ಮೈಸೂರಿನ ಡಿ.ಸುಬ್ಬಯ್ಯ ರಸ್ತೆಯಲ್ಲಿ ಕೆಲವು ಕಡೆ ರಸ್ತೆ ಕುಸಿದು ಗುಂಡಿ ನಿರ್ಮಾಣವಾಗಿದ್ದು, ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರು ಆಕಸ್ಮಿಕವಾಗಿ ಗುಂಡಿಯತ್ತ ಸಾಗಿದರೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಈ ರಸ್ತೆಯ ನಡುವೆ ಒಳಚರಂಡಿ ಪೈಪ್ ಲೈನ್ ಹಾಕಿದ್ದು, ಆ ಸಂದರ್ಭದಲ್ಲಿ ನಡೆಸಿರುವ ಅಸಮರ್ಪಕ ಕಾಮಗಾರಿಯಿಂದಾಗಿ ಈ ರಸ್ತೆಯಲ್ಲಿ ಹಲವಾರು ಬಾರಿ ರಸ್ತೆ ಕುಸಿತ ಉಂಟಾಗಿದೆ. ಆದರೂ ಮಹಾನಗರ ಪಾಲಿಕೆಯವರು ನೆಪಮಾತ್ರಕ್ಕೆ ಗುಂಡಿ ಮುಚ್ಚುವುದೇ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಲು ಕಾರಣವಾಗಿದೆ.
ಮಹಾನಗರ ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಗಿದು ವರ್ಷಗಳೇ ಕಳೆದಿವೆ. ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡರು ಇತ್ತ ಸುಳಿಯುವುದೇ ಇಲ್ಲ. ಹಾಗಾದರೆ ಸಾರ್ವಜನಿಕರ ಸಮಸ್ಯೆಗಳನ್ನು ಯಾರು ಪರಿಹರಿಸಬೇಕು ಎನ್ನುವ ಪ್ರಶ್ನೆ ಎದುರಾಗಿದೆ. ಈಗಲಾದರೂ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗುಂಡಿ ಬಿದ್ದಿರುವ ರಸ್ತೆ ಯನ್ನು ಸರಿಪಡಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಚಂದ್ರಶೇಖರ್, ಡಿ.ಸುಬ್ಬಯ್ಯ ರಸ್ತೆ, ಮೈಸೂರು





