ಸರಗೂರು ತಾಲ್ಲೂಕಿನ ಮುಳ್ಳೂರಿನ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ ಅವರು ಹುಲಿ ದಾಳಿಗೆ ಬಲಿಯಾಗಿರುವುದು ದುರಂತ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಅಮಾಯಕ ರೈತರು ಬಲಿಯಾಗುತ್ತಿದ್ದಾರೆ.
ಬಡಗಲಪುರ ರೈತರೊಬ್ಬರ ಮೇಲೆ ಕೆಲವು ದಿನಗಳ ಹಿಂದೆ ಹುಲಿದಾಳಿ ಮಾಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆ ಘಟನೆ ಮಾಸುವ ಮೊದಲೇ ಹುಲಿ ದಾಳಿ ಮಾಡಿ ಕೊಂದಿರುವುದು ಆತಂಕ ಮೂಡಿಸುವಂತಿದೆ. ಸರಗೂರು ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರು ಭಯಭೀತರಾಗಿ ಬದುಕನ್ನು ನಡೆಸುತ್ತಿದ್ದಾರೆ. ತಮ್ಮ ಜಮೀನುಗಳಿಗೆ ಕೃಷಿ ಚಟುವಟಿಕೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾದರೆ ಅವರ ಬದುಕಿನ ಬಂಡಿ ಸಾಗುವುದು ಹೇಗೆ ? ಈ ಭಾಗದ ರೈತರ ಕಷ್ಟಗಳಿಗೆ ಕ್ಷೇತ್ರದ ಶಾಸಕರಾಗಲಿ, ಅರಣ್ಯ ಇಲಾಖೆಯಾಗಲಿ, ಸರ್ಕಾರವಾಗಲಿ ಸ್ಪಂದಿಸದಿರುವುದು ನೋವಿನ ಸಂಗತಿಯಾಗಿದೆ.
ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಾಡಂಚಿನ ಗ್ರಾಮಗಳಲ್ಲಿ ಈ ರೀತಿಯ ಘಟನೆಗಳಾಗದಂತೆ ಎಚ್ಚರಿಕೆ ವಹಿಸಬೇಕು. ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟಿರುವ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು.
-ಎನ್.ಪಿ. ಪರಶಿವಮೂರ್ತಿ, ನಂಜೀಪುರ, ಸರಗೂರು ತಾ.





