ಮೈಸೂರು ಅಭಿವೃದ್ಧಿ ಪ್ರಾಧಿಕಾರ ದಸರಾ ಮಹೋತ್ಸವದ ಬಳಿಕ ೩೦೦ ನಿವೇಶನಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲು ಸಜ್ಜಾಗಿದೆ. ಹರಾಜಿಗೆ ಗೊತ್ತುಪಡಿಸಿರುವ ನಿವೇಶನಗಳಿಗೆ ಕನಿಷ್ಠ ಹಾಗೂ ಗರಿಷ್ಟ ಮೊತ್ತ ನಿಗದಿಪಡಿಸುವುದು ಸೂಕ್ತ. ಹರಾಜಿನಲ್ಲಿ ನಿಗದಿಪಡಿಸಿದ ಗರಿಷ್ಟ ಮೊತ್ತಕ್ಕೆ ಒಂದು ನಿವೇಶನಕ್ಕೆ ಒಬ್ಬರಿಗಿಂತ ಹೆಚ್ಚು ಪ್ರತಿ ಸ್ಪರ್ಧಿಗಳು ಮುಂದೆ ಬಂದರೆ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡುವುದು ಉತ್ತಮ.
ಕಳೆದ ತಿಂಗಳು ೨ ಕೋಟಿ ರೂಪಾಯಿಗೆ ನಿವೇಶನ ಹರಾಜಾಗಿದ್ದು, ಮೈಸೂರಿನ ಪ್ರತಿಯೊಬ್ಬ ನಾಗರಿಕರನ್ನೂ ಹುಬ್ಬೇರಿಸುವಂತೆ ಮಾಡಿತ್ತು. ಸಾಮಾನ್ಯ ಜನತೆಗೆ ಸೂರು ಸಿಗಬೇಕು ಎಂಬ ಆಶಯದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದ ಈ ಸಂಸ್ಥೆ ಎತ್ತ ಸಾಗುತ್ತಿದೆ ಎಂಬುದಕ್ಕೆ ಉತ್ತರವೇ ಇಲ್ಲದಂತಾಗಿದೆ. ಎಂಡಿಎ ಖಾಸಗಿ ಗೃಹ ನಿರ್ಮಾಣ ಸಂಸ್ಥೆಗಳಿಗೆ ಹೆಚ್ಚಿನ ಒತ್ತು ಕೊಡುವ ಬದಲು, ನೇರವಾಗಿ ಜನರಿಂದ ಜಮೀನನ್ನು ಖರೀದಿ ಮಾಡಿ, ಹಲವಾರು ವರ್ಷಗಳಿಂದ ಚಾತಕ ಪಕ್ಷಿಯಂತೆ ನಿವೇಶನಗಳಿಗಾಗಿ ಅರ್ಜಿಯನ್ನು ಹಾಕಿ ಕಾಯುತ್ತಿರುವ ಸಾಮಾನ್ಯ ನಾಗರಿಕರಿಗೆ ಹಂಚಿಕೆ ಮಾಡಿದರೆ ನಿವೇಶನದ ಭಾಗ್ಯ ನೀಡಿದಂತಾಗುತ್ತದೆ. ಇನ್ನು ಮುಂದಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಕುರಿತುಕ್ರಮ ವಹಿಸಲಿ
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು





