ಪ್ರಮುಖ ಹಬ್ಬದ ದಿನಗಳಂದು ಮತ್ತು ಇತರೆ ವಿಶೇಷ ದಿನಗಳಲ್ಲೂ, ರಾತ್ರಿ ೧೧ ಗಂಟೆಯ ನಂತರ ಪಟಾಕಿ ಸಿಡಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಮೈಸೂರು ನಗರದ ಅನೇಕ ಬಡಾವಣೆಗಳ ಸರ್ಕಲ್‌ಗಳಲ್ಲಿ ಕೆಲವು ರಾಜಕೀಯ ಪಕ್ಷಗಳ ನಾಯಕರ ಅಭಿಮಾನಿಗಳು ಮತ್ತು ಕಾರ್ಯಕರ್ತರು ತಮ್ಮ ಜನ್ಮದಿನದ ನೆಪ ಮಾಡಿಕೊಂಡು ರಾತ್ರಿ ೧೧ರ ನಂತರ ಭಯಂಕರ ಸದ್ದು ಮಾಡುವ, ಆಕಾಶಕ್ಕೆ ಚಿಮ್ಮುವ ಪಟಾಕಿಗಳನ್ನು ಹಚ್ಚುವ ಮೂಲಕ ಹಿರಿಯ ನಾಗರಿಕರಿಗೆ, ಚಿಕ್ಕಮಕ್ಕಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ಇದೊಂದು ರೀತಿಯಲ್ಲಿ ಅನಾಗರಿಕ ವರ್ತನೆಯಾಗಿದೆ. ಇವರನ್ನು ನೋಡಿ ಹಲವರು ರಾತ್ರಿ ೧೧ ಗಂಟೆಯ ನಂತರ ಪಟಾಕಿ ಸಿಡಿಸುವ ಪರಿಪಾಠವನ್ನು ಆರಂಭಿಸಿದ್ದಾರೆ. ಆಯಾ ಬಡಾವಣೆಗಳ ವ್ಯಾಪ್ತಿಯ ಪೊಲೀಸರು ರಾತ್ರಿ ೧೧ ಗಂಟೆಯ ನಂತರ ಪಟಾಕಿ ಸಿಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು



