Mysore
19
few clouds

Social Media

ಸೋಮವಾರ, 04 ನವೆಂಬರ್ 2024
Light
Dark

ಓದುಗರ ಪತ್ರ: ಕೀಳುಮಟ್ಟದ ರಾಜಕಾರಣ ತರವಲ್ಲ

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರ ಸಾವಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಣ ಎಂಬ ಅನುಮಾನವಿದೆ, ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದನ್ನು ಕೀಳುಮಟ್ಟದ ರಾಜಕಾರಣ ಎಂತಲೇ ಹೇಳಬಹುದು. ಬೈರತಿ ಸುರೇಶ್ ಮುಡಾ ಹಗರಣದ ಆರೋಪಿಯಾಗಿ ದ್ದಾರೆ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಸಂಬಂಧಿಸಿದ ಕಡತಗಳನ್ನು ಸುಟ್ಟು ಹಾಕಿದ್ದಾರೆ ಎಂದು ಯಡಿಯೂರಪ್ಪ ಆರೋಪ ಮಾಡಿದ ಬೆನ್ನಲ್ಲೇ ಬೈರತಿ ಸುರೇಶ್ ಈ ಹೇಳಿಕೆ ನೀಡುವುದು ಸರಿಯೇ? ಯಡಿಯೂರಪ್ಪ ನವರ ಪತ್ನಿ ನಿಧನರಾಗಿ ೨೦ ವರ್ಷಗಳು ಕಳೆದಿವೆ. ಅದನ್ನು ಈಗ ಕೆದಕಿ ಅವಹೇಳನವಾಗಿ ಮಾತನಾಡುವುದು ಸರಿಯಲ್ಲ.

ಇತ್ತೀಚೆಗೆ ರಾಜಕಾರಣಿಗಳ ವರ್ತನೆಯೇ ಬದಲಾಗಿದೆ. ತಮ್ಮ ಎದುರಾಳಿ ಪಕ್ಷದ ನಾಯಕರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿಕೊಂಡು ಸದಾ ಅವರ ಕುಟುಂಬದ ಬಗ್ಗೆಯೇ ಅವಹೇಳನವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವುದು ರಾಜಕಾರಣಿಗಳಿಗೆ ಪರಿಪಾಟವಾಗಿಹೋಗಿದೆ. ಅವರ ಈ ನಡವಳಿಕೆಗಳು ಜನರಿಗೆ ಬೇಸರ ಮೂಡಿಸುತ್ತಿದ್ದು, ಜನಪ್ರತಿನಿಧಿಗಳೆನಿಸಿಕೊಂಡವರು ಕೀಳುಮಟ್ಟದ ರಾಜಕಾರಣವನ್ನು ಬಿಡಬೇಕಿದೆ.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

 

Tags: