ಕೆಲ ಗಣ್ಯರು ನಿಧನರಾದಾಗ ದುಃಖವಾಗುತ್ತದೆ. ಇನ್ನೂ ಕೆಲ ಗಣ್ಯರನ್ನು ಕಳೆದುಕೊಂಡಾಗ ದುಃಖದ ಕೋಡಿಯೇ ಹರಿಯುತ್ತದೆ; ದೇಶಾದ್ಯಂತ ಮೌನ ಹೆಪ್ಪುಗಟ್ಟುತ್ತದೆ. ಹೀಗೆ ದೇಶವೇ ಮೌನವಾಗುವಂತೆ ಮಾಡಿದ್ದು ರತನ್ ಟಾಟಾ ನಿಧನ. ಶಿಸ್ತು, ಸಮಯ ಪ್ರಜ್ಞೆ, ಮಾನವೀಯ ಮೌಲ್ಯಗಳ ಜತೆಗೆ ಸರಳತೆಯನ್ನೂ ಮೈಗೂಡಿಸಿಕೊಂಡು, ಯಾವುದೇ ವಿವಾದಗಳಿಗೆ ಗುರಿಯಾಗದೆ ತಮ್ಮ ಔದ್ಯೋಗಿಕ ಸಾಮ್ರಾಜ್ಯವನ್ನು ಕಟ್ಟಿದವರು ರತನ್ ಟಾಟಾ. ವಿದೇಶಗಳಿಗೂ ತಮ್ಮ ಸಂಸ್ಥೆಯನ್ನು ವಿಸ್ತರಿಸಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಜತೆಗೆ ಕಂಪೆನಿ ಗಳಿಸಿದ ಲಾಭದ ಬಹುಪಾಲನ್ನು ಸಮಾಜಕ್ಕೇ ಕೊಡುಗೆಯಾಗಿ ನೀಡಿದ್ದಾರೆ. ಇಂತಹ ಮೇರು ವ್ಯಕ್ತಿತ್ವ ಹೊಂದಿದ್ದ ರತನ್ ಟಾಟಾರ ನಿರ್ಗಮನ ದೇಶದ ಔದ್ಯೋಗಿಕ ವಲಯಕ್ಕೆ ಮಾತ್ರವಲ್ಲದೇ ದಾನ-ಧರ್ಮ ಮಾಡಬೇಕು ಎಂಬ ಪರಿಕಲ್ಪನೆಗೂ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಇಂತಹ ವ್ಯಕ್ತಿ ಜೀವಂತವಿದ್ದಾಗ ‘ಭಾರತ ರತ್ನ’ ನೀಡಿ ಗೌರವಿಸಬೇಕಿತ್ತು. ಅದ್ಯಾವುದನ್ನೂ ಮಾಡದ ಜನಪ್ರತಿನಿಧಿಗಳು ಈಗ ಅವರ ನಿಧನಕ್ಕೆ ಕಂಬನಿ ಮಿಡಿಯುವುದು ಹಾಸ್ಯಾಸ್ಪದ. ಸರ್ಕಾರ ಅವರಿಗೆ ಮರಣೋತ್ತರವಾಗಿಯಾದರೂ ‘ಭಾರತ ರತ್ನ’ ನೀಡಿ ಗೌರವಿಸಲಿ. -ರಮಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು