ಸಂಜೆ ನ್ಯಾಯಾಲಯಗಳನ್ನು ನಡೆಸುವ ಸಂಬಂಧ ರಾಜ್ಯದ ಉಚ್ಚ ನ್ಯಾಯಾಲಯ ರಾಜ್ಯಾದ್ಯಂತ ಇರುವ ವಕೀಲರ ಸಂಘಗಳ ಅಭಿಪ್ರಾಯ ಕೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಬೆಂಗಳೂರು ವಕೀಲರ ಸಂಘ ಸೇರಿದಂತೆ ರಾಜ್ಯದ ಹಲವಾರು ವಕೀಲರ ಸಂಘಗಳು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತ ಪಡಿಸಿವೆ ಎಂದು ತಿಳಿದು ಬಂದಿದೆ. ಸದ್ಯ ನ್ಯಾಯಾಲಯಗಳು ಬೆಳಿಗ್ಗೆ ೧೧.೦೦ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತಿವೆ. ಬಹುತೇಕ ವಕೀಲರು ಇಲ್ಲಿನ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುವುದರಿಂದ ಸಂಜೆ ನ್ಯಾಯಾಲಯಗಳಲ್ಲಿ ಅವರು ಹಾಜರಾಗಲು ಸಾಧ್ಯವಾಗದೇ ಇರಬಹುದು.
ಅದೇ ರೀತಿ ದೂರದ ಊರುಗಳಿಂದ ಕಕ್ಷಿದಾರರು ಸಂಜೆ ನ್ಯಾಯಾಲಯಕ್ಕೆ ಹಾಜರಾಗಬೇಕಾದರೆ, ಅವರು ನ್ಯಾಯಾಲಯ ಇರುವ ಸ್ಥಳದಲ್ಲಿ ಒಂದು ದಿನ ತಂಗಬೇಕಾಗಬಹುದು. ಅದಕ್ಕಾಗಿ ಅವರು ಅನಗತ್ಯ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ಕೆಲವು ಬಡ ಕಕ್ಷಿದಾರರಿಗೆ ಇದು ಹೊರೆಯಾಗಿ ಪರಿಣಮಿಸಬಹುದು. ಈಗಾಗಲೇ ಲೋಕ ಅದಾಲತ್ ಮುಂತಾದ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ, ಸಂಜೆ ನ್ಯಾಯಾಲಯ ಕಾರ್ಯಸಾಧುವಲ್ಲ.
ಬೆಳಗಿನ ನ್ಯಾಯಾಲಯಗಳ ಕಾರ್ಯ ಕಲಾಪಗಳಿಗೆ ಹಾಜರಾಗಲು ಸಾಧ್ಯವಾಗದ ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಅನುಕೂಲವಾಗಬಹುದು ಎಂಬ ಒಂದು ಅಂಶವನ್ನು ಹೊರತು ಪಡಿಸಿದರೆ, ಸಂಜೆ ನ್ಯಾಯಾಲಯಗಳಿಂದ ಹೆಚ್ಚಿನ ರೀತಿಯ ಪ್ರಯೋಜನ ಆಗುವುದಿಲ್ಲ.
– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





