ಗಣೇಶ ಹಬ್ಬದ ನಿಮಿತ್ತ ಬೀದಿ ಬೀದಿಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಆದರೆ ಗಣೇಶ ಮೂರ್ತಿ ವಿಸರ್ಜನೆ ವೇಳೆ ವಿದ್ಯುತ್ ಅವಘಡಗಳಿಂದ ಹಾಗೂ ಕಾಲು ಜಾರಿ ನದಿಗೆ ಬಿದ್ದು ಪ್ರತಿವರ್ಷ ಅನೇಕರು ಸಾವಿಗೀಡಾಗುತ್ತಿದ್ದಾರೆ. ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಗಣೇಶ ಮೂರ್ತಿ ವಿಸರ್ಜನೆ ವೇಳೆ ಈಜು ಬರುವವರು ಮಾತ್ರ ನೀರಿಗಿಳಿಯ ಬೇಕು. ಈಜು ಬಾರದವರು ನೀರಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಗಣೇಶ ಮೂರ್ತಿ ವಿಸರ್ಜನೆ ನಡೆಯುವ ಕೆರೆ, ಬಾವಿ ಮೊದಲಾದ ಸ್ಥಳಗಳಲ್ಲಿ ಈಜು ತಜ್ಞರನ್ನು ನಿಯೋಜಿಸವುದು ಅಗತ್ಯ. ಮೆರವಣಿಗೆ ಸಂದರ್ಭದಲ್ಲಿ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸಲಾಗುತ್ತದೆ. ಈ ಸಂದರ್ಭದಲ್ಲಿ ಪಟಾಕಿ ಬಾಕ್ಸ್‌ಗಳನ್ನು ಸಂಗ್ರಹಿಸುವಾಗ ವಿದ್ಯುತ್ ಸಂಪರ್ಕವಾಗಲಿ, ಬೆಂಕಿಯ ಕಿಡಿಯಾಗಲಿ ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ಮಹಾನಗರ ಪಾಲಿಕೆಯವರು ಷರತ್ತುಗಳನ್ನು ವಿಧಿಸುವಂತೆ ಗಣೇಶ ಮೂರ್ತಿಗಳ ವಿಸರ್ಜನೆಯ ಸಂದರ್ಭದಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈ ಸಂದರ್ಭದಲ್ಲಿ ನಿಗಾವಹಿಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಅನಾಹುತಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಎಂ.ಎಸ್.ಉಷಾ ಪ್ರಕಾಶ್, ಎಸ್. ಬಿ.ಎಂ.ಕಾಲೋನಿ, ಮೈಸೂರು





