ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಎಚ್. ಡಿ. ಕೋಟೆ ತಾಲ್ಲೂಕಿನ ಡಿ. ಬಿ. ಕುಪ್ಪೆ ವಲಯದ ಬಳ್ಳೆ ಆನೆ ಶಿಬಿರಕ್ಕೆ ಮಹೇಂದ್ರ ಹಾಗೂ ಲಕ್ಷಿ ಸಾಕಾನೆಗಳನ್ನು ಕರೆತಂದಿರುವುದು ತಾಲ್ಲೂಕಿನ ಜನತೆಗೆ ಸಂತಸವನ್ನುಂಟು ಮಾಡಿದೆ.
ಮಹಾರಾಜರ ಕಾಲದಿಂದಲೂ ಆನೆ ಖೆಡ್ಡಾಗಳಿಗೆ ಖ್ಯಾತಿ ಪಡೆದಿದ್ದ ಬಳ್ಳೆ ಆನೆ ಶಿಬಿರವು ಕಳೆದ ೧೦ ತಿಂಗಳುಗಳಿಂದ ಯಾವುದೇ ಆನೆಗಳಿಲ್ಲದೆ ಆಕರ್ಷಣೆ ಕಳೆದುಕೊಂಡಿತ್ತು. ಇದೇ ಆನೆ ಶಿಬಿರದಲ್ಲಿ ಪಳಗಿದ್ದ ರಾಜೇಂದ್ರ, ದ್ರೋಣ, ಐರಾವತ, ಅರ್ಜುನ ಆನೆಗಳು ದಸರಾದಲ್ಲಿ ಅಂಬಾರಿ ಹೊತ್ತು ತಾಲ್ಲೂಕಿಗೆ ಕೀರ್ತಿ ತಂದಿದ್ದವು. ಆದರೆ ಕಳೆದ ಡಿಸೆಂಬರ್‌ನಲ್ಲಿ ಹಾಸನದ ಸಕಲೇಶಪುರ ಸಮೀಪ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಅರ್ಜುನ ಆನೆ ಸಾವನ್ನಪ್ಪಿತ್ತು.
೯ ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವು ಆತನ ಅಪಾರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಅರ್ಜು ನನ ಸಾವಿನ ಬಳಿಕ ಬಳ್ಳೆ ಶಿಬಿರದಲ್ಲಿ ಯಾವುದೇ ಆನೆಗಳಿಲ್ಲದೆ ಶಿಬಿರ ಕಳೆಗುಂದಿದ್ದರಿಂದ ಬಳ್ಳೆ ಆನೆ ಶಿಬಿರ ಬರಿ ನೆನಪಿನಲ್ಲಿ ಉಳಿಯಬಹುದು ಎಂಬ ಆತಂಕ ಜನರಲ್ಲಿತ್ತು. ಸದ್ಯ ಈಗ ಈ ಶಿಬಿರಕ್ಕೆ ಮಹೇಂದ್ರ ಮತ್ತು ಲಕ್ಷಿ ಆನೆಗಳು ಬಂದಿರುವುದು ಜೀವಕಳೆ ಬಂದಂತಾಗಿದೆ. ಅರಣ್ಯ ಇಲಾಖೆಯು ದುಬಾರೆ ಆನೆ ಶಿಬಿರದ ಮಾದರಿಯಲ್ಲಿಯೇ ಈ ಶಿಬಿರವನ್ನೂ ಒಂದು ಪ್ರವಾಸಿ ತಾಣವಾಗಿ ರೂಪಿಸಬೇಕಿದೆ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್. ಡಿ. ಕೋಟೆ ತಾ.