ಮೈಸೂರಿನ ದೇವರಾಜ ಮಾರುಕಟ್ಟೆ ಮುಖ್ಯದ್ವಾರದ ಎಡಭಾಗದಲ್ಲಿ ಎರಡು ಟೀ ಅಂಗಡಿಗಳಿದ್ದು, ಇಲ್ಲಿ ಬೀಡಿ, ಸಿಗರೇಟು ಸೇದುವವರು ಹೊಗೆ ಬಿಡುವುದರಿಂದ ಮಾರುಕಟ್ಟೆಗೆ ಬರುವವರಿಗೆ ಅದರಲ್ಲೂ ಹೆಂಗಸರು ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿದೆ. ಪಾನ್ ಮಸಾಲ ತಿಂದು ಎಲ್ಲೆಂದರಲ್ಲಿ ಉಗುಳುವುದರಿಂದ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ.
ಈ ಸ್ಥಳದಲ್ಲಿ ವ್ಯಾಪಾರ ಮಾಡುವ ಕೆಲವರು ಧೂಮಪಾನ ಮಾಡಿ ಅದೇ ಕೈಗಳಿಂದ ಹೂ , ಹಣ್ಣು, ತರಕಾರಿ, ಸೇರಿದಂತೆ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಸಾರ್ವಜನಿಕರ ಆರೋಗ್ಯ ಹದಗೆಡುವ ಸಾಧ್ಯತೆಯಿರುತ್ತದೆ. ಕೂಡಲೇ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು, ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಂಡು ಮಾರುಕಟ್ಟೆಯ ಬಳಿ ಬೀಡಿ, ಸಿಗರೇಟು, ಪಾನ್ ಮಸಾಲ ಪದಾರ್ಥಗಳನ್ನು ಮಾರಾಟ ಮಾಡದಂತೆ ನಿಷೇಧಿಸಬೇಕು.
ಕೆಲವು ವ್ಯಾಪಾರಸ್ಥರು ವ್ಯಾಪಾರ ಮಾಡುವಾಗ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುವ ಸಮಯದಲ್ಲಿ ಧೂಮಪಾನ, ಮದ್ಯಪಾನ ಮಾಡಿ ವ್ಯಾಪಾರ ವಹಿವಾಟು ನಡೆಸುವವರಿಗೆ ದಂಡ ವಿಧಿಸಬೇಕು. ಹಾಗೆಯೇ ಅಂಗಡಿಯ ಪರವಾನಗಿಯನ್ನು ರದ್ದು ಮಾಡಬೇಕಾಗಿದೆ.
-ನಾಗೇಶ್ , ಮಾನಸಗಂಗೋತ್ರಿ ಮೈಸೂರು





