ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಒಳಗೂ ಹಾಗೂ ಹೊರಗೂ ಅವ್ಯವಸ್ಥೆ ಆಗಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ತೀವ್ರ ತೊಂದರೆ ಯಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು, ಮಕ್ಕಳ ವಾರ್ಡಿಗೆ ಬಂದು ತಪಾಸಣೆ ಮಾಡುವುದಿಲ್ಲ, ಯಾವುದೋ ಒಂದು ಕೊಠಡಿಯಲ್ಲಿ ಕುಳಿತಿರುತ್ತಾರೆ. ನವಜಾತ ಶಿಶುಗಳನ್ನೂ ವೈದ್ಯರಿದ್ದಲ್ಲಿಗೆ ತೆಗೆದು ಕೊಂಡು ಹೋಗಿ ತಪಾಸಣೆಗೊಳಪಡಿಸುವ ಸ್ಥಿತಿ ನಿರ್ಮಾಣ ವಾಗಿದೆ. ಹೆರಿಗೆಯಾದವರನ್ನೂ ವಿವಿಧ ಪರೀಕ್ಷೆಗಾಗಿ ವಿವಿಧ ಕೊಠಡಿಗಳಿಗೆ ಅಲೆದಾಡಿಸುತ್ತಾರೆ. ಇದರಿಂದ ಸಿಸೇರಿಯನ್ ಹೆರಿಗೆಯಾದವರಿಗಂತೂ ತುಂಬಾ ತೊಂದರೆಯಾಗುತ್ತಿದೆ. ನಿಯಮಾನುಸಾರ ವೈದ್ಯರು ರೋಗಿಗಳಿದ್ದಲ್ಲಿಗೇ ಬಂದು ತಪಾಸಣೆ ಮಾಡಬೇಕು ಎಂಬ ಅರಿವೂ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.
ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರಿಗೆ ಉಳಿದುಕೊಳ್ಳಲು ಸೂಕ್ತ ಜಾಗವಿಲ್ಲದೆ ಆಸ್ಪತ್ರೆಯ ಆವರಣದಲ್ಲೇ ರಾತ್ರಿ ವೇಳೆ ಚಳಿಯಲ್ಲಿ ಮಲಗುವುದು ಅನಿವಾರ್ಯವಾಗಿದೆ. ರಾತ್ರಿ ಇಲಿ, ಹೆಗ್ಗಣಗಳ ಕಾಟ ಒಂದೆಡೆಯಾದರೆ ದುಷ್ಕರ್ಮಿಗಳು ಚಾಕು ತೋರಿಸಿ ಹಣ ಮೊಬೈಲ್ ದೋಚುತ್ತಿರುವುದು ಮತ್ತೊಂದೆಡೆಯಾಗಿದೆ.
ಆಸ್ಪತ್ರೆಯ ಆವರಣದಲ್ಲಿ ವಿದ್ಯುತ್ ದೀಪಗಳು ಇಲ್ಲದೆ ದುಷ್ಕರ್ಮಿಗಳಿಗೆ ಅನುಕೂಲವಾಗಿದೆ. ಆಸ್ಪತ್ರೆಗೆ ಬರುವವರು ಬಹುತೇಕ ಗ್ರಾಮೀಣ ಪ್ರದೇಶದ ಬಡ ಮತ್ತು ಮಧ್ಯಮವರ್ಗದವರೇ ಆಗಿರುವುದರಿಂದ ಅವರ ಬಳಿ ಇದ್ದ ಹಣ, ಮೊಬೈಲ್ ದೋಚಿದರೆ ಯಾರು ಹೊಣೆ ?
ಇನ್ನು ಮುಂದಾದರೂ ಆಸ್ಪತ್ರೆಯ ಆಡಳಿತಾಧಿಕಾರಿಗಳು ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು. ಆಸ್ಪತ್ರೆಯ ಆವರಣದಲ್ಲಿ ರಾತ್ರಿ ವೇಳೆ ಪೊಲೀಸರನ್ನು ನಿಯೋಜಿಸಬೇಕು. ರೋಗಿಗಳ ಸಂಬಂಧಿಕರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





