುವ ಪರೀಕ್ಷೆ ಸಮಯದಲ್ಲಿ ಈ ಬಗ್ಗೆ ತಿಳಿಸುತ್ತಾರೆ. ಆದರೆ ಮೈಸೂರು ನಗರದ ಅನೇಕ ವೃತ್ತದ ಸಿಗ್ನಲ್ ದೀಪಗಳಲ್ಲಿ ಕೆಂಪು ಮತ್ತು ಹಸಿರು ಬಣ್ಣದ ಸಿಗ್ನಲ್ ದೀಪಗಳು ಮಾತ್ರ ಬಳಕೆಯಾಗುತ್ತಿದ್ದು, ಹಳದಿ ಬಣ್ಣದ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮೈಸೂರು ನಗರದ ಸಂಚಾರ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಎಲ್ಲಾ ವೃತ್ತಗಳಲ್ಲಿರುವ ಸಿಗ್ನಲ್‌ಗಳಲ್ಲಿ ಹಾಳಾಗಿರುವ ಹಳದಿ ಬಣ್ಣದ ಸಿಗ್ನಲ್ ದೀಪಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





